
ಶ್ರೀರಂಗಪಟ್ಟಣ: ಸ್ಮಶಾನಕ್ಕೆ ಕಾಲಿಡಲು ಹಿಂಜರಿಯುವವರೇ ಹೆಚ್ಚು ಇರುವಾಗ ಇಲ್ಲೊಬ್ಬ ವ್ಯಕ್ತಿ ತಮ್ಮೂರಿನ ಸ್ಮಶಾನದಲ್ಲಿ ತೋಟ ಬೆಳೆಸುವ ಕಾಯಕ ಮಾಡುತ್ತಿದ್ದಾರೆ. ಮೌನ ಮನೆ ಮಾಡಿದ್ದ ಸ್ಮಶಾನದಲ್ಲೀಗ ಹಕ್ಕಿಗಳ ಕಲರವ ಕೇಳಿಬರುತ್ತಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಸ್ಮಶಾನದಲ್ಲಿ ಗ್ರಾಮದ ಶಿವಣ್ಣ ಎಂಬುವರು ಬಗೆ ಬಗೆಯ ಗಿಡ ಮರಗಳನ್ನು ಬೆಳೆಸುತ್ತಿದ್ದಾರೆ. ಒಂದು ಎಕರೆ ವಿಸ್ತೀರ್ಣ ಇರುವ ಸ್ಮಶಾನದ ಒಳಗೆ ವಿವಿಧ ಜಾತಿಯ ಮರಗಳು ಮತ್ತು ಹಣ್ಣಿನ ಗಿಡಗಳನ್ನು ನಾಲ್ಕಾರು ವರ್ಷಗಳಿಂದ ನೆಟ್ಟು ಪೋಷಿಸುತ್ತಿದ್ದಾರೆ.
ಇಲ್ಲಿ ತೆಂಗು, ಅಡಿಕೆ, ಮಾವು, ಸೀಬೆ, ಸಪೋಟ, ನೇರಳೆ, ಬೇವು, ಬಾಳೆ, ಮರಸೇಬು, ದಾಳಿಂಬೆ ಗಿಡಗಳು ಸೊಂಪಾಗಿ ಬೆಳೆಯುತ್ತಿವೆ. ಗಿಡಗಳಿಗೆ ಕೊಟ್ಟಿಗೆ ಗೊಬ್ಬರ ಮತ್ತು ಕೆಮ್ಮಣ್ಣು ಹಾಕಿ, ನೀರು ಕೊಟ್ಟು ಮಕ್ಕಳಂತೆ ಸಲಹುತ್ತಿದ್ದಾರೆ. ಬೆಳಗೊಳ– ಮಜ್ಜಿಗೆಪುರ ಸಂಪರ್ಕ ರಸ್ತೆಯ ಮಗ್ಗುಲಲ್ಲಿರುವ ಈ ಸ್ಮಶಾನ ಮೊದಲ ನೋಟಕ್ಕೆ ‘ಖಾಸಗಿ ಎಸ್ಟೇಟ್’ನಂತೆ ಭಾಸವಾಗುತ್ತದೆ.
ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುವ ಶಿವಣ್ಣ ಮನೆಗೆ ಮರಳಿದ ಬಳಿಕ ಗ್ರಾಮಕ್ಕೆ ಕೂಗಳತೆ ದೂರದಲ್ಲಿರುವ ಸ್ಮಶಾನಕ್ಕೆ ಧಾವಿಸುತ್ತಾರೆ. ತಾವು ಬೆಳೆಸುತ್ತಿರುವ ಗಿಡಗಳ ರಕ್ಷಣೆಗಾಗಿ ಕಾಲೊನಿಯ ಜನರಿಂದ ಹಣ ಸಂಗ್ರಹಿಸಿ ಸ್ಮಶಾನದ ಸುತ್ತಲೂ ತಂತಿ ಬೇಲಿ ಹಾಕಿಸಿ ಗೇಟ್ ಕೂಡ ಅಳವಡಿಸಿದ್ದಾರೆ.
ಶಿವಣ್ಣ ಅವರ ಕಾಯಕ ಮೆಚ್ಚಿ ಗ್ರಾಮಸ್ಥರು ಕಳೆ ಗಿಡ ತೆಗೆಯುವ ಯಂತ್ರವನ್ನು ಕೊಡಿಸಿದ್ದು, ಮೊಳದುದ್ದ ಕಳೆ ಕಾಣಿಸಿಕೊಂಡರೆ ಸಾಕು ಶಿವಣ್ಣ ಅದನ್ನು ಕತ್ತರಿಸಿ ಸ್ವಚ್ಛ ಮಾಡುತ್ತಾರೆ. ಶಿವಣ್ಣ ಅವರ ಕಾಳಜಿ ಮತ್ತು ಆರೈಕೆಯಿಂದಾಗಿ ಹಚ್ಚ ಹಸಿರು ಬನವಾಗಿ ಪರಿವರ್ತನೆಯಾಗಿರುವ ಸ್ಮಶಾನದಲ್ಲೀಗ ಹಕ್ಕಿಗಳ ಇಂಚರ ಕೇಳಿ ಬರುತ್ತಿದೆ.
ಶವ ಸಂಸ್ಕಾರಕ್ಕೆ ಬರುವ ಜನರು ಕೂರಲು ಅನುಕೂಲವಾಗುವಂತೆ 10 ಆಸನ (ಸಿಮೆಂಟ್ ಬೆಂಚ್) ಗಳನ್ನೂ ಹಾಕಿಸಿದ್ದಾರೆ. ಮರಗಳು ಸಮೃದ್ಧವಾಗಿ ಬೆಳೆಯುತ್ತಿದ್ದು ನೈಸರ್ಗಿಕ ನೆರಳು ನೀಡುತ್ತಿವೆ. ಕೆಲವು ಗಿಡಗಳು ಫಲ ಕೊಡುವ ಹಂತಕ್ಕೆ ಬೆಳೆದಿವೆ. ಸ್ಮಶಾನದ ತುಂಬೆಲ್ಲಾ ತಂಪು ಹವೆಯ ಆಹ್ಲಾದಕರ ವಾತಾವರಣ ಸೃಷ್ಟಿಯಾಗಿದೆ.
‘ಐದು ವರ್ಷಗಳ ಹಿಂದೆ ನಮ್ಮೂರಿನ ಸ್ಮಶಾನ ಭಣಗುಡುತ್ತಿತ್ತು. ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರು ನೂರಾರು ಮರಗಳನ್ನು ಬೆಳೆಸಿರುವುದು ನನಗೆ ಪ್ರೇರಣೆ ನೀಡಿತು. ಸ್ಮಶಾನದ ಪಕ್ಕದಲ್ಲೇ ನೀರಿನ ಮೂಲವೂ ಇತ್ತು. ಹಾಗಾಗಿ ವಿವಿಧ ಜಾತಿಯ ಗಿಡಗನ್ನು ಬೆಳೆಸಲು ಶುರು ಮಾಡಿದೆ. ಈಗ ಇಲ್ಲಿ ನೂರಕ್ಕೂ ಹೆಚ್ಚು ಮರ ಗಿಡಗಳಿವೆ. ಗ್ರಾಮಸ್ಥರು ಹಾಗೂ ಸ್ನೇಹಿತರ ಸಹಕಾರದಿಂದ ಇದು ಸಾಧ್ಯವಾಗಿದೆ’ ಎಂದು ಶಿವಣ್ಣ ಹೇಳುತ್ತಾರೆ.
ಸಂಪರ್ಕಕ್ಕೆ ಮೊ: 96206 36781
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.