ADVERTISEMENT

ಆಮೆಗತಿಯಲ್ಲಿ ಬಾಗಲಕೋಟೆ–ಕುಡಚಿ ರೈಲು ಮಾರ್ಗ: ಹದಿನಾರು ವರ್ಷದಲ್ಲಿ ಶೇ 38 ಪ್ರಗತಿ

ಬಸವರಾಜ ಹವಾಲ್ದಾರ
Published 1 ಮಾರ್ಚ್ 2026, 2:16 IST
Last Updated 1 ಮಾರ್ಚ್ 2026, 2:16 IST
   

ಬಾಗಲಕೋಟೆ: ಕೇಂದ್ರ ಬಜೆಟ್‌ನಲ್ಲಿ ಘೋಷಣೆಯಾಗಿ ರಾಜ್ಯದ ಆರ್ಥಿಕ ಸಹಾಯದೊಂದಿಗೆ ನಿರ್ಮಾಣಗೊಳ್ಳತ್ತಿರುವ ಬಾಗಲಕೋಟೆ–ಕುಡಚಿ ರೈಲ್ವೆ ಮಾರ್ಗದ ಕಾಮಗಾರಿ ಆಮೆಗತಿಯಲ್ಲಿ ನಡೆದಿದೆ.

ಬಾಗಲಕೋಟೆಯಿಂದ ಕುಡಚಿವರೆಗಿನ 142 ಕಿ.ಮೀ. ಉದ್ದದ ರೈಲ್ವೆ ಮಾರ್ಗದ ಕಾಮಗಾರಿಗೆ 2011ರಲ್ಲಿ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇಲ್ಲಿಯವರೆಗೆ 38 ಕಿ.ಮೀ. ಮಾತ್ರ ಪೂರ್ಣಗೊಂಡಿದೆ. 104 ಕಿ.ಮೀ. ಕಾಮಗಾರಿ ಬಾಕಿ ಇದೆ.

ಮಾರ್ಗ ನಿರ್ಮಾಣಕ್ಕೆ ಬೇಕಾದ ಭೂಸ್ವಾಧೀನದ ವೆಚ್ಚ ಹಾಗೂ ಕಾಮಗಾರಿಯ ಶೇ 50ರಷ್ಟು ವೆಚ್ಚ ಭರಿಸುವ ವಾಗ್ದಾನದೊಂದಿಗೆ ಕೇಂದ್ರದ ಸಹಯೋಗದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಭೂಸ್ವಾಧೀನ ಮಾಡಿಕೊಡಬೇಕಾದ ರಾಜ್ಯದ ಅಧಿಕಾರಿಗಳ ವಿಳಂಬದಿಂದಾಗಿ ಕಾಮಗಾರಿಗೆ ವೇಗ ಸಿಗುತ್ತಿಲ್ಲ.

ADVERTISEMENT

ಈ ಮಾರ್ಗ ಪೂರ್ಣಗೊಂಡರೆ ಸಿಮೆಂಟ್‌, ಲೈಮ್‌ಸ್ಟೋನ್‌ ಸಾಗಾಣಿಕೆ ಸರಳವಾಗಲಿದ್ದು, ವಾಣಿಜ್ಯ ಚಟುವಟಿಕೆಗೆ ಉತ್ತೇಜನ ಸಿಗಲಿದೆ. ರಾಜ್ಯದ ನಿರ್ಲಕ್ಷದಿಂದಾಗಿ ಈ ಮಾರ್ಗ ನಿರ್ಮಾಣದ ಕಾರ್ಯವು ನಿರೀಕ್ಷಿತ ಪ್ರಮಾಣದಲ್ಲಿ ಸಾಗಿಲ್ಲ.

ರೈಲ್ವೆ ಮಾರ್ಗ ನಿರ್ಮಿಸಲು ಒಟ್ಟು 2,460 ಎಕರೆ ಭೂಮಿ ಬೇಕಿದೆ. ಬಹುತೇಕ ಭೂಮಿ ಸ್ವಾಧೀನಗೊಂಡಿದೆ. ಆದರೆ, ಸ್ವಾಧೀನ ಪಡಿಸಿಕೊಂಡು ಭೂಮಿಯ ಮಾಲೀಕರು ನ್ಯಾಯಾಲಯಗಳ ಮೊರೆ ಹೋಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಭೂಸ್ವಾಧೀನಕ್ಕೆ ₹365 ಕೋಟಿ, ಬೆಳಗಾವಿ ಜಿಲ್ಲೆಗೆ ₹160 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.

142 ಕಿ.ಮೀ. ಮಾರ್ಗದ ಕಾಮಗಾರಿಗೆ 2010–11ರಲ್ಲಿ ₹986 ಕೋಟಿ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಈಗ ಅದರ ಮೊತ್ತ 3,128 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.ಇಲ್ಲಿಯವರೆಗೆ ಶೇ38 ರಷ್ಟು ಭೌತಿಕ ಪ್ರಗತಿಯಾಗಿದ್ದರೆ, ಶೇ32ರಷ್ಟು ಆರ್ಥಿಕ ಪ್ರಗತಿಯಾಗಿದೆ. ಈಗಾಗಲೇ ಪೂರ್ಣಗೊಂಡಿರುವ ಮಾರ್ಗದಲ್ಲಿ ಗೂಡ್ಸ್ ರೈಲು ಸಂಚಾರ ಆರಂಭಿಸಿದೆ.

ದಾದನಹಟ್ಟಿ–ಯಾದವಾಡ ನಡುವಿನ 15 ಕಿ.ಮೀ. ಮಾರ್ಗದಲ್ಲಿ ಬರುವ ಒಂಬತ್ತು ಸಣ್ಣ ಸೇತುವೆ, ಏಳು ಕೇಳಸೇತುವೆ, ಒಂದು ಬೃಹತ್ ಸೇತುವೆ ನಿರ್ಮಾಣ ಕಾರ್ಯ ಆರಂಭಗೊಂಡಿದೆ.

ಯಾದವಾಡ–ಜಮಖಂಡಿ ನಡುವೆ ಶೇ96ರಷ್ಟು, ಜಮಖಂಡಿ–ಜಗದಾಳ ನಡುವೆ ಶೇ93ರಷ್ಟು, ಜಗದಾಳ– ಹಾರೂಗೇರಿ ನಡುವಿನ ಶೇ91ರಷ್ಟು ಹಾಗೂ ಹಾರೂಗೇರಿ–ಕುಡಚಿ ನಡುವೆ ಶೇ90ರಷ್ಟು ಭೂಸ್ವಾಧೀನ ಆಗಿದೆ. ಲೋಕಾಪುರದಿಂದ ಯಾದವಾಡವರೆಗಿನ 21 ಕಿ.ಮೀ ಮಾರ್ಗದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ.

ಕೆಲ ತಿಂಗಳುಗಳ ಹಿಂದೆ ರೈಲ್ವೆ ಮಾರ್ಗ ವೀಕ್ಷಣೆಗೆ ಬಂದಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, 2027ರ ಹೊತ್ತಿಗೆ ಯೋಜನೆ ಪೂರ್ಣಗೊಳಿಸಲಾಗುವುದು ಎಂದಿದ್ದರು. ಆದರೆ, ಈಗ ನಡೆದಿರುವ ಕಾಮಗಾರಿ ವೇಗ ನೋಡಿದರೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.

ಈಗಾಗಲೇ ಸರಕು ಸಾಗಣೆಗೆಯ ಗೂಡ್ಸ್ ರೈಲು ಸಂಚಾರ ಆರಂಭಗೊಂಡಿದೆ. ಆದರೆ,2025 ಮಾರ್ಚ್‌ನಿಂದ ಆರಂಭಗೊಳ್ಳಲಿದೆ ಎಂದು ಸಚಿವರೇ ಹೇಳಿದ್ದ ಪ್ಯಾಸೆಂಜರ್ ರೈಲು ಸಂಚಾರ ಆರಂಭಗೊಂಡಿಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಯಾಣಿಕರ ರೈಲು ಸಂಚಾರ ಕೂಡ ಆರಂಭಿಸಬೇಕು ಎಂಬ ಕೂಗಿಗೆ ಮನ್ನಣೆ ಸಿಕ್ಕಿಲ್ಲ.

ಬಾಗಲಕೋಟೆ–ಲೋಕಾಪುರ ನಡುವೆ ಡೆಮೊ ರೈಲು ಆರಂಭಿಸುವ ಘೋಷಣೆ ಮಾಡಲಾಗಿದೆ. ಆದರೆ, ಇನ್ನೂ ಆರಂಭವಾಗಿಲ್ಲ. ಬಾಗಲಕೋಟೆ–ಲೋಕಾಪುರ ಮಾತ್ರ ಆರಂಭಿಸಿದರೆ ಉಪಯೋಗವಿಲ್ಲ. ದೂರದ ಊರುಗಳಿಗೂ ಸಂಪರ್ಕ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ಆಗ್ರಹಿಸಿದರು.

ಬಾಗಲಕೋಟೆ–ಮೈಸೂರು (ಬಸವ ಎಕ್ಸ್‌ಪ್ರೆಸ್‌) ರೈಲನ್ನು ಲೋಕಾಪುರ ರೈಲು ನಿಲ್ದಾಣದಿಂದಲೇ ಆರಂಭಿಸಬೇಕು. ಇದರಿಂದ ಲೋಕಾಪುರ ಹಾಗೂ ಸುತ್ತಲಿನ ಊರುಗಳ ಜನರಿಗೆ ಅನುಕೂಲವಾಗುತ್ತದೆ. ಬೆಂಗಳೂರು ಆಸ್ಪತ್ರೆ, ವಿವಿಧ ಪುಣ್ಯಕ್ಷೇತ್ರ, ಉದ್ಯೋಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತೆರಳುವವರಿಗೆ ಅನುಕೂಲ. ಮೈಸೂರಿನಿಂದ ಬಾಗಲಕೋಟೆಗೆ ಬೆಳಿಗ್ಗೆ 11.15ಕ್ಕೆ ರೈಲು ಬರುತ್ತದೆ. ಮಧ್ಯಾಹ್ನ 2.20ಕ್ಕೆ ಮರಳಿ ಹೋಗುತ್ತದೆ. ಆ ನಡುವೆ 3 ಗಂಟೆ ಸಮಯವಿರುವುದರಿಂದ ಲೋಕಾಪುರದವರೆಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ವಂದೇ ಭಾರತ್‌ಗೂ ಬೇಡಿಕೆ

ಬಾಗಲಕೋಟೆ: ಬೆಂಗಳೂರಿನಿಂದ ಹುಬ್ಬಳ್ಳಿವರೆಗೆ ಸಂಚರಿಸುತ್ತಿರುವ ವಂದೇ ಭಾರತ್‌ ರೈಲನ್ನು ವಿಜಯಪುರವರೆಗೂ ವಿಸ್ತರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುನಿಲಗೌಡ ಪಾಟೀಲ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ.

ಸಂಸದ ಪಿ.ಸಿ. ಗದ್ದಿಗೌಡರ ಸಹ, ರೈಲ್ವೆ ರಾಜ್ಯ ಸಚಿವ ಸೋಮಣ್ಣ ಅವರಿಗೆ ಭೇಟಿಯಾಗಿ ಚರ್ಚಿಸಿದ್ದು, ಕೂಡಲೇ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಕೋರಿದ್ದಾರೆ.

ವಿವಿಧ ರೈಲಿಗೆ ಮನವಿ

ಕುಡಚಿ-ಬಾಗಲಕೋಟೆ ರೈಲು ಮಾರ್ಗವನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸುವುದರ ಜೊತೆಗೆ ವಿಜಯಪುರ-ತಿರುಪತಿ ನಿತ್ಯ ರೈಲು ಆರಂಭಿಸಬೇಕು ಆ ಮೂಲಕ ವಿಜಯಪುರ, ಬಾಗಲಕೋಟೆ ಜಿಲ್ಲೆಯ ಲಕ್ಷಾಂತರ ಜನರ ಆಧ್ಯಾತ್ಮಿಕ ಕೇಂದ್ರಕ್ಕೆ ಭೇಟಿ ನೀಡಲು ಅನುಕೂಲ ಕಲ್ಪಿಸಬೇಕು ಎಂದು ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ ರೈಲ್ವೆ ಸಚಿವರಿಗೆ ಕೋರಿದ್ದಾರೆ.

ಪ್ರಸ್ತಾವಿತ ಲೋಕಪುರ-ಧಾರವಾಡ ಮಾರ್ಗಕ್ಕೆ ಅನುಮೋದನೆ ನೀಡಬೇಕು. ಪಂಢರಪುರ -ಬೆಂಗಳೂರು ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ರೈಲಿನ ವೇಗ ಹೆಚ್ಚಿಸಬೇಕು. ಹುಬ್ಬಳ್ಳಿ-ಹಜರತ್ ನಿಜಾಮುದ್ದೀನ್ ರೈಲಿನ ವೇಗ ಹೆಚ್ಚಿಸಬೇಕು. ವಾರದಲ್ಲಿ ಐದು ದಿನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಬಾಗಲಕೋಟೆ–ಕುಡಚಿ ಮಾರ್ಗಕ್ಕಾಗಿ ಪಾದಯಾತ್ರೆ ಸೇರಿದಂತೆ ಎಲ್ಲ ಹೋರಾಟ ಮಾಡಲಾಗಿದೆ. ಆದರೂ, ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ
ಕುತ್ಬುದ್ದೀನ್ ಖಾಜಿ, ಅಧ್ಯಕ್ಷ, ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.