
ನಾಲತವಾಡ: ಉತ್ತರ ಕರ್ನಾಟಕ ಭಾಗದ ಜನರ ಗಟ್ಟಿ ಆಹಾರ ಎಂದೇ ಹೆಸರು ಪಡೆದಿರುವ ಬಿಳಿ ಜೋಳ ಬಿತ್ತನೆ ಕ್ಷೇತ್ರ ಕಡಿಮೆಯಾಗಿದೆ.
‘ಬಿಜಾಪುರದ ಬಿಳಿಜೋಳ’ವು ನೆರೆ ರಾಜ್ಯಗಳಲ್ಲೂ ಹೆಸರುವಾಸಿ. ಆದರೆ, ದಶಕದಿಂದ ಹಿಂಗಾರು ಹಂಗಾಮಿನ ಬಿಳಿಜೋಳದ ಬಿತ್ತನೆ ಪ್ರದೇಶ ಜಿಲ್ಲೆಯಲ್ಲಿ ಕ್ಷೀಣಿಸಿದೆ.
2019–20ರಲ್ಲಿ ಮುದ್ದೇಬಿಹಾಳ ತಾಲ್ಲೂಕು ವ್ಯಾಪ್ತಿಯಲ್ಲಿ 9054 ಹೆಕ್ಟೇರ್‌ನಲ್ಲಿ ಬಿಳಿ ಜೋಳದ ಬಿತ್ತನೆ ನಡೆದಿತ್ತು. 2023–24 ನೇ ಸಾಲು ಹೊರತುಪಡಿಸಿದರೆ ವರ್ಷದಿಂದ ವರ್ಷಕ್ಕೆ ಇದರ ಪ್ರಮಾಣ ಕಡಿಮೆಯಾಗುತ್ತಲೇ ಬಂದಿದೆ. ಪ್ರಸ್ತುತ ಹಂಗಾಮಿನಲ್ಲಿ 2030 ಹೆಕ್ಟೇರ್ ಆಸುಪಾಸು ಮಾತ್ರ ಬಿತ್ತನೆಯಾಗಿದೆ ಎಂಬುದನ್ನು ತಾಲ್ಲೂಕು ಕೃಷಿ ಇಲಾಖೆಯ ಅಂಕಿ–ಅಂಶಗಳು ದೃಢೀಕರಿಸುತ್ತವೆ.
‘ಪ್ರಸ್ತುತ ಹಿಂಗಾರು ಹಂಗಾಮಿನಲ್ಲಿ 5100 ಹೆಕ್ಟೇರ್‌ನಲ್ಲಿ ಬಿಳಿಜೋಳ ಬಿತ್ತನೆ ಗುರಿ ಇತ್ತು. ಈವರೆಗೂ ಶೇ 50ರಷ್ಟೂ ಗುರಿ ಸಾಧಿಸಲಾಗಿಲ್ಲ. ಹಿಂದಿನ ವರ್ಷ ಸಹ 351 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಸಾಧ್ಯವಾಗಿತ್ತು’ ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಸುರೇಶ ಭಾವಿಕಟ್ಟಿ ತಿಳಿಸಿದರು.
ಯಂತ್ರೋಪಕರಣಗಳ ಕೊರತೆ:
‘ಜೋಳಕ್ಕಿಂತ ತೊಗರಿ ಕೊಯ್ಲು ಹಾಗೂ ರಾಶಿ ಮಾಡುವುದು ಸುಲಭ. ಹೀಗಾಗಿ ಮುಂಗಾರು ಹಂಗಾಮಿನಲ್ಲಿ ನಿಗದಿತ ಗುರಿಗಿಂತ ಅಧಿಕ ತೊಗರಿ ಬಿತ್ತನೆ ಆಗಿತ್ತು. ಅತಿವೃಷ್ಟಿಯಿಂದ ತೊಗರಿ ಬೆಳೆ ಹಿಂಗಾರು ಹಂಗಾಮು ಪ್ರಾರಂಭದ ದಿನಗಳಲ್ಲಿ ಹಾಳಾದ ಹಿನ್ನೆಲೆಯಲ್ಲಿ ಬಿಳಿಜೋಳ ಹಾಗೂ ಕಡಲೆ ಬಿತ್ತನೆಯತ್ತ ರೈತರು ಮುಖ ಮಾಡಿದರು. ಜೋಳಕ್ಕಿಂತ ಕಡಲೆ ಕೊಯ್ಲು ಹಾಗೂ ರಾಶಿ ಮಾಡುವುದು ಸುಲಭ. ಹೀಗಾಗಿ ಹಿಂಗಾರು ಹಂಗಾಮಿನಲ್ಲಿ ಕಡಲೆ ಬಿತ್ತನೆಗೇ ರೈತರು ಆದ್ಯತೆ ನೀಡಿದ್ದಾರೆ. ಇದರ ಪರಿಣಾಮವಾಗಿ ಬಿಳಿಜೋಳದ ಬಿತ್ತನೆ ಪ್ರದೇಶ ಕಡಿಮೆಯಾಗುತ್ತಿದೆ’ ಎನ್ನುತ್ತಾರೆ ಭೀಮಣ್ಣ ಗುರಿಕಾರ.
ಈ ಹಂಗಾಮಿನ ಬಿಳಿಜೋಳದ ಅವಧಿ ನಾಲ್ಕು ತಿಂಗಳಾದರೆ, ಕಡಲೆ ಮೂರು ತಿಂಗಳ ಅವಧಿಯದ್ದು. ಜೋಳದ ಕೃಷಿಗೆ ಅತ್ಯಾಧುನಿಕ ಯಂತ್ರೋಪಕರಣ ಇಂದಿಗೂ ಲಭ್ಯವಿಲ್ಲ. ಕೊಯ್ಲಿಗೆ ಕೂಲಿ ಕಾರ್ಮಿಕರನ್ನೇ ಅವಲಂಬಿಸಬೇಕು. ರಾಶಿ ಮಾಡಲೂ ಸಮರ್ಪಕ ಯಂತ್ರವಿಲ್ಲ. ಅಕಾಲಿಕ ಮಳೆ ಸುರಿದರೆ ಬಿಳಿ ಜೋಳ ಕಪ್ಪಾಗಿ ಉಪಯೋಗಕ್ಕೆ ಬಾರದಂತಾಗುತ್ತದೆ.
ಸಕಾಲಕ್ಕೆ ಕೃಷಿ ಕಾರ್ಮಿಕರು ಸಿಗದಿದ್ದರೆ ಮಣ್ಣು ಪಾಲಾಗುವ ಸಾಧ್ಯತೆ ಹೆಚ್ಚು. ಆದರೆ, ಕಡಲೆ ಬೆಳೆಯಲ್ಲಿ ಅತ್ಯಾಧುನಿಕ ಯಂತ್ರೋಪಕರಣ ಬಳಸಿ ಒಂದೇ ಸಲಕ್ಕೆ ಕೊಯ್ಲು–ರಾಶಿ ಮಾಡಲು ಅನುಕೂಲವಾಗುತ್ತದೆ. ಹೀಗಾಗಿ ಬಹುತೇಕ ರೈತರು ಅದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಅವರು ವಿಶ್ಲೇಷಿಸುತ್ತಾರೆ.
ಕಡಲೆಯಿಂದ ಹೆಚ್ಚು ಆದಾಯ:
‘ಮಾರುಕಟ್ಟೆಯಲ್ಲಿ ಪ್ರಸ್ತುತ ಕಡಲೆ ಧಾರಣಿ ಪ್ರತಿ ಕ್ವಿಂಟಲ್‌ಗೆ ₹5,650 ಇದ್ದರೆ, ಬಿಳಿಜೋಳಕ್ಕೆ ₹2,730 (ಕ್ವಿಂಟಲ್‌ಗೆ)ದ ಆಸುಪಾಸಿದೆ. ಕಡಲೆ ವಾಣಿಜ್ಯ ಬೆಳೆಯಲ್ಲದಿದ್ದರೂ, ಹೆಚ್ಚು ಆದಾಯ ತಂದುಕೊಡುತ್ತದೆ ಎಂಬ ಕಾರಣದಿಂದ ಅದನ್ನು ಬೆಳೆಯುವವರ ಸಂಖ್ಯೆ ಹೆಚ್ಚುತ್ತಿದೆ.
ಇದರಿಂದ ಸಹಜವಾಗಿಯೇ ಜೋಳದ ಬಿತ್ತನೆ ಪ್ರದೇಶ ಕಡಿಮೆಯಾಗುತ್ತಿದೆ’ ಎಂದು ಬಿತ್ತನೆ ಬೀಜೋತ್ಪಾದನಾ ಉದ್ಯಮಿ ಮಹಾಂತೇಶ ಗಂಗನಗೌಡ್ರ ತಿಳಿಸಿದರು.
ಬಿಳಿಜೋಳದ ಖರ್ಚೂ ಹುಟ್ಟುತ್ತಿಲ್ಲ. ಈ ಹಿಂದೆ ದನ–ಕರುಗಳ ಮೇವಿಗಾಗಿ ಜೋಳ ಬೆಳೆಯುವುದು ಅನಿವಾರ್ಯವಾಗಿತ್ತು. ಇದೀಗ ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಕಡಲೆಯತ್ತ ಹೊರಳಿದ್ದೇವೆ.ಮಲ್ಲಿಕಾರ್ಜುನ ಬೂದಿಹಾಳ, ಪ್ರಗತಿಪರ ರೈತ ಆಲೂರು
‘ಈ ಹಿಂದೆ ಪ್ರತಿಯೊಂದು ಮನೆಯಲ್ಲೂ ಜಾನುವಾರುಗಳು ಇರುತ್ತಿದ್ದವು. ಆಹಾರ ಧಾನ್ಯಕ್ಕಾಗಿ ಬೆಳೆಯುವುದಕ್ಕಿಂತಲೂ ಕಣಕಿಗಾಗಿಯೇ ಯಥೇಚ್ಛವಾಗಿ ಬಿಳಿಜೋಳ ಬಿತ್ತುತ್ತಿದ್ದರು. ಜಾನುವಾರುಗಳ ಸಂಖ್ಯೆ ಕುಸಿಯುತ್ತಿದ್ದಂತೆ ಸಹಜವಾಗಿಯೇ ಜೋಳ ಬಿತ್ತನೆ ಪ್ರದೇಶವೂ ಕುಸಿಯುತ್ತಿದೆ’ ಎಂದು ಕೃಷಿ ಇಲಾಖೆಯ ಅಧಿಕಾರಿ ಸುರೇಶ ಭಾವಿಕಟ್ಟಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.