ADVERTISEMENT

‘ಮೈಕ್ರೊಗ್ರೀನ್ಸ್’ ಪೌಷ್ಟಿಕಾಂಶದ ಆಗರ.. ಸ್ವಉದ್ಯೋಗಕ್ಕೆ ಹೊಸ ದಾರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2026, 17:19 IST
Last Updated 6 ಫೆಬ್ರುವರಿ 2026, 17:19 IST
   

ಆಗತಾನೆ ಚಿಗುರಿದ ಎರಡು ಎಲೆಯ ಪೈರು.. ಹಳದಿ ಕಾಂಡ.. ಮುಟ್ಟಿದರೆ ಮುರಿಯುತ್ತೆ ಎನ್ನುವಷ್ಟು ಮೃದು.. ಆದರೂ ಪೌಷ್ಟಿಕಾಂಶದ ಆಗರ.

ಹೌದು ಎಳೆಯ ಪೈರುಗಳಿಗೆ ಈಗ ಬೇಡಿಕೆ ಹೆಚ್ಚುತ್ತಿದೆ. ಮೊಳಕೆ ಕಾಳು ಅಲ್ಲದ ದೊಡ್ಡ ಸಸಿಯೂ ಅಲ್ಲದ ಎರಡೆಲೆಯ ಸಸಿಗೆ ‘ಮೈಕ್ರೊಗ್ರೀನ್ಸ್’ ಎಂಬ ಹೊಸ ಉದ್ಯಮ ಸದ್ದಿಲ್ಲದೆ ತೆರೆದುಕೊಂಡಿದೆ.

ತರಕಾರಿಗಿಂತ ಹಲವು ಪಟ್ಟು ಪೌಷ್ಟಿಕಾಂಶದ ಮೌಲ್ಯ ಹೆಚ್ಚಿರುವ ಇವುಗಳಿಗೆ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಈ ಉದ್ಯಮದಲ್ಲಿ ತೊಡಗಿಸಿಕೊಂಡವರು. ಮೂಲಂಗಿ, ಬೀಟ್ ರೂಟ್, ಗೋಧಿ, ಅಲಸಂದಿ, ಚೀಯಾ, ಅಗಸೆ, ಬ್ರೊಕೊಲಿ ಹೀಗೆ ಹಲವು ಬೀಜಗಳನ್ನು ಬಳಸಿ ಮೈಕ್ರೊಗ್ರೀನ್ಸ್ ಸಸಿಗಳನ್ನು ಬೆಳೆಸಲಾಗುತ್ತದೆ. ಒಂದು ಅಂದಾಜಿನ ಪ್ರಕಾರ, ಬ್ರೊಕೊಲಿ ತರಕಾರಿಗಿಂತ ಮೈಕ್ರೊಗ್ರೀನ್ ಸಸ್ಯಗಳಲ್ಲಿ 40 ಪಟ್ಟು ಪೌಷ್ಟಿಕಾಂಶ ಮೌಲ್ಯವಿದೆ ಎನ್ನುತ್ತಾರೆ ಎಂಯು ಗ್ರೀನ್ಸ್ ಅಂಡ್ ಗ್ರೀನ್ಸ್ ನ ರವೀಂದ್ರ ಜಿ.

ADVERTISEMENT

ಈ ಮೈಕ್ರೊಗ್ರೀನ್ಸ್ ಎಂದರೇನು? ಅದರ ಪೌಷ್ಟಿಕಾಂಶಧ ಮೌಲ್ಯ, ಬೇಡಿಕೆ, ಉದ್ಯಮದ ಅವಕಾಶ ಕುರಿತ ಹಲವು ವಿಚಾರಗಳನ್ನು ಅವರು ಪ್ರಜಾವಾಣಿ ಡಿಜಿಟಲ್ ಜೊತೆ ಹಂಚಿಕೊಂಡಿದ್ದಾರೆ.

ಮೈಕ್ರೊಗ್ರೀನ್ಸ್ ಎಂದರೇನು?

ಮೈಕ್ರೊಗ್ರೀನ್ಸ್ ಎಂದರೆ ಆರಂಭಿಕ ಹಂತದಲ್ಲೇ ಕೊಯ್ಲು ಮಾಡಬಹುದಾದ ಎಳೆಯ ಸಸ್ಯಗಳು. ಸಾಮಾನ್ಯವಾಗಿ ಬೀಜ ಮೊಳಕೆಯೊಡೆದ 7 ರಿಂದ 14 ದಿನಗಳಲ್ಲಿ ಮೊದಲ ಎಲೆಗಳು ಕಾಣಿಸಿಕೊಳ್ಳುತ್ತವೆ. ಇದನ್ನೇ ಮೈಕ್ರೊಗ್ರೀನ್ ಎನ್ನಲಾಗುತ್ತದೆ. ಬೇರನ್ನು ಬಿಟ್ಟು ಕಾಂಡದಿಂದ ಕೊಯ್ಲು ಮಾಡಲಾಗುತ್ತದೆ

ಸಾಮಾನ್ಯವಾಗಿ ಮೈಕ್ರೋಗ್ರೀನ್‌ಗಳಲ್ಲಿ ಗೋಧಿ ಹುಲ್ಲು, ಸಾಸಿವೆ, ಮೂಲಂಗಿ, ಸೂರ್ಯಕಾಂತಿ, ಬ್ರೊಕೊಲಿ, ಬೀಟ್‌ರೂಟ್ ಮತ್ತು ದಂಟಿನ ಸೊಪ್ಪು ಸೇರಿವೆ. ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಅವು ತಾಜಾತನ, ಸುವಾಸನೆ ಮತ್ತು ಪೌಷ್ಟಿಕಾಂಶದಿಂದ ಮೌಲ್ಯ ಪಡೆದುಕೊಂಡಿವೆ. ಮೈಕ್ರೋಗ್ರೀನ್‌ಗಳನ್ನು ತರಕಾರಿಗಳಿಗೆ ಬದಲಿಯಾಗಿ ಅಲ್ಲದೇ ದೈನಂದಿನ ಆಹಾರದಲ್ಲಿ ಪೌಷ್ಟಿಕಾಂಶ ಸೇರ್ಪಡೆಯಾಗಿ ಬಳಸಬಹುದಾಗಿದೆ.

ಮೈಕ್ರೊಗ್ರೀನ್ಸ್ ಬೇಡಿಕೆ ಏಕೆ ಹೆಚ್ಚುತ್ತಿದೆ?

ಹೆಚ್ಚುತ್ತಿರುವ ಆರೋಗ್ಯ ಜಾಗೃತಿ, ಆಹಾರ ಸುರಕ್ಷತೆಯ ಕಾಳಜಿ ಮತ್ತು ಬದಲಾಗುತ್ತಿರುವ ನಗರ ಜೀವನಶೈಲಿಯಿಂದಾಗಿ ಮೈಕ್ರೋಗ್ರೀನ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಗ್ರಾಹಕರು ತಾಜಾ ಮತ್ತು ಸ್ಥಳೀಯವಾಗಿ ಬೆಳೆಯುವ ಆಹಾರ, ಸುಲಭ ಪೂರೈಕೆ ಮತ್ತು ಗುಣಮಟ್ಟದ ಆಹಾರವನ್ನು ಬಯಸುತ್ತಿದ್ದಾರೆ. ಬೆಂಗಳೂರಿನಂತಹ ನಗರಗಳು ಈ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಕೃಷಿ, ಆರೋಗ್ಯ ಮತ್ತು ಉದ್ಯಮಶೀಲತೆಗೆ ಕರ್ನಾಟಕದ ಪ್ರಗತಿಪರ ವಿಧಾನವು ಮೈಕ್ರೋಗ್ರೀನ್‌ಗಳಂತಹ ನಗರ ಕೃಷಿ ಮಾದರಿಗಳು ಆರಂಭಿಕ ಸ್ವೀಕಾರವನ್ನು ಪಡೆಯಲು ಸಹಾಯ ಮಾಡಿದೆ.

ಮೈಕ್ರೊಗ್ರೀನ್ಸ್ ಆಧುನಿಕ ನಗರ ಜೀವನಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಏಕೆಂದರೆ, ನಿಯಂತ್ರಿತ ಪರಿಸರದಲ್ಲಿ ಬೆಳೆಯುತ್ತವೆ.

ಮೈಕ್ರೊಗ್ರೀನ್ಸ್‌ಗಳನ್ನು ಯಾವ ಉದ್ದೇಶಗಳಿಗಾಗಿ ಬಳಸಲಾಗುತ್ತದೆ?

ಮನೆಗಳಲ್ಲಿ ಸಲಾಡ್‌, ಸಾಂಪ್ರದಾಯಿಕ ಭಕ್ಷ್ಯಗಳು, ಚಟ್ನಿ, ಸ್ಮೂಥಿಗಳು ಮತ್ತು ಜ್ಯೂಸ್‌ಗಳಲ್ಲಿ ಇವುಗಳನ್ನು ಬಳಸಲಾಗುತ್ತದೆ. ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ರುಚಿ, ಪೌಷ್ಟಿಕ ಆಹಾರ ಮತ್ತು ಆಹಾರದ ಅಲಂಕಾರಕ್ಕಾಗಿಯೂ ಬಳಸಲಾಗುತ್ತಿದೆ.

ಆರೋಗ್ಯ ಪ್ರಜ್ಞೆ ಹೊಂದಿರುವ ವ್ಯಕ್ತಿಗಳು ಸಮತೋಲಿತ ಪೋಷಣೆಯ ಭಾಗವಾಗಿ ಇವುಗಳನ್ನು ಬಳಸುತ್ತಾರೆ. ಫಿಟ್‌ನೆಸ್ ಬಗ್ಗೆ ಹೆಚ್ಚು ಗಮನ ಹರಿಸುವವರು ಪೋಷಕಾಂಶಗಳ ಪೂರಕವಾಗಿ ಬಳಸುತ್ತಾರೆ.

ಗೋಧಿ ಹುಲ್ಲು ಮತ್ತು ಸಾಸಿವೆ ಸೊಪ್ಪುಗಳನ್ನು ಸಾಂಪ್ರದಾಯಿಕವಾಗಿ ಬಳಸಲಾಗುತ್ತಿದೆ. ಇವುಗಳ ಔಷಧೀಯ ಗುಣ ಮತ್ತು ಪೋಷಕಾಂಶಗಳಿಂದ ಸಾಂಸ್ಕೃತಿಕ ಪರಿಚಿತತೆಯನ್ನು ಹೊಂದಿವೆ

ಮೈಕ್ರೊಗ್ರೀನ್ಸ್ ಮಾರ್ಕೆಟಿಂಗ್ ಮತ್ತು ಮಾರಾಟ ಹೇಗೆ?

ಮೈಕ್ರೋಗ್ರೀನ್‌ಗಳನ್ನು ಸಾಂಪ್ರದಾಯಿಕ ತರಕಾರಿಗಳಂತೆ ಮಾರಾಟ ಮಾಡುವುದಿಲ್ಲ. ಸಂಪರ್ಕಗಳ ಆಧಾರದ ಮೇಲೆ ಅದರ ಮಹತ್ವ ತಿಳಿದಿರುವವರಿಗೆ ಮಾರಾಟ ಮಾಡಲಾಗುತ್ತದೆ.

ಮಾರಾಟವು ಸಾಮಾನ್ಯವಾಗಿ ಈ ಕೆಳಗಿನವುಗಳ ಮೂಲಕ ನಡೆಯುತ್ತದೆ:

* ನೇರ ಮನೆಗೆ ಪೂರೈಕೆ

* ಚಂದಾದಾರಿಕೆ ಮೂಲಕ ಪೂರೈಕೆ

* ರೆಸ್ಟೋರೆಂಟ್‌ಗಳು, ಕೆಫೆಗಳು ಮತ್ತು ಕ್ಲೌಡ್ ಕಿಚನ್‌ಗಳಿಗೆ ಪೂರೈಕೆ

* ಕಮ್ಯುನಿಟಿ ಸೆಟ್ವರ್ಕ್ ಮತ್ತು ಸ್ಥಳೀಯ ಮಾರುಕಟ್ಟೆಗಳು

* ಸೂಪರ್ ಮಾರ್ಕೆಟ್, ಮಾಲ್‌ಗಳು, ಕ್ವಿಕೆ ಡೆಲಿವರಿ ಆ್ಯಪ್‌ಗಳಲ್ಲೂ ಲಭ್ಯವಿದೆ

ಇದರ ಮಾರ್ಕೆಟಿಂಗ್ ಜಾಹೀರಾತಿಗಿಂತ ಹೆಚ್ಚು ಜಾಗೃತಿ ಮತ್ತು ನಂಬಿಕೆಯ ಮೇಲೆ ಆಧರಿಸಿದೆ. ಜನರು ತಮ್ಮ ಆಹಾರವನ್ನು ಹೇಗೆ ಹೆಚ್ಚು ಮೌಲ್ಯಯುತಗೊಳಿಸಬಹುದು ಎಂಬುದನ್ನು ಅರ್ಥಮಾಡಿಕೊಂಡಾಗ ಮೈಕ್ರೋಗ್ರೀನ್ಸ್ ಖರೀದಿಗೆ ಮುಂದಾಗುತ್ತಾರೆ.

ಮೈಕ್ರೊಗ್ರೀನ್ಸ್ ಬೇಡಿಕೆ ಮತ್ತು ವ್ಯಾಪ್ತಿ ಹೇಗಿದೆ?

ಮೈಕ್ರೊಗ್ರೀನ್ಸ್ ಪರಿಸರ ವ್ಯವಸ್ಥೆಯು ಕೃಷಿಯನ್ನು ಮೀರಿ ವಿಸ್ತರಿಸಿದೆ. ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ, ಪೌಷ್ಠಿಕಾಂಶದ ಅರಿವು ಮತ್ತು ಜಾಗೃತಿ, ಮನೆಯಲ್ಲೇ ಮಾಡಬಹುದಾದ ಕೃಷಿ, ಸಮುದಾಯ ಆಧಾರಿತ ನಗರ ಕೃಷಿ ಉಪಕ್ರಮವಾಗಿದೆ. ಮೈಕ್ರೊಗ್ರೀನ್ಸ್ ಅನ್ನು ಕೇವಲ ಕೃಷಿ ಚಟುವಟಿಕೆಯಾಗಿ ನೋಡದೆ, ಜ್ಞಾನ ಚಾಲಿತ ಪರಿಸರ ವ್ಯವಸ್ಥೆಯಾಗಿ ನೋಡಬೇಕು.

ಮೈಕ್ರೊಗ್ರೀನ್ಸ್‌ನಲ್ಲಿ ಉದ್ಯಮ ಅವಕಾಶಗಳು ಯಾವುವು?

ಆರೋಗ್ಯ ಮತ್ತು ಸುಸ್ಥಿರತೆಗೆ ಹೊಂದಿಕೆಯಾಗುವ ಸಣ್ಣ, ನಿಯಂತ್ರಿತ, ನಗರ ಸ್ನೇಹಿ ಉದ್ಯಮ ನಡೆಸಲು ಆಸಕ್ತಿ ಹೊಂದಿರುವ ಜನರಿಗೆ ಮೈಕ್ರೊಗ್ರೀನ್ಸ್ ಅವಕಾಶಗಳನ್ನು ನೀಡುತ್ತದೆ. ಆದರೆ, ಉತ್ಪ್ರೇಕ್ಷಿತ ಆದಾಯದ ಬಗ್ಗೆ ಜಾಗರೂಕರಾಗಿರಬೇಕು. ಮಾರುಕಟ್ಟೆ ಪ್ರವೇಶ, ಕಾರ್ಯಾಚರಣೆಗಳು, ಸ್ಥಿರತೆ, ವ್ಯರ್ಥ ಮತ್ತು ಶಿಸ್ತು ಸೇರಿದಂತೆ ಮೈಕ್ರೊಗ್ರೀನ್ಸ್ ಉದ್ಯಮ ನಿಜವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸದೆ, ಪ್ರತಿ ತಿಂಗಳು ಲಕ್ಷ ರೂಪಾಯಿ ಗಳಿಸುವ ಶಾರ್ಟ್‌ಕಟ್‌ನಂತೆ ಬಿಂಬಿಸುವ ಕನಸನ್ನು ಬಿತ್ತುವವರು ಇದ್ದಾರೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಯಾವುದೇ ಆಹಾರ ಅಥವಾ ಕೃಷಿ ವ್ಯವಹಾರದ ಮೌಲ್ಯ ಸೃಷ್ಟಿಯ ಹಿಂದಿನ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಆ ಸ್ಪಷ್ಟತೆ ಇಲ್ಲದೆ, ಉತ್ಪ್ರೇಕ್ಷಿತ ಕಥನಗಳು ಜನರನ್ನು ದಾರಿ ತಪ್ಪಿಸುತ್ತವೆ.

ಮೈಕ್ರೋಗ್ರೀನ್‌ಗಳನ್ನು ಹೇಗೆ ಬೆಳೆಸಲಾಗುತ್ತದೆ?

ಮೈಕ್ರೊಗ್ರೀನ್ಸ್ ಅನ್ನು ವಿವಿಧ ವಿಧಾನಗಳನ್ನು ಬೆಳೆಸಬಹುದಾಗಿದೆ. ಮನೆಯ ಚಿಕ್ಕ ಜಾಗದಲ್ಲಿ ಅಡುಗೆಮನೆಯ ಶೆಲ್ಫ್‌ಗಳಲ್ಲೂ ಬೆಳೆದವರಿದ್ದಾರೆ. ಆದರೆ, ನೈರ್ಮಲ್ಯತೆ, ಉತ್ತಮ ಬೀಜದ ಆಯ್ಕೆ ಮುಖ್ಯವಾಗುತ್ತದೆ. ಕುಂಡಗಳಲ್ಲಿ ಮಣ್ಣು ಹಾಕಿ ಸಾಂಪ್ರದಾಯಿಕ ವಿಧಾನದಲ್ಲಿ ಮನೆಗಳಲ್ಲಿ ಬೆಳೆಯಲಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಉದ್ಯಮ ದೃಷ್ಟಿಯಿಂದ ಬೆಳೆಯುವವರು ಕಬ್ಬಿಣದ ರ್‍ಯಾಕ್‌ಗಳಲ್ಲಿ ಪ್ಲಾಸ್ಟಿಕ್ ಟ್ರೇಗಳನ್ನು ಇಟ್ಟು ಬೆಳಸಬಹುದಾಗಿದೆ. ಟ್ರೇಗಳಲ್ಲಿ ರಂಧ್ರಗಳನ್ನು ಮಾಡಿ ಹೆಚ್ಚು ಒದ್ದೆಯಾಗದಂತೆ ನೋಡಿಕೊಳ್ಳಬೇಕು. ನೀರನ್ನು ದಿನಕ್ಕೆ ಎರಡು ಮೂರು ಬಾರಿ ಸಣ್ಣದಾಗಿ ಚುಮುಕಿಸಬೇಕು. ನೀರು ಹೆಚ್ಚಾದರೂ ಬೇರು ಕೊಳೆಯುತ್ತದೆ. ಕಡಿಮೆಯಾದರೂ ಒಣಗುತ್ತದೆ. ಹಾಗಾಗಿ, ಸಮತೋಲನ ಕಾಪಾಡಬೇಕಿದೆ.

ಕೋಕೊಪೀಟ್: ತೇವಾಂಶ ಧಾರಣ ಮತ್ತು ಬೇರು ಬಿಡಲು ಅನುಕೂಲಕರವಾದ ವ್ಯಾಪಕವಾಗಿ ಬಳಸಲಾಗುವ ಕೊಕೊಪೀಟ್ ಬಳಸಿಯೂ ಪ್ಲಾಸ್ಟಿಕ್ ಅಥವಾ ಸ್ಟೀಲ್ ತಟ್ಟೆಗಳಲ್ಲಿ ಬೆಳೆಯಬಹುದಾಗಿದೆ. ಬೀಜ ಮೊಳಕೆಯೊಡೆಯುವವರೆಗೆ ನೆರಳಿನಲ್ಲಿ, ಬಳಿಕ ಬಿಸಿನಲ್ಲಿಟ್ಟು ಎಲೆ ಮೂಡುವವರೆಗೆ ಸಾಧಾರಣ ನೀರನ್ನು ಹಾಕಿ ಬೆಳೆಸಬಹುದಾಗಿದೆ.

ಟಿಶ್ಯೂ ಪೇಪರ್ ವಿಧಾನ: ಸಣ್ಣ ಬೀಜಗಳಾದ ಚಿಯಾ, ಅಗಸೆ ಬೀಜಗಳನ್ನು ಬಳಸಿ ಒದ್ದೆಯಾದ ಟಿಶ್ಯೂ ಪೇಪರ್ ಮೂಲಕವೂ ಮೈಕ್ರೊಗ್ರೀನ್ಸ್ ಬೆಳೆಸಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಪ್ರದರ್ಶನ ಅಥವಾ ಕಲಿಕೆಗೆ ಮಾತ್ರ ಬಳಸಲಾಗುತ್ತದೆ. ಉದ್ಯಮದ ಉದ್ದೇಶಕ್ಕೆ ಇದು ಸೂಕ್ತವಲ್ಲ. ಕೆಲವು ಜನರು ಇದನ್ನು ಬಳಸುತ್ತಿದ್ದರೂ ಸಹ, ಮೈಕ್ರೋಗ್ರೀನ್‌ಗಳನ್ನು ಹೇಗೆ ಬೆಳೆಸಲಾಗುತ್ತದೆ?ನೈರ್ಮಲ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು ಪೂರೈಸುವುದಿಲ್ಲ ಎನ್ನುತ್ತಾರೆ ರವೀಂದ್ರ.ಜಿ.

ಮೈಕ್ರ್ರೊಗ್ರೀನ್ಸ್ ಬೆಳೆಯುವಾಗ ಪಾಲಿಸಬೇಕಾದ ನಿಯಮಗಳು

* ಸಂಸ್ಕರಿಸದ ಮೈಕ್ರೋಗ್ರೀನ್ ಬೀಜಗಳನ್ನು ಬಳಸಿ

* ಸ್ವಚ್ಛವಾದ, ಸ್ಥಿರವಾದ ವಿಧಾನ ಆರಿಸಿಕೊಳ್ಳಿ

* ತೇವಾಂಶ ಕಾಪಾಡಿಕೊಳ್ಳಿ, ಒದ್ದೆಯಾಗಿರಬಾರದು

* ಮೊಳಕೆಯೊಡೆದ ನಂತರ ಸೂರ್ಯನ ಬೆಳಕಿನಲ್ಲಿಡಿ

* ನೈರ್ಮಲ್ಯ ಮತ್ತು ಗಾಳಿಯ ಪ್ರಸರಣವನ್ನು ಖಚಿತಪಡಿಸಿಕೊಳ್ಳಿ

* 7–14 ದಿನಗಳಲ್ಲಿ ಕೊಯ್ಲು ಮಾಡಿ

ಮೈಕ್ರೊಗ್ರೀನ್ ಉದ್ಯಮದಲ್ಲಿ ಯಶಸ್ಸು ಕಂಡಿರುವ ರವೀಂದ್ರ. ಜಿ ಅವರು ತರಬೇತಿ ಕಾರ್ಯಕ್ರಮವನ್ನು ಸಹ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.