ADVERTISEMENT

PV Web Exclusive: ಧ್ವನಿ ವಿಜ್ಞಾನಕ್ಕೆ ಸಾಕ್ಷಿ ಹದಿನಾರು ಕಂಬಗಳ ಈ ಮಸೀದಿ!

ಶಶಿಕಾಂತ್ ಎಸ್. ಶೆಂಬೆಳ್ಳಿ
Published 3 ಜನವರಿ 2026, 7:01 IST
Last Updated 3 ಜನವರಿ 2026, 7:01 IST
<div class="paragraphs"><p>ಧ್ವನಿ ವಿಜ್ಞಾನಕ್ಕೆ ಸಾಕ್ಷಿ ಹದಿನಾರು ಕಂಬಗಳ ಈ ಮಸೀದಿ!</p></div>

ಧ್ವನಿ ವಿಜ್ಞಾನಕ್ಕೆ ಸಾಕ್ಷಿ ಹದಿನಾರು ಕಂಬಗಳ ಈ ಮಸೀದಿ!

   

ಬೀದರ್‌: ಬೀದರ್‌ ಅಂದರೆ ಕೋಟೆ ಕೊತ್ತಲಗಳ ನಾಡು. ಇಲ್ಲಿ ಅನೇಕ ಸ್ಮಾರಕಗಳಿವೆ. ಆದರೆ, ಕೆಲವು ಸ್ಮಾರಕಗಳು ಅಪರೂಪದ ಪ್ರಯೋಗ, ವಿಜ್ಞಾನದ ಅಚ್ಚರಿಗೂ ಕಾರಣವಾಗಿವೆ. ವಿಜ್ಞಾನವನ್ನು ಸವಾಲೊಡ್ಡುವ ರೀತಿಯಲ್ಲಿ ಕಟ್ಟಲಾಗಿದೆ.

ಅಂತಹ ಸ್ಮಾರಕಗಳಲ್ಲಿ ಬೀದರ್‌ ಕೋಟೆಯ ‘ಸೋಲಹ ಕಂಬ ಮಸೀದಿ’ (ಹದಿನಾರು ಕಂಬಗಳ ಮಸೀದಿ) ಕೂಡ ಒಂದು. ಇದು ಬೀದರ್‌ನ ಬಹಮನಿ ಕೋಟೆಯ ಮಧ್ಯಭಾಗದಲ್ಲಿದೆ. ಇದು ಇಸ್ಲಾಮಿಕ್‌ ವಾಸ್ತುಶಿಲ್ಪದ ಕಟ್ಟಡ.

ADVERTISEMENT

ಇದು ಅಪರೂಪದ ಧ್ವನಿ ವಿಜ್ಞಾನದ ವಿನ್ಯಾಸದಿಂದ ನಿರ್ಮಿಸಿರುವಂತಹ ಕಟ್ಟಡ. ಇದರ ಹೆಸರು ಸೋಲಹ ಕಂಬ ಮಸೀದಿ. ಅಂದರೆ ಹದಿನಾರು ಕಂಬಗಳಿರುವ ಮಸೀದಿ ಎಂದರ್ಥ. ಆದರೆ, ಹೊರನೋಟಕ್ಕೆ ಹದಿನಾರು ಕಂಬಗಳ ಮಸೀದಿಯಂತೆ ಗೋಚರಿಸುತ್ತದೆ. ಆದರೆ, ವಾಸ್ತವದಲ್ಲಿ 19 ಕಂಬಗಳನ್ನು ಒಳಗೊಂಡಿದೆ.

ಸ್ಮಾರಕದ ಮಧ್ಯ ಭಾಗದಲ್ಲಿ ‘ಮಿಹ್ರಾಬ್‌’ ಎಂಬ ಸ್ಥಳವಿದೆ. ಅದರ ಮೇಲ್ಭಾಗದಲ್ಲಿ ದೊಡ್ಡ ಗುಂಬಜ್‌ ಇದ್ದು, ಅದರ ಸುತ್ತಲೂ ಚಿಕ್ಕ ಚಿಕ್ಕ ಗುಂಬಜ್‌ಗಳಿವೆ. ಕೆಳಭಾಗದಲ್ಲಿ ಬೆಳಕು, ಗಾಳಿ ದೊರಕುವಂತಹ ರೀತಿಯಲ್ಲಿ ನಿರ್ಮಿಸಿರುವುದು ವಿಶೇಷ. ‘ಮಿಹ್ರಾಬ್‌’ ಎಂಬ ಸ್ಥಳದಲ್ಲಿ ನಿಂತು ಆಡುವ ಸಣ್ಣನೆಯ ಮಾತು ಕೂಡ ಇಡೀ ಮಸೀದಿಯ ಮೂಲೆ ಮೂಲೆಗೂ ತಲುಪುವಂತೆ ವಿನ್ಯಾಸಗೊಳಿಸಲಾಗಿದೆ.

ಇದು ವಿಸ್ತೀರ್ಣದಲ್ಲಿ ದೊಡ್ಡ ಮಸೀದಿಯಾಗಿದ್ದು, ಈ ಹಿಂದೆ ಅಪಾರ ಸಂಖ್ಯೆಯ ಜನ ಒಟ್ಟಿಗೆ ಪ್ರಾರ್ಥನೆ ಮಾಡುತ್ತಿದ್ದರೆ, ಪ್ರಾರ್ಥನೆ ಮಾಡಿಸುತ್ತಿದ್ದ ಇಮಾಮ್‌ ನೀಡುವ ನಿರ್ದೇಶನದ ಮಾತುಗಳು ಅತ್ಯಂತ ದೂರದ ವ್ಯಕ್ತಿಗೂ ಬಹಳ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಈಗಲೂ ಅದೇ ಅನುಭವವಾಗುತ್ತದೆ. ಈ ಕಾರಣಕ್ಕಾಗಿಯೇ ಅಪರೂಪದ ಧ್ವನಿವಿಜ್ಞಾನದ ಪ್ರತೀಕವಾಗಿದೆ ಈ ಸ್ಮಾರಕ ಎನ್ನುತ್ತಾರೆ ಸಂಶೋಧಕರು.

ಅಂದಹಾಗೆ, ಈ ಸ್ಮಾರಕವು ಉತ್ತರ–ದಕ್ಷಿಣವಾಗಿ 310 ಅಡಿಗಳಷ್ಟು ಉದ್ದ ಮತ್ತು ಪಶ್ಚಿಮ–ಪೂರ್ವದಲ್ಲಿ 80 ಅಡಿಗಳಷ್ಟು ಅಗಲವಿದೆ. ಒಂದೇ ತೆರನಾಗಿರುವ ಕಟ್ಟಡದ ಕಮಾನುಗಳು ಕಟ್ಟಡದ ಸೊಬಗು ಹೆಚ್ಚಿಸಿವೆ. ಬಹಮನಿ ರಾಜಧಾನಿಯನ್ನು ಕಲಬುರಗಿಯಿಂದ ಬೀದರ್‌ಗೆ ಸ್ಥಳಾಂತರಿಸಿದ ಅಹಮ್ಮದ್‌ ಶಹಾ ಅಲಿ ವಲಿಯ ಮಗನಾದ ಯುವರಾಜ ಮುಹಮ್ಮದ್‌ ಕಟ್ಟಿಸಿದ (1422–23) ಎಂಬ ಅಭಿಪ್ರಾಯ ಗುಲಾಮ್‌ ಯಜ್ದಾನಿ ಅವರದು. ಬೀದರ್‌ನ ಮೊದಲ ಮುಸ್ಲಿಮ್‌ ವಾಸ್ತುಶಿಲ್ಪದ ಹೊಂದಿರುವ ಕಟ್ಟಡ ಎಂಬ ವಾದ ಅವರದು. ಆದರೆ, ಮಸೀದಿಯಲ್ಲಿ ದೊರೆತ ಶಾಸನವು ಮಹಮ್ಮದ್‌ ಬಿನ್‌ ತುಘಲಕ್‌ ಆಡಳಿತದ ಅವಧಿಯಲ್ಲಿ (1326–27) ನಿರ್ಮಾಣವಾಗಿದೆ.

ಬೇಕಿದೆ ನಿರ್ವಹಣೆ

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿರುವ ಈ ಸ್ಮಾರಕವನ್ನು ಪ್ರವಾಸಿಗರು ಹೊರಭಾಗದಿಂದ ನೋಡಲಷ್ಟೇ ಅವಕಾಶ ಕಲ್ಪಿಸಲಾಗಿದೆ. ಹೊರಭಾಗದಲ್ಲಿ ಉತ್ತಮ ಉದ್ಯಾನವಿದ್ದು, ಮಂಟಪದ ಸಾಲಿನ ರೀತಿಯಲ್ಲಿರುವ ಶ್ವೇತ ವರ್ಣದ ಈ ಕಟ್ಟಡವು ಸೂಜಿಗಲ್ಲಿನಂತೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಕರೆ ಕಲ್ಲು, ಗಾರೆ ಮಣ್ಣಿನಿಂದ ನಿರ್ಮಿಸಿರುವ ಈ ಕಟ್ಟಡದ ನಿರ್ವಹಣೆ ಬಹಳ ಅಗತ್ಯವಾಗಿ ಆಗಬೇಕಿದೆ. ಕಟ್ಟಡದ ಹೊರಭಾಗದ ಪ್ಲಾಸ್ಟರ್‌ ಕಳಚಿ ಬೀಳುತ್ತಿದ್ದು, ಅದನ್ನು ಸರಿಪಡಿಸುವ ಕೆಲಸ ಮಾಡಬೇಕಿದೆ.

–––––

‘ಬೀದರ್‌ ಕೋಟೆಯ ಪ್ರಮುಖ ಸ್ಮಾರಕಗಳನ್ನು ಹಂತ ಹಂತವಾಗಿ ಜೀರ್ಣೊದ್ಧಾರಗೊಳಿಸಲಾಗುತ್ತಿದೆ. ಇದರಲ್ಲಿ ಸೋಲಹ ಕಂಬ ಮಸೀದಿ ಕೂಡ ಸೇರಿದೆ.

–ಅಜಯ್‌ ಜನಾರ್ದನ್‌, ಹಿರಿಯ ಸಂರಕ್ಷಕ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಬೀದರ್‌ ವಿಭಾಗ

–––

ಬೀದರ್‌ ಕೋಟೆಯ ಸೋಲಹ ಕಂಬ ಮಸೀದಿ ಅಪರೂಪದ ಧ್ವನಿ ವಿಜ್ಞಾನದ ಸ್ಮಾರಕವಾಗಿದೆ. ಈ ರೀತಿಯ ಸ್ಮಾರಕ ಕರ್ನಾಟಕದಲ್ಲಿ ಬಹಳ ವಿರಳ. ಇದರ ಜೀರ್ಣೊದ್ಧಾರ ಬಹಳ ಅತ್ಯಗತ್ಯ.

–ಸಂತೋಷ್‌ ಹಾನಗಲ್‌, ಸಂಶೋಧಕ

–––

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.