ADVERTISEMENT

ಗಾಂಧೀಜಿ ಚಿತಾಭಸ್ಮದ ಮೆರವಣಿಗೆ ನೋಡಬೇಕೇ? ಹಾಗಾದರೆ ಜ. 30ರಂದು ಮಡಿಕೇರಿಗೆ ಬನ್ನಿ

ಕೆ.ಎಸ್.ಗಿರೀಶ್
Published 18 ಜನವರಿ 2026, 13:51 IST
Last Updated 18 ಜನವರಿ 2026, 13:51 IST
<div class="paragraphs"><p>ಕಳೆದ ವರ್ಷ 2025ರ ಜನವರಿ 30ರಂದುಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮ ಇರುವ ಪೆಟ್ಟಿಗೆಯನ್ನು ಪುಷ್ಪಗಳಿಂದ ಸಿಂಗರಿಸಲಾಗಿತ್ತು</p></div>

ಕಳೆದ ವರ್ಷ 2025ರ ಜನವರಿ 30ರಂದುಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮ ಇರುವ ಪೆಟ್ಟಿಗೆಯನ್ನು ಪುಷ್ಪಗಳಿಂದ ಸಿಂಗರಿಸಲಾಗಿತ್ತು

   

ಮಡಿಕೇರಿ: ದೇಶಪ್ರೇಮ ಉಕ್ಕಿಸುವಂತಹ ಪೊಲೀಸ್ ವಾದ್ಯ ವೃಂದದವರ ವಾದನ, ಶಿಸ್ತುಬದ್ಧವಾದ ಜನರ ನಡಿಗೆ, ರಸ್ತೆಯಲ್ಲೇ ಪಥಸಂಚಲನದ ಹಾಗೆ ಹೆಜ್ಜೆ ಇಡುವ ವಿದ್ಯಾರ್ಥಿಗಳ ಸಾಲು, ಮುಂಚೂಣಿಯಲ್ಲಿ ಹೂಗಳಿಂದ ಅಲಂಕೃತವಾದ ಪೆಟ್ಟಿಗೆಯನ್ನಿಡಿದು ಹೊರಟ ಹಿರಿಯರು...

ಈ ಎಲ್ಲ ದೃಶ್ಯಗಳೂ ಪ್ರತಿ ವರ್ಷ ಹುತಾತ್ಮರ ದಿನಾಚರಣೆಯಂದು ಮಡಿಕೇರಿಯಲ್ಲಿ ನಡೆಯುವ ಮಹಾತ್ಮ ಗಾಂಧೀಜಿ ಚಿತಾಭಸ್ಮದ ಮೆರವಣಿಗೆಯಲ್ಲಿ ಕಾಣಬಹುದು.

ADVERTISEMENT

ಅಪರೂಪದಲ್ಲಿ ಅಪರೂಪ ಎನಿಸುವ ಈ ಅವಕಾಶ ‘ಮಂಜಿನಗರಿ’ಯಲ್ಲಿ ಮಾತ್ರ ಲಭ್ಯ. ಇಂದಿಗೂ ಇಲ್ಲಿ ಗಾಂಧೀಜಿ ಅವರ ಚಿತಾಭಸ್ಮವನ್ನು ಜತನದಿಂದ ಸಂರಕ್ಷಿಸಲಾಗಿದೆ. ಮಾತ್ರವಲ್ಲ, ಅದರ ಮೆರವಣಿಗೆಯನ್ನು ಜನವರಿ 30ರ ಹುತಾತ್ಮರ ದಿನಾಚರಣೆಯಂದು ಮಾಡಲಾಗುತ್ತದೆ. ಈ ಮೂಲಕ ರಾಷ್ಟ್ರಪಿತನಿಗೆ ನಮನ  ಸಲ್ಲಿಸಲಾಗುತ್ತದೆ.

ಹಾಗೆ ನೋಡಿದರೆ, ಇದು ಒಂದು ಅಪೂರ್ವ ಮತ್ತು ಅಪರೂಪದ ಅವಕಾಶ ಎನ್ನುವುದು ನಿಜ. ಆದರೆ, ಅದರ ಮತ್ತೊಂದು ಮುಖದಲ್ಲಿ ಗಾಂಧೀಜಿ ಚಿತಾಭಸ್ಮಕ್ಕೆ ಇಷ್ಟು ವರ್ಷ ಕಳೆದರೂ ಒಂದು ಸ್ಮಾರಕವನ್ನು ನಿರ್ಮಿಸಲಿಲ್ಲವಲ್ಲ ಎಂಬ ಬೇಸರವೂ ಕಾಣುತ್ತದೆ.

‘ಹುತಾತ್ಮರ ದಿನಾಚರಣೆ’ಯ ಒಂದು ಗಂಟೆಯ ಕಾರ್ಯಕ್ರಮದ ಬಳಿಕ ಈ ಚಿತಾಭಸ್ಮ ಜಿಲ್ಲಾ ಖಜಾನೆ ಸೇರುತ್ತದೆ. ಮರಳಿ ಇದರ ದರ್ಶನವಾಗಬೇಕಾದರೆ ಮತ್ತೊಂದು ಹುತಾತ್ಮರ ದಿನಾಚರಣೆಯನ್ನೇ ಕಾಯಬೇಕಿದೆ.

ಕಳೆದ ವರ್ಷ 2025ರ ಜನವರಿ 30ರಂದು ನಡೆದ ಸರ್ವೋದಯ ದಿನಾಚರಣೆಯಲ್ಲಿ ಕೊಡಗು ಜಿಲ್ಲಾಧಿಕಾರಿಯಾಗಿದ್ದ ವೆಂಕಟ್ ರಾಜಾ ಅವರು ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದರು

ದೇಶದ ಕೆಲವೆಡೆ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ಇನ್ನೂ ಇಟ್ಟುಕೊಳ್ಳಲಾಗಿದೆ. ಆದರೆ, ಅಲ್ಲೆಲ್ಲ ಚಿತಾಭಸ್ಮವಿರಿಸಿ ಸ್ಮಾರಕ ನಿರ್ಮಿಸಲಾಗಿದೆ. ಆದರೆ, ಮಡಿಕೇರಿಯಲ್ಲಿ ಮಾತ್ರ ಇನ್ನೂ ಸ್ಮಾರಕ ನಿರ್ಮಾಣವಾಗಿಲ್ಲ.

ಚಿತಾಭಸ್ಮವಿರಿಸಿ ಸ್ಮಾರಕ ನಿರ್ಮಿಸುವ ಪ್ರಯತ್ನಗಳು ನಡೆದೇ ಇಲ್ಲ ಎಂದೇನಿಲ್ಲ. ಇಲ್ಲಿರುವ ಸರ್ವೋದಯ ಸಮಿತಿಯವರ ಸತತ ಶ್ರಮದಿಂದ ಕಟ್ಟಡ ನಿರ್ಮಾಣ ಕಾರ್ಯ ನಡೆದು, ಅರ್ಧಕ್ಕೆ ನಿಂತಿದೆ. ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದೆ.

ಸರ್ವೋದಯ ಸಮಿತಿಯ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಣ ಬಿಡುಗಡೆಯಾಯಿತು. ₹ 50 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇನ್ನು ಉದ್ಯಾನ ಸೇರಿದಂತೆ ಇನ್ನಿತರ ಕಾಮಗಾರಿಗಳು ನಡೆಯಬೇಕಿದೆ. ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ’ ಎಂದು ಹೇಳಿದರು.

ಕಳೆದ ವರ್ಷವೇ ಅಂದಿನ ಜಿಲ್ಲಾಧಿಕಾರಿಯಾಗಿದ್ದ ವೆಂಕಟ್ ರಾಜಾ ಅವರು ಇದು ಕೊನೆಯ ಮೆರವಣಿಗೆ. ಮುಂದಿನ ವರ್ಷ ಸ್ಮಾರಕ ನಿರ್ಮಾಣವಾಗಲಿದೆ ಎಂದು ಹೇಳಿದ್ದರು. ಆದರೆ, ಕಾಮಗಾರಿ ಪೂರ್ಣವಾಗದೇ ಇರುವುದರಿಂದ ಈ ವರ್ಷವೂ ಚಿತಾಭಸ್ಮದ ಮೆರವಣಿಗೆ ನಡೆಯಲಿದೆ.

ಕಳೆದ ವರ್ಷ 2025ರ ಜನವರಿ 30ರಂದುಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮ ಇರುವ ಪೆಟ್ಟಿಗೆಯನ್ನು ಪುಷ್ಪಗಳಿಂದ ಸಿಂಗರಿಸಲಾಗಿತ್ತು

ಚಿತಾಭಸ್ಮ ಬಂದ ದಾರಿ

ದೆಹಲಿಯಲ್ಲಿ ಬಹದ್ದೂರ್‌ ಷಾ ದೊರೆಯನ್ನು ಗಡಿಪಾರು ಮಾಡಿದಂತೆಯೇ ಕೊಡಗಿನ ಕೊನೆಯ ಅರಸು ಚಿಕ್ಕವೀರರಾಜೇಂದ್ರ ಅವರನ್ನೂ ಬ್ರಿಟಿಷರು ಇಂಗ್ಲೆಂಡ್‌ಗೆ ಗಡಿಪಾರು ಮಾಡಿ ಕೊಡಗನ್ನು ಆಕ್ರಮಿಸಿಕೊಳ್ಳುತ್ತಿದ್ದಂತೆ ಇಲ್ಲಿ ಸ್ವಾತಂತ್ರ್ಯ ಚಳವಳಿ ಹುಟ್ಟಲು ಕಾರಣವಾಯಿತು ಎಂದು ಇತಿಹಾಸಕಾರರು ದಾಖಲಿಸುತ್ತಾರೆ. ಸ್ವಾತಂತ್ರ್ಯ ಹೋರಾಟ ಇಲ್ಲಿಯೂ ಬಿರುಸುಪಡೆದ ನಂತರ 1934ರಲ್ಲಿ ಮಹಾತ್ಮ ಗಾಂಧೀಜಿ ಕೊಡಗಿಗೆ ಭೇಟಿ ನೀಡುತ್ತಾರೆ. ಅವರು ಇಲ್ಲಿ ಭೇಟಿ ನೀಡಿ ಕೊಡಗಿನಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಗೆ ಸಾಕಷ್ಟು ಶಕ್ತಿ ತುಂಬುತ್ತಾರೆ.

ನಂತರ, ಅವರು ನಿಧನರಾದ ಬಳಿಕ ಅವರ ಚಿತಾಭಸ್ಮವನ್ನೂ ಇಲ್ಲಿಗೆ ತರಲಾಗುತ್ತದೆ. ಈ ಚಿತಾಭಸ್ಮ ತಲುಪಿದ ಕೆಲವೇ ಕೆಲವು ಪ್ರದೇಶಗಳಲ್ಲಿ ಕೊಡಗೂ ಸೇರಿತ್ತು ಎಂಬುದು ಅಂದು ಕೊಡಗು ಇಡೀ ದೇಶದಲ್ಲೇ ಪಡೆದಿದ್ದ ಸ್ಥಾನಕ್ಕೆ ಹಿಡಿದ ಕನ್ನಡಿ ಎನಿಸಿದೆ.

ಕೊಡಗಿನ ಜನರು ಈ ಚಿತಾಭಸ್ಮವನ್ನು ಇಂದಿಗೂ ಜತನದಿಂದ ಕಾಯ್ದುಕೊಂಡಿರುವುದು ಗಾಂಧೀಜಿ ಅವರ ಮೇಲಿನ ಅಭಿಮಾನಕ್ಕೆ ಸಾಕ್ಷಿ ಎನಿಸಿದೆ. ಪ್ರತಿ ವರ್ಷ ಹುತಾತ್ಮರ ದಿನಾಚರಣೆಯಂದು ಈ ಚಿತಾಭಸ್ಮವನ್ನು ಜಿಲ್ಲಾ ಖಜಾನೆಯಿಂದ ಹೊರತೆಗೆದು ಮಡಿಕೇರಿ ನಗರದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಅವರಿಗೆ ಇಷ್ಟವಾದ ಭಜನೆಗಳನ್ನು ಮಾಡಲಾಗುತ್ತದೆ. ಸರ್ವ ಧರ್ಮ ಪ್ರಾರ್ಥನೆಯ ಮೂಲಕ ಗಾಂಧೀಜಿ ಅವರನ್ನು ನೆನಪಿಸಿಕೊಳ್ಳಲಾಗುತ್ತಿದೆ.

ಕಳೆದ ವರ್ಷ 2025ರ ಜನವರಿ 30ರಂದು ನಡೆದ ಕಾರ್ಯಕ್ರಮದಲ್ಲಿ ಎಎಲ್‌ಜಿ ಕ್ರೆಸೆಂಟ್ ಶಾಲೆ ಹಾಗೂ ಸಂತ ಮೈಕಲರ ಶಾಲೆಯ ಗೈಡ್ಸ್ ವಿದ್ಯಾರ್ಥಿಗಳು ಗಾಂಧೀಜಿ ಅವರಿಗೆ ಪ್ರಿಯವಾದ ಭಜನೆಗಳನ್ನು ಹಾಡಿದರು


ಈ ಕಾರ್ಯದಲ್ಲಿ ಕೇವಲ ಜಿಲ್ಲಾಡಳಿತ ಮಾತ್ರವಲ್ಲ, ಸರ್ವೋದಯ ಸಮಿತಿಯೂ ಅತ್ಯಂತ ಹೆಚ್ಚಿನ ಶ್ರಮ ವಹಿಸಿದೆ. ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳೂ ಈ ಚಿತಾಭಸ್ಮದ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಹಿಂದೆ ಈ ಅವಧಿಯಲ್ಲಿ ನಗರದಲ್ಲಿ ಸೈರನ್ ಮೊಳಗುತ್ತಿತ್ತು. ಆಗ ಜನರೆಲ್ಲರೂ ನಿಂತು ಗೌರವ ಸೂಚಿಸುತ್ತಿದ್ದರು ಎಂಬುದನ್ನು ಹಿರಿಯರು ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ. ಆದರೆ, ಈಗ ಸೈರನ್ ಮೊಳಗುತ್ತಿಲ್ಲ. ಈ ಸೈರನ್ ಮೊಳಗಿಸುವ ಪರಂಪರೆ ಮತ್ತೆ ಮುಂದುವರಿಯಬೇಕು ಎಂಬ ಒತ್ತಾಯ ಕೇಳಿ ಬಂದರೂ ಯಾವುದೇ ಪ್ರಯೋಜನವಾಗಿಲ್ಲ.

ಜನವರಿ 30ರಂದು ಮೆರವಣಿಗೆ ನಡೆಯಲಿದೆ

ಈ ಬಾರಿಯೂ ಜನವರಿ 30ರಂದು ಮಡಿಕೇರಿಯಲ್ಲಿ ಹುತಾತ್ಮರ ದಿನಾಚರಣೆ ಪ್ರಯುಕ್ತ ಮಹಾತ್ಮ ಗಾಂಧೀಜಿ ಅವರು ಚಿತಾಭಸ್ಮದ ಮೆರವಣಿಗೆ ನಡೆಯಲಿದೆ.

ಚಿತಾಭಸ್ಮವನ್ನು ಜಿಲ್ಲಾ ಖಜಾನೆಯಿಂದ ಹೊರ ತೆಗೆದು ಹೂವಿನ ಅಲಂಕೃತದೊಂದಿಗೆ ವಿಶೇಷ ಪೂಜೆ ಸಲ್ಲಿಸಿ, ಪೊಲೀಸ್ ವಾದ್ಯದೊಂದಿಗೆ ಗೌರವ ಸಲ್ಲಿಸಿ, ನಂತರ ಜಿಲ್ಲಾಡಳಿತ ಭವನದಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ಮೆರವಣಿಗೆ ಮೂಲಕ ಸಾಗಿ ಗಾಂಧಿ ಮಂಟಪದಲ್ಲಿ ಸರ್ವ ಧರ್ಮ ಪ್ರಾರ್ಥನಾ ಕಾರ್ಯಕ್ರಮ ನಡೆಯಲಿದೆ. ನಂತರ ಪೊಲೀಸ್ ವಾದ್ಯದೊಂದಿಗೆ ಗೌರವ ವಂದನೆ ಸಲ್ಲಿಸಲಾಗುತ್ತದೆ. ಈ ಕಾರ್ಯವನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಸೂಚಿಸಿದ್ದಾರೆ.

‘ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶಾಸಕರು ಅನುದಾನ ಬಿಡುಗಡೆಗೆ ಸತತ ಪ್ರಯತ್ನ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಮುಂದಿನ ಬಜೆಟಿನಲ್ಲಿ ಅನುದಾನ ಲಭ್ಯವಾಗುವ ಸಾಧ್ಯತೆ ಇದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ತಿಳಿಸಿದ್ದಾರೆ.

ಕಳೆದ ವರ್ಷ 2025ರ ಜನವರಿ 30ರಂದು ನಡೆದ ಮಡಿಕೇರಿಯಲ್ಲಿ ನಡೆದ ಮಹಾತ್ಮ ಗಾಂಧೀಜಿ ಚಿತಾಭಸ್ಮದ ಮೆರವಣಿಗೆಯಲ್ಲಿ ಶಾಲಾ ಮಕ್ಕಳೊಂದಿಗೆ ಅಧಿಕಾರಿಗಳು ಹೆಜ್ಜೆ ಹಾಕಿದರು

ಮಡಿಕೇರಿಯಲ್ಲಿ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವಿರಿಸಲು ನಿರ್ಮಿಸಲಾಗುತ್ತಿರುವ ಗಾಂಧಿ ಸ್ಮಾರಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.