ADVERTISEMENT

ಮುದ್ದೇಬಿಹಾಳ | ಗುಂಡಿ ಮುಚ್ಚಿಸಿ, ಅಪಾಯ ತಪ್ಪಿಸಿ: ಗ್ರಾಮಸ್ಥರ ಆಗ್ರಹ

ಕುಡಿಯುವ ನೀರಿನ ಪೈಪ್‌ಲೈನ್ ದುರಸ್ತಿ: ರಸ್ತೆ ಪಕ್ಕದಲ್ಲಿ ಅಗೆದ ಗುಂಡಿಗಳು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 8:52 IST
Last Updated 13 ಫೆಬ್ರುವರಿ 2024, 8:52 IST
<div class="paragraphs"><p>ಮುದ್ದೇಬಿಹಾಳ ತಾಲ್ಲೂಕಿನ ಕೋಳೂರು ಗ್ರಾಮ ಸಂಪರ್ಕಿಸುವ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ದುರಸ್ತಿಗೆಂದು ಅಗೆದು ಗುಂಡಿ ಹಾಗೆ ಬಿಟ್ಟಿರುವುದು</p></div>

ಮುದ್ದೇಬಿಹಾಳ ತಾಲ್ಲೂಕಿನ ಕೋಳೂರು ಗ್ರಾಮ ಸಂಪರ್ಕಿಸುವ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ದುರಸ್ತಿಗೆಂದು ಅಗೆದು ಗುಂಡಿ ಹಾಗೆ ಬಿಟ್ಟಿರುವುದು

   

ಮುದ್ದೇಬಿಹಾಳ: ಕುಡಿಯುವ ನೀರಿನ ಪೈಪ್‌ಲೈನ್ ಒಡೆದಿದ್ದಕ್ಕೆ ಅದನ್ನು ದುರಸ್ತಿಗೊಳಿಸಲು ಎರಡು ಕಿ.ಮೀ ಅಂತರದಲ್ಲಿ 25ಕ್ಕೂ ಹೆಚ್ಚು ಗುಂಡಿಗಳನ್ನು ತೋಡಲಾಗಿದ್ದು, ಗುಂಡಿಗಳನ್ನು ಮುಚ್ಚದಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

ತಾಲ್ಲೂಕಿನ ಕೋಳೂರು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಮುದ್ನಾಳ ಹಳ್ಳದ ತಾಂಡಾ ಇದ್ದು, ಹಳ್ಳದ ಬಳಿಯಿಂದ ಗುಂಡಿಗಳನ್ನು ತೆಗೆಯಲಾಗಿದೆ. 25ಕ್ಕೂ ಹೆಚ್ಚು ಕಡೆಗಳಲ್ಲಿ ಮುದ್ದೇಬಿಹಾಳದಿಂದ ಕೋಳೂರು ಕಡೆಗೆ ಹೋಗುವ ರಸ್ತೆಯ ಬಲ ಭಾಗದಲ್ಲಿ ಗುಂಡಿ ಅಗೆಯಲಾಗಿದೆ. ಇದರಿಂದ ಬೈಕ್ ಸವಾರರು, ಟ್ರ್ಯಾಕ್ಟರ್, ಕಾರುಗಳಲ್ಲಿ ಸಂಚರಿಸುವವರಿಗೆ ತೀವ್ರ ತೊಂದರೆಯಾಗಿದೆ. ತಾಲ್ಲೂಕಿನ ಗ್ರಾಮೀಣ ರಸ್ತೆಯಾಗಿರುವ ಕಾರಣ ರಸ್ತೆ ಕಿರಿದಾಗಿದ್ದು, ಎದುರು ಬದುರು ವಾಹನಗಳು ಬಂದರೆ ಅಪಘಾತ ಸಂಭವಿಸುವ ಸಾಧ್ಯತೆ ಇದೆ.

ADVERTISEMENT

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಆರ್.ಎಸ್.ಹಿರೇಗೌಡರ ಅವರನ್ನು ಸಂಪರ್ಕಿಸಿದಾಗ, ನಮ್ಮ ಇಲಾಖೆಯ ಅಡಿಯಲ್ಲಿ ಕೈಗೊಂಡಿರುವ ಕಾಮಗಾರಿ ಅಲ್ಲ. ನಮ್ಮ ಇಲಾಖೆಯ ಸಿಬ್ಬಂದಿ ಕಳೆದ ನಾಲ್ಕು ದಿನಗಳ ಹಿಂದೆಯೇ ಈ ರಸ್ತೆಯಲ್ಲಿ ಗುಂಡಿ ಅಗೆದಿದ್ದಾರೆ ಎಂದು ನನ್ನ ಗಮನಕ್ಕೆ ತಂದಿದ್ದಾರೆ. ಪಂಚಾಯಿತಿ ಅಧಿಕಾರಿಗಳು ಕೈಗೊಂಡಿರುವ ಸಾಧ್ಯತೆ ಇದೆ ಎಂದು ಹೇಳಿದರು.

‘ಕೋಳೂರು ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಅಗೆದಿರುವ ಗುಂಡಿಗಳಿಂದ ಬೈಕ್ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಗುಂಡಿಗಳನ್ನು ಪಂಚಾಯಿತಿ ಅಧಿಕಾರಿಗಳು ಶೀಘ್ರ ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಕೋಳೂರು ಗ್ರಾಮಸ್ಥ ಷಣ್ಮುಖ ಗೋಲಗೇರಿ ಆಗ್ರಹಿಸಿದ್ದಾರೆ.

‘ಮುದ್ನಾಳ ಹಳ್ಳದಿಂದ ಕೋಳೂರು ತಾಂಡಾಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಭಾರೀ ವಾಹನಗಳ ಓಡಾಟದಿಂದ ಪೈಪ್‌ಲೈನ್ ಒಡೆದಿದ್ದು ನೀರು ಬರುತ್ತಿಲ್ಲ ಎಂದು ತಾಂಡಾದ ನಿವಾಸಿಗಳ ದೂರು ಇತ್ತು. ಅದನ್ನು ಸರಿಪಡಿಸಲು ಗುಂಡಿಗಳನ್ನು ಅಗೆಯಲಾಗಿದೆ. ಪೈಪ್‌ಲೈನ್ ದುರಸ್ತಿ ಆಗಿದ್ದು ಗುಂಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಆನಂದ ಹಿರೇಮಠ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.