ADVERTISEMENT

ಯಲಗೂರು | ಪವನಸುತನ ಸನ್ನಿಧಿಗೆ ಹರಿದುಬಂದ ಭಕ್ತಸಾಗರ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 4:49 IST
Last Updated 8 ಫೆಬ್ರುವರಿ 2026, 4:49 IST
ಯಲಗೂರ ಕಾರ್ತಿಕೋತ್ಸವ ಅಂಗವಾಗಿ ಹರಿದಾಸ ಸಾಹಿತ್ಯ ಸಂಗೀತ ವೇದಿಕೆಯಲ್ಲಿ ಖ್ಯಾತ ಸಂಗೀತ ಕಲಾವಿದೆ ಸಂಗೀತಾ ಕಾಖಂಡಕಿ ಅವರ ದಾಸವಾಣಿ ಶೋತೃಗಳ ಗಮನಸೆಳೆಯಿತು
ಯಲಗೂರ ಕಾರ್ತಿಕೋತ್ಸವ ಅಂಗವಾಗಿ ಹರಿದಾಸ ಸಾಹಿತ್ಯ ಸಂಗೀತ ವೇದಿಕೆಯಲ್ಲಿ ಖ್ಯಾತ ಸಂಗೀತ ಕಲಾವಿದೆ ಸಂಗೀತಾ ಕಾಖಂಡಕಿ ಅವರ ದಾಸವಾಣಿ ಶೋತೃಗಳ ಗಮನಸೆಳೆಯಿತು   

ಯಲಗೂರು (ಆಲಮಟ್ಟಿ): ಸುಕ್ಷೇತ್ರ ಯುಲಗೂರ ಆಂಜನೇಯನ ಕಾರ್ತಿಕೋತ್ಸವದ ಜಾತ್ರೆಗೆ ನಾಡಿನ ವಿವಿಧೆಡೆಯಿಂದ ಬಂದ ಭಕ್ತರ ಭಕ್ತಿ ಪರವಶದ ಮಧ್ಯೆ ಶನಿವಾರ ನಸುಕಿನ ಜಾವ ಚಾಲನೆ ದೊರೆಯಿತು.

ಪವನಸುತನ ಆರಾಧನೆ, ಪಲ್ಲಕ್ಕಿ ಉತ್ಸವ ಸೇರಿದಂತೆ ನಾನಾ ಧಾರ್ಮಿಕ ಕೈಂಕರ್ಯದ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಭಕ್ತರು ಸಾಕ್ಷಿಯಾಗಿದ್ದರು.

ಬೆಳಿಗ್ಗೆ ಆಂಜನೇಯ ಮೂರ್ತಿಗೆ ಪಂಚಾಮೃತ ಅಭಿಷೇಕ ನಡೆಯಿತು. ಪವಮಾನ ಹೋಮ, ಮಹಾ ಪೂಜೆ ಜರುಗಿತು. ದೇವಸ್ಥಾನದ ಆವರಣದಲ್ಲಿ ನಿರಂತರ ಹೋಮ ಹವನಗಳು ನಡೆದವು.

ADVERTISEMENT

ಜಿಲ್ಲೆಯ ನಾನಾ ಕಡೆಯಿಂದ ಆಗಮಿಸಿದ್ದ ಭಜನಾ ಮಂಡಳಿಗಳು, ಕೋಲಾಟಗಳು ಆಂಜನೇಯನ ಭಕ್ತಿ ಗೀತೆ ಹಾಡುತ್ತಾ, ಯಲಗೂರೇಶನ ಚಿತ್ರ ಹೊತ್ತು ಇಡೀ ಗ್ರಾಮದಾದ್ಯಂತ ಶೋಭಾಯಾತ್ರೆ ಜರುಗಿತು. ಯಲಗೂರದ ವಿದ್ಯಾರ್ಥಿಗಳಿಂದ ವಿಷ್ಣು ಸಹಸ್ರನಾಮ ಪಾರಾಯಣ, ವಿಜಯಪುರದ ಪ್ರಸನ್ನಾಚಾರ್ಯ ಕಟ್ಟಿ ಅವರ ತಂಡದಿಂದ ಸುಮಧ್ವಿಜಯ ಪಾರಾಯಣವೂ ಜರುಗಿತು.

ಭಕ್ತರು ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ, ಅಲ್ಲಿಂದ ದೇವಸ್ಥಾನದವರೆಗೆ ದೀಡ್‌ ನಮಸ್ಕಾರ ಹಾಕಿ ನಾನಾ ರೀತಿಯ ಹರಕೆಗಳನ್ನು ತೀರಿಸಿದರು. ನಸುಕಿನಿಂದಲೇ ಯಲಗೂರ ಸುತ್ತಮುತ್ತಲಿನ ಗ್ರಾಮದಿಂದ ಜನ ನಡೆದುಕೊಂಡೇ ಕಾರ್ತಿಕೋತ್ಸವಕ್ಕೆ ಆಗಮಿಸುತ್ತಿರುವುದು ಕಂಡು ಬಂತು. ಭಕ್ತಾದಿಗಳಿಗೆ ರಸ್ತೆ ಹಾಗೂ ದೇವಸ್ಥಾನದ ಆವರಣದ ನಾನಾ ಕಡೆ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಅಭಿಮಾನಿ ಬಳಗ ಹಾಗೂ ಯಲಗೂರದ ಚೆನ್ನಿಗಾವಿ ಶೆಟ್ರು  ಅಲ್ಪೋಪಹಾರದ ವ್ಯವಸ್ಥೆ ಮಾಡಿದ್ದರು.

ಯಲಗೂರೇಶನಿಗೆ ಶನಿವಾರ ವಿಶೇಷ ಅಲಂಕಾರ ಮಾಡಲಾಗಿತ್ತು
ಸುಕ್ಷೇತ್ರ ಯಲಗೂರದಲ್ಲಿ ಯಲಗೂರೇಶನ ಕಾರ್ತಿಕೋತ್ಸವಕ್ಕೆ ಅದ್ಧೂರಿ ಚಾಲನೆಯ ದಿನ ಸಹಸ್ರಾರು ಭಕ್ತರು ದೇವಸ್ಥಾನದ ಪ್ರಾಂಗಣದಲ್ಲಿ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು

ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ಹರಿದಾಸ ಸಾಹಿತ್ಯ ಸಂಗೀತ ವೇದಿಕೆ ಏರ್ಪಡಿಸಲಾದ ಅಹೋರಾತ್ರಿ ಸಂಗೀತ ಕಾರ್ಯಕ್ರಮ ನಸುಕಿನ ಜಾವ ಬಸವರಾಜ ಭಜಂತ್ರಿ ಅವರ ಶಹನಾಯಿ ವಾದನದಿಂದ ಆರಂಭಗೊಂಡಿತು. ದೇವಸ್ಥಾನ ಸಮಿತಿಯ ಅಧ್ಯಕ್ಷ ಅನಂತ ಓಂಕಾರ ಅನ್ನದಾಸೋಹ ಸಮಿತಿಯ ಅಧ್ಯಕ್ಷ ಶ್ಯಾಮ ಪಾತರದ ನಾರಾಯಣ ಒಡೆಯರ ನರಸಿಂಹ ಆಲೂರ ಇದ್ದರು.  ದಾಸವಾಣಿ ಶೋತೃಗಳ ಗಮನಸೆಳೆಯಿತು. ರುದ್ರೇಶ ಭಜಂತ್ರಿ ಅವರ ಶಹನಾಯಿ ಸೌಮ್ಯ ಮೊಹರೆ ನೃತ್ಯ ಬೆಂಗಳೂರಿನ ಹರಿದಾಸ ಸಂಘದ ನಾಗರಾಜಾಚಾರ್ಯ ನೇತೃತ್ವದಲ್ಲಿ ನೃತ್ಯ ಗಮನಸೆಳೆಯಿತು.   ದಿಂಡಿನ ಸ್ಪರ್ಧೆ: ಜಾತ್ರೆಯ ಅಂಗವಾಗಿ ದಿಂಡಿನ ರೇಸ್ ಸ್ಪರ್ಧೆಗಳಿಗೆ ಅನ್ನದಾಸೋಹ ಸಮಿತಿಯ ಅಧ್ಯಕ್ಷ ಶ್ಯಾಮ ಪಾತ್ರದ ಚಾಲನೆ ನೀಡಿದರು. ಬಿ.ವೈ. ಅವಟಗೇರ ಎಂ.ಕೆ. ಮುತ್ತಣ್ಣವರ ಮಹಾಂತೇಶ ಡೆಂಗಿ ಡಾ ಮಹಾದೇವ ಹೂಗಾರ ಬಸವರಾಜ ಹೂಗಾರ ಇದ್ದರು. ಆರೋಗ್ಯ ತಪಾಸಣೆ: ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಯ ತಜ್ಞ ವೈದ್ಯರು ದೇವಸ್ಥಾನದ ಮಂಗಲ ಕಾರ್ಯಾಲಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ವಿವಿಧ ವಿಭಾಗದ ತಜ್ಞ ವೈದ್ಯರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.