ವಿಜಯಪುರ: ತೆಲಂಗಾಣಕ್ಕೆ ಆಲಮಟ್ಟಿ, ನಾರಾಯಣಪುರ ಜಲಾಶಯದಿಂದ 1.27 ಟಿಎಂಸಿ ಅಡಿ ನೀರನ್ನು ಹರಿಬಿಟ್ಟ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಶುಕ್ರವಾರ ನಗರದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿ ದಹಿಸಿದರು.
‘ನಾಡಿನ ರೈತರು ಸಂಕಷ್ಟದಲ್ಲಿ ಇರುವಾಗ ಮತ್ತು ಬೇಸಿಗೆಯಲ್ಲಿ ನೀರಿನ ಸಂಕಷ್ಟ ತಲೆದೋರುವ ಸಾಧ್ಯತೆ ಇರುವಾಗ, ತೆಲಂಗಾಣಕ್ಕೆ ನೀರು ಬಿಟ್ಟಿರುವುದು ಅಕ್ಷಮ್ಯ. ಇದು ರೈತ ವಿರೋಧಿ ನಡೆ. ತೆಲಂಗಾಣಕ್ಕೆ ನೀರು ಹರಿಸುವುದನ್ನು ಸರ್ಕಾರ ತಕ್ಷಣವೇ ನಿಲ್ಲಿಸಬೇಕು’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸಿದರು.
‘ರಾಜ್ಯದ ರೈತರ ಬದುಕು ಕಿತ್ತುಕೊಂಡು ತೆಲಂಗಾಣ ರಾಜ್ಯಕ್ಕೆ ನೀರು ಹರಿಬಿಟ್ಟಿರುವ ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
‘ನೀರು ಹರಿಸುವುದನ್ನು ಜಿಲ್ಲೆಯ ರೈತರ ಹಿತದೃಷ್ಟಿಯಿಂದ ತಕ್ಷಣವೇ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇವೆ’ ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.