
ಬಾಗಲಕೋಟೆ: ಬಸವ ಜಯಂತಿಯಂದು ಅಧಿಕಾರ ಸ್ವೀಕರಿಸಿದ, ಬಸವಣ್ಣನನ್ನು ರಾಜ್ಯ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಬಸವಣ್ಣನ ಐಕ್ಯಸ್ಥಳ ಕೂಡಲಸಂಗಮ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳುತ್ತವೆ ಎಂದು ಬಸವಣ್ಣ ಅಭಿಮಾನಿಗಳು ನಂಬಿದ್ದರು. ಆದರೆ, ಒಂದೂವರೆ ವರ್ಷದಿಂದ ಸ್ಥಗಿತಗೊಂಡ ಅಭಿವೃದ್ಧಿ ಕಾಮಾಗಾರಿಗಳು ಮತ್ತೇ ಆರಂಭವಾಗಿಲ್ಲ.
2018ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ₹139 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಆದರೆ, ಸರಿಯಾದ ಯೋಜನೆ ಇಲ್ಲದ್ದರಿಂದ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿಲ್ಲ. ದೆಹಲಿಯ ಅಕ್ಷರಧಾಮ ಮಾದರಿಯ ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ಕಾಮಗಾರಿ ಎಂಟು ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ.
ಕೂಡಲಸಂಗಮ ಅಭಿವೃದ್ಧಿಗಾಗಿ 1997ರಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ ರಚಿಸಲಾಗಿದೆ. ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ₹39 ಕೋಟಿ ಬಿಡುಗಡೆ ಮಾಡಿದ್ದರು. ಸಿದ್ದರಾಮಯ್ಯ ಅನುದಾನ ಬಿಡುಗಡೆ ಮಾಡಿ ಏಳು ವರ್ಷಗಳು ಕಳೆದರೂ ಅನುದಾನ ಪೂರ್ತಿಯಾಗಿ ಬಳಕೆಯಾಗಿಲ್ಲ. ಆದರೆ ಹೊಸ, ಹೊಸ ಯೋಜನೆಗಳ ಸೇರ್ಪಡೆಗೊಳಿಸಿ ಹೆಚ್ಚಿನ ಅನುದಾನಕ್ಕಾಗಿ ಬೇಡಿಕೆ ಇಡುತ್ತಲೇ ಸಾಗುತ್ತಿದ್ದಾರೆ ಅಧಿಕಾರಿಗಳು.
ಆಧುನಿಕ ತಂತ್ರಜ್ಞಾನದ ಮೂಲಕ ಬಸವಾದಿ ಶರಣರ ವಿಚಾರಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿಸಬೇಕು ಎಂಬ ಉದ್ದೇಶದಿಂದ 1998ರಲ್ಲಿ ₹15.5 ಕೋಟಿ ವೆಚ್ಚದಲ್ಲಿ ಬಸವ ಅಂತರರಾಷ್ಟ್ರೀಯ ಕೇಂದ್ರದ ಕಾಮಗಾರಿ ಆರಂಭಗೊಂಡಿತು. ಕುಂಟುತ್ತಾ ಸಾಗಿ ಎಂಟು ವರ್ಷಗಳ ನಂತರ 2006ರಲ್ಲಿ ಮುಕ್ತಾಯಗೊಂಡಿತು. ಏಳು ಅಂತಸ್ತಿನ ಈ ಕಟ್ಟಡದಲ್ಲಿ ಏನು ಮಾಡಬೇಕು ಎಂಬುದಕ್ಕೆ ಸಮಿತಿ ರಚಿಸಲಾಯಿತು. ಆ ಸಮಿತಿಯು 2011ರಲ್ಲಿ ವರದಿ ನೀಡಿತು.
2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ಸರ್ಕಾರ ಬಸವ ಅಂತರರಾಷ್ಟ್ರೀಯ ಕೇಂದ್ರದ ಯೋಜನೆ ಹಳೆಯದಾಗಿದೆ ಎಂದು ಅದನ್ನು ಅಲ್ಲಿಗೆ ಬಿಟ್ಟು, ದೆಹಲಿ ಅಕ್ಷರಧಾಮ ಮಾದರಿಯಲ್ಲಿ ಸಮಗ್ರ ಅಭಿವೃದ್ಧಿ ಮಾಡುವುದಾಗಿ ಹೊಸ ಯೋಜನೆ ಸಿದ್ಧಪಡಿಸಿತು. ಅಧಿಕಾರ ಕೊನೆವರೆಗೂ ಸುಮ್ಮನಿದ್ದು 2018ರಲ್ಲಿ ₹139 ಕೋಟಿ ಅನುದಾನ ಬಿಡುಗಡೆ ಮಾಡಿ, ಕಾಮಗಾರಿಗೆ ಚಾಲನೆ ನೀಡಲಾಯಿತು.
₹15.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಏಳು ಅಂತಸ್ತಿನ ಬೃಹತ್ ಬಸವ ಅಂತರರಾಷ್ಟ್ರೀಯ ಕೇಂದ್ರವು ಇಂದಿನವರೆಗೆ ಬಳಕೆಯಾಗಿಲ್ಲ. ಅಧಿಕಾರವಧಿ ಕೊನೆಯವರೆಗೂ ಸುಮ್ಮನಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಕೊನೆ ಗಳಿಗೆಯಲ್ಲಿ ಉದ್ಘಾಟನೆ ಮಾಡಲು ಮುಂದಾಗಿತ್ತು. ₹1.80 ಕೋಟಿ ವೆಚ್ಚದಲ್ಲಿ ಬಿಳಿ ಬಣ್ಣ ಬಳಿದು, ವಿವಿಧ ಕಾಮಗಾರಿ ಮಾಡಲಾಯಿತು. ಉದ್ಘಾಟನೆಯಾಗಲಿಲ್ಲ. ಎರಡೂವರೆ ವರ್ಷದಿಂದ ಬೀಗ ಜಡಿಯಲಾಗಿದೆ.
ಅನುಷ್ಠಾನ ಸಮಿತಿ:
ಕಾಮಗಾರಿ ಮಂದಗತಿಯಲ್ಲಿ ನಡೆದಿರುವುದನ್ನು ಗಮನಿಸಿ ಕಾಮಗಾರಿಯನ್ನೂ ಬೇಗನೆ ಪೂರ್ಣಗೊಳಿಸುವ ಸಲುವಾಗಿ ಅನುಷ್ಠಾನ ಸಮಿತಿ ರಚಿಸಲಾಗಿದೆ. ಅನುಷ್ಠಾನ ಸಮಿತಿಯ ಎರಡು ಸಭೆಗಳು ನಡೆದಿವೆಯಾದರೂ, ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಅರ್ಧ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅನುಷ್ಠಾನ ಸಮಿತಿ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಸೂಚಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಕಾಮಗಾರಿ ಆರಂಭವಾಗಿರುವುದಿಲ್ಲ.
ಛತ್ರಗಳ ನಿರ್ಮಾಣ: ₹5.70 ಕೋಟಿ ವೆಚ್ಚದಲ್ಲಿ 10 ಛತ್ರಗಳನ್ನು ನಿರ್ಮಾಣ ಮಾಡಲಾಗಿದೆ. 50 ರಿಂದ 75 ಜನರು ಪ್ರತಿ ಛತ್ರದಲ್ಲಿ ಉಳಿದುಕೊಳ್ಳಬಹುದಾಗಿದೆ. ₹5 ಕೋಟಿ ವೆಚ್ಚದಲ್ಲಿ ಕಳಸದ ಮಾರ್ಗ ನಿರ್ಮಾಣ ಮಾಡಲಾಗಿದೆ. ಕಲ್ಯಾಣ ಮಂಟಪ ನಿರ್ಮಾಣ, ಬಸವಣ್ಣ ಹಾಗೂ ಶರಣರ ಜೀವನ ಸಾರಲು ಮಿನಿ ಥಿಯೇಟರ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಅವುಗಳ ನಿರ್ಮಾಣ ಆರಂಭವಾಗಿಲ್ಲ.
ಸಭಾಭವನ: 2003ರಲ್ಲಿ ₹8.60 ಲಕ್ಷ ವೆಚ್ಚದಲ್ಲಿ ಆರು ಸಾವಿರ ಜನರು ಕುಳಿತುಕೊಳ್ಳುವ ಸಭಾಭವನ ನಿರ್ಮಾಣ ಮಾಡಲಾಗಿದೆ. ಆರಂಭದಲ್ಲಿ
ಶರಣ ಸಾಹಿತ್ಯ ಭಂಡಾರ ಮತ್ತು ಸಂಶೋಧನಾ ಕೇಂದ್ರ: ₹20 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ವಿಶ್ವದಲ್ಲಿರುವ ಎಲ್ಲ ಧರ್ಮಗಳ ಗ್ರಂಥ, ಶರಣರ ವಚನ ಸಾಹಿತ್ಯದ 20 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ.
ದಾಸೋಹ ಭವನ: 1.5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಒಂದೇ ಬಾರಿಗೆ 500 ಜನರು ಊಟಕ್ಕೆ ಕುಳಿತುಕೊಳ್ಳಬಹುದಾಗಿದೆ. ದಾಸೋಹ ಕಾರ್ಯ ನಡೆಯುತ್ತಿದೆ.
ಸ್ನಾನಘಟ್ಟ ನನೆಗುದಿಗೆ:
ಬಾಗಲಕೋಟೆ: ನಾಡಿನ ವಿವಿಧ ಭಾಗಗಳಿಂದ ನಿತ್ಯ ಕೂಡಲಸಂಗಮಕ್ಕೆ ಅಪಾರ ಭಕ್ತರು ಬರುತ್ತಾರೆ. ಅವರ ಅನುಕೂಲಕ್ಕಾಗಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯಿಂದ ಸ್ನಾನ ಘಟ್ಟ ಮತ್ತು ಬಟ್ಟೆ ಬದಲಾಯಿಸುವ ಕೊಠಡಿಗಳ ನಿರ್ಮಾಣಕ್ಕೆ 2018ರಲ್ಲಿ ಚಾಲನೆ ನೀಡಲಾಯಿತು. ಇಲ್ಲಿಯವರೆಗೂ ಪೂರ್ಣಗೊಂಡಿಲ್ಲ.
₹7.86 ಲಕ್ಷ ವೆಚ್ಚದಲ್ಲಿ ಒಂದು ವರ್ಷದಲ್ಲಿ ನಿರ್ಮಾಣವಾಗಬೇಕಾಗಿದ್ದ ಈ ಕಾಮಗಾರಿ ಇನ್ನೂ ಮುಕ್ತಾಯಗೊಂಡಿಲ್ಲ. ಆಮೆಗತಿಯಲ್ಲಿ ನಡೆದಿದ್ದ ಕಾಮಗಾರಿ, ಇತ್ತೀಚೆಗೆ ಸ್ಥಗಿತಗೊಂಡಿದೆ. ಹೊಳೆದಂಡೆಯಲ್ಲಿಯೇ ಸ್ನಾನ ಮಾಡಿ, ಅಲ್ಲಿಯೇ ಬಟ್ಟೆಗಳನ್ನು ಒಗೆಯುವುದರಿಂದ ನದಿ ತೀರ ಮಾಲಿನ್ಯವಾಗುತ್ತಿದೆ.
ನಿರ್ಮಾಣವಾಗದ ಶರಣಗ್ರಾಮ:
ಬಸವಾದಿ ಶರಣರ ಸಂದೇಶಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಉದ್ದೇಶದಿಂದ 2018ರಲ್ಲಿ ಶರಣ ಗ್ರಾಮ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ಕೊಟ್ಟರು. ಅದಕ್ಕಾಗಿ ₹5.38 ಕೋಟಿ ಅನುದಾನವನ್ನೂ ಬಿಡುಗಡೆ ಮಾಡಲಾಗಿತ್ತು.
20 ಎಕರೆ ಪ್ರದೇಶದಲ್ಲಿ ಬಸವಣ್ಣನ ಸಮಕಾಲೀನ 770 ಶರಣರ ಮೂರ್ತಿಗಳನ್ನು ನಿರ್ಮಿಸಿ ಅವರ ಬದುಕು, ಸಂದೇಶಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶ ಹೊಂಸಲಾಗಿತ್ತು. ಆದರೆ, ಇಲ್ಲಿಯವರೆಗೂ ಕಾಮಗಾರಿ ಆರಂಭವಾಗಿಲ್ಲ.
ಸಿದ್ದರಾಮಯ್ಯ 2023ರಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದಾರೆ. ಕೂಡಲಸಂಗಮ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಅವರು ಇಲ್ಲಿಯವರೆಗೂ ಮಂಡಳಿಯ ಸಭೆಯನ್ನೂ ಒಮ್ಮೆಯೂ ನಡೆಸಿಲ್ಲ. ಬಸವಣ್ಣನ ಕಟ್ಟಾ ಅನುಯಾಯಿ ಎನ್ನುವ ಅವರು ಕೂಡಲಸಂಗಮ ಅಭಿವೃದ್ಧಿ ಮರೆತಿರುವುದು ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ.
ಬಳಕೆಯಾಗದ ಬಸ್ ನಿಲ್ದಾಣ:
2000ನೇ ಇಸ್ವಿಯಲ್ಲಿ ₹50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಮಂಡಳಿ ಬಸ್ ನಿಲ್ದಾಣದಲ್ಲಿ ನಿರ್ಮಾಣ ಮಾಡಲಾಗಿದೆ. ನಂತರ ಅದನ್ನು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. ಬಸ್ ನಿಲ್ದಾಣ ಬಳಕೆಯಾಗದ್ದರಿಂದ ನಿಲ್ದಾಣ ಸಂಪೂರ್ಣವಾಗಿ ಪಾಳು ಬಿದ್ದಿದೆ. ಕೂಡಲಸಂಗಮ ವೃತ್ತದಲ್ಲಿಯೇ ಬಸ್‌ಗಳು ನಿಂತು, ಅಲ್ಲಿಂದಲೇ ಮರಳುತ್ತವೆ. ಮಳೆ, ಬಿಸಿಲಿನಲ್ಲಿ ನಿಂತುಕೊಂಡು ಬಸ್ ಕಾಯಬೇಕಾದ ಸ್ಥಿತಿ ಇದೆ.
ಕೂಡಲಸಂಗಮ ಅಭಿವೃದ್ಧಿಯಾಗಬೇಕು ಎಂಬುದು ಬಸವ ಭಕ್ತರದ್ದು ಬಹುದಿನಗಳ ಬೇಡಿಕೆ. ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕುಮಹದೇಶ್ವರ ಸ್ವಾಮೀಜಿ, ಬಸವಧರ್ಮ ಪೀಠ, ಕೂಡಲಸಂಗಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.