
ಮಂಗಳೂರಿನ ಬಂಗ್ರ ಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಸಿಟಿಯ ರಾಮ– ಲಕ್ಷ್ಮಣ ಜೋಡುಕರೆಯಲ್ಲಿ ಈಚೆಗೆ ಸಮಾರೋಪಗೊಂಡ ‘ಮಂಗಳೂರು ಕಂಬಳ’ದ ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಅವರ ಕೋಣಗಳನ್ನು ಕಕ್ಯಪದವು ಪೆಂರ್ಗಾಲ್ ಕೃತಿಕ್ ಗೌಡ ಓಡಿಸಿದರು
ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್.
ಮಂಗಳೂರು: ತುಳುನಾಡು ಎಂದು ಕರೆಯಿಸಿಕೊಳ್ಳುವ ಉಡುಪಿ–ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಕಂಬಳದ ಋತು. ಕಂಬಳದ ಕೋಣಗಳು, ಕೋಣ ಓಡಿಸುವ ಓಟಗಾರರ ಸದ್ದಿನೊಂದಿಗೆ ‘ಅಲೆ ಬುಡಿಯೆರ್’ ಎಂಬ ಘೋಷಣೆ ಮೊಳಗುತ್ತಿದೆ.
ಕರಾವಳಿ ಭಾಗದಲ್ಲಿ ಕಂಬಳದ ಕೋಣಗಳನ್ನು ಸಾಕುವ 210ಕ್ಕೂ ಹೆಚ್ಚು ಮನೆತನಗಳು ಇವೆ. ಆ ಪೈಕಿ ಗುತ್ತು ಮನೆತನ (ಗೌಡಕಿ ಮನೆತನ) ದವರು ಹೆಚ್ಚು. ಕಂಬಳಕ್ಕಾಗಿಯೇ ಕೋಣ ಸಾಕುವುದು ಮಾಲೀಕರಿಗೆ ಪ್ರತಿಷ್ಠೆಯ ಸಂಕೇತ. ಆ ಕೋಣಗಳು ಕಂಬಳದಲ್ಲಿ ಪದಕ ಗೆದ್ದುಕೊಟ್ಟಂತೆಲ್ಲ ಅವರ ಗರಿಮೆ ಹೆಚ್ಚುತ್ತದೆ. ಕಂಬಳದ ಕೋಣಗಳನ್ನು ಸಾಕುವುದು ಬಿಳಿಯಾನೆಯಂತೆ ದುಬಾರಿ. ಎರಡು ಕೋಣಗಳ ನಿರ್ವಹಣೆಗೆ ವರ್ಷಕ್ಕೆ ₹10 ಲಕ್ಕಕ್ಕೂ ಮಿಕ್ಕಿ ವೆಚ್ಚಮಾಡಬೇಕಾಗುತ್ತದೆ ಎಂಬುದು ಕೋಣಗಳ ಮಾಲೀಕರು ಖಾಸಗಿಯಾಗಿ ಹೇಳುವ ಮಾತು.
ಕೋಣಗಳ ಆರೈಕೆಯ ವಿಷಯದಲ್ಲಿ ಶಿಸ್ತಿನ ಚೌಕಟ್ಟು ಪಾಲಿಸಲಾಗುತ್ತದೆ. ನಸುಕಿನಲ್ಲಿ ಅವುಗಳಿಗೆ ಒಣಗಿದ ಹುಲ್ಲು (ಬೈಹುಲ್ಲು) ನೀಡಲಾಗುತ್ತದೆ. ಹಸಿ ಹುಲ್ಲು ಹೆಚ್ಚು ಕೊಡುವುದಿಲ್ಲ. ಬೆಳಿಗ್ಗೆ ಹಾಗೂ ಸಂಜೆ ಹೊರಗೆ ಎಳೆಬಿಸಿಲಿಗೆ ಬಿಡುತ್ತಾರೆ. ನಂತರ ಹುರುಳಿ (ಮೊಳಕೆ ಬಂದಿದ್ದ ಅಥವಾ ಬೇಯಿಸಿದ್ದು) ನೀಡಲಾಗುತ್ತದೆ. ಋತುಮಾನಕ್ಕೆ ತಕ್ಕಂತೆ ಕಲ್ಲಂಗಡಿ, ಗಜ್ಜರಿ, ಬಗೆ ಬಗೆಯ ಧಾನ್ಯ, ಕುಂಬಳಕಾಯಿ, ವಿವಿಧ ಬಗೆಯ ಹಣ್ಣುಗಳನ್ನು ತಿನ್ನಿಸಲಾಗುತ್ತದೆ. ಧಡೂತಿ ದೇಹ ಬೆಳೆಯಬಾರದು ಎಂಬ ಕಾರಣಕ್ಕೆ ದೈಹಿಕ ಕಸರತ್ತು ಮಾಡಿಸಲಾಗುತ್ತದೆ. ಚರ್ಮದ ಕಾಂತಿ ಹೆಚ್ಚಿಸಲು ನಿತ್ಯವೂ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಲಾಗುತ್ತದೆ. ನಾಟಿ ವೈದ್ಯರು ಹಾಗೂ ಪಶುವೈದ್ಯರಿಂದ ಆರೋಗ್ಯ ತಪಾಸಣೆ, ಮೇಲ್ವಿಚಾರಣೆಯೂ ನಿಯಮಿತವಾಗಿರುತ್ತದೆ.
ಕಂಬಳ
ಕಂಬಳಕ್ಕೆ ಅದು ಸರಿ ಹೊಂದುತ್ತದೆಯೇ ಎಂದು ಎಲ್ಲ ಆಯಾಮಗಳಲ್ಲಿಯೂ ಪರಿಶೀಲನೆ ನಡೆಸಿಯೇ ಉತ್ತರ ಕರ್ನಾಟಕ, ಹಳೆ ಮೈಸೂರು ಭಾಗದಿಂದ ಕರುಗಳನ್ನು ಖರೀದಿಸುತ್ತಾರೆ. ಪ್ರಕೃತಿ ಸಹಜ ಪ್ರಕ್ರಿಯೆಯಲ್ಲಿ ಹುಟ್ಟಿದ (ಕೃತಕ ಗರ್ಭಧಾರಣೆಯಿಂದ ಜನಿಸಿದ ಕರು ಖರೀದಿಸುವುದಿಲ್ಲ) ಕರುವನ್ನು ಅದರ ಮೈಬಣ್ಣ, ಮೈಕಟ್ಟು, ಚುರುಕುತನ, ಕಾಲು ಮತ್ತು ತಲೆಯ ಗಾತ್ರ, ಚೂಪಾದ ಬಾಲ... ಇಂತಹ ಅಂಶಗಳನ್ನು ನೋಡಿ ಖರೀದಿಸಲಾಗುತ್ತದೆ ಎನ್ನುತ್ತಾರೆ ಕೋಣ ಸಾಕುವವರು.
ಕಂಬಳಕ್ಕಾಗಿಯೇ ಸಾಕುವುದರಿಂದ ಅವುಗಳನ್ನು ಸ್ಪರ್ಧೆಗೆ ಅಣಿಗೊಳಿಸುವ ಕೆಲಸ ವರ್ಷಪೂರ್ತಿ ನಡೆದೇ ಇರುತ್ತದೆ. ಮಾಲೀಕರು ಇದಕ್ಕಾಗಿಯೇ ತಮ್ಮ ಗದ್ದೆಯಲ್ಲಿ ಕೆಸರಿನ ಟ್ರ್ಯಾಕ್ (ಕಳ) ನಿರ್ಮಿಸಿಕೊಂಡಿರುತ್ತಾರೆ. ಅವುಗಳನ್ನು ನಿತ್ಯವೂ ಅಲ್ಲಿ ಓಡಿಸಿ ತರಬೇತಿ ನೀಡುತ್ತಾರೆ. ಇನ್ನು ಕೆಲ ಮಾಲೀಕರು ತಮ್ಮ ಜಮೀನಿನಲ್ಲಿಯೇ ದೊಡ್ಡ ದೊಡ್ಡ ಈಜುಗೊಳ ನಿರ್ಮಿಸುತ್ತಾರೆ. ಅಲ್ಲಿ ಈಜಾಡಲು ಬಿಡುತ್ತಾರೆ. ಇಂತಹ ಒಂದೊಂದು ಕೋಣ ₹10ರಿಂದ ₹50 ಲಕ್ಷದ ವರೆಗೆ ಬೆಲೆ ಬಾಳುತ್ತವೆ. ಕಂಬಳದಲ್ಲಿ ಸಾಮಾನ್ಯವಾಗಿ 3ರಿಂದ 15 ವರ್ಷ ವಯಸ್ಸಿನ ಕೋಣಗಳು ಓಡುತ್ತವೆ. ಎಂಟು ಹಲ್ಲು ಇದ್ದರೆ ಆ ಕೋಣ ಹಿರಿಯ ವಿಭಾಗಕ್ಕೆ ಸೇರುತ್ತದೆ.
ಕಂಬಳ ಸ್ಪರ್ಧೆಗಳಲ್ಲಿ ಹೆಸರು ಮಾಡಿದ ಕೋಣಗಳಿಗೆ ಅಭಿಮಾನಿಗಳ ಸಂಖ್ಯೆಯೂ ದೊಡ್ಡದಿದೆ. ‘ಚೆನ್ನ’ ಹೆಸರಿನ ಕೋಣದ ಹೆಸರಲ್ಲಿ ಅಂಚೆ ಇಲಾಖೆ ಅಂಚೆಚೀಟಿ ಹೊರ ತಂದಿದೆ.
ಕಂಬಳ ಸ್ಪರ್ಧೆ: 150 ಮೀಟರ್ ವರೆಗೂ ಉದ್ದದ ಜೋಡಿ ಟ್ರ್ಯಾಕ್‌ಗಳಲ್ಲಿ ಸ್ಪರ್ಧೆ ನಡೆಯುತ್ತದೆ. ಇದಕ್ಕೆ ಜೋಡು ಕರೆ ಕಂಬಳ ಎನ್ನಲಾಗುತ್ತದೆ. ರಾಮ–ಲಕ್ಷ್ಮಣ, ಲವ–ಕುಶ, ಕೋಟಿ- ಚೆನ್ನಯ, ಸೂರ್ಯ- ಚಂದ್ರ, ವಿಜಯ-ವಿಕ್ರಮ, ಜಯ-ವಿಜಯ... ಹೀಗೆ ಇವುಗಳಿಗೆ ಹೆಸರು ಇಡಲಾಗಿದೆ. ಕೆಲ ಗುತ್ತು ಮನೆತನದವರು ನಡೆಸುವ ಕಂಬಳಗಳಿಗೆ ತಮ್ಮ ದೈವದ ಹೆಸರುಗಳನ್ನೂ ಇಟ್ಟಿದ್ದಾರೆ.
ಶನಿವಾರ ಮಂಗಳೂರಿನ ಗೋಲ್ಡ್ ಫಿಂಚ್‌ನಲ್ಲಿ ಮಂಗಳೂರು ಕಂಬಳ ರಾಮ ಲಕ್ಷ್ಮಣ ಜೋಡುಕರೆಯಲ್ಲಿ ನಡೆಯಿತು. ಮಿಜಾರ್‌ನ ಶಕ್ತಿ ಪ್ರಸಾದ್ ಶಟ್ಟಿ ಮಾಲೀಕತ್ವದ ಪಕ್ಕು ರಾಮ ಕೋಣಗಳನ್ನು ಜಾಕಿ ಶ್ರೀನಿವಾಸ ಗೌಡ ಓಡಿಸಿದರು
ಕಂಬಳ ಸ್ಪರ್ಧೆಯಲ್ಲಿ ಆರು ವಿಧಗಳು: ಹಗ್ಗ ಕಿರಿಯ– ಹಗ್ಗ ಹಿರಿಯ, ನೇಗಿಲು ಕಿರಿಯ–ನೇಗಿಲು ಹಿರಿಯ, ಅಡ್ಡ ಹಲಗೆ, ಕನೆ ಹಲಗೆ.
ಫಲಿತಾಂಶ ಅವಲಂಬಿಸಿರುವುದು ಕೋಣಗಳ ಓಟದ ವೇಗದ ಮೇಲೆ. ಅಂತಿಮ ಗೆರೆಯ ಮೇಲೆ ಮೊದಲು ಕಾಲಿಟ್ಟ ಕೋಣದ ಜೋಡಿಗೆ ಚಿನ್ನದ ಪದಕ ಲಭಿಸುತ್ತದೆ. ಮೊದಲು ಫಲಿತಾಂಶ ನಿರ್ಧರಿಸಲು ಮಾರ್ಕಿಂಗ್, ಹಗ್ಗ ಬಳಸಲಾಗುತ್ತಿತ್ತು. ವಿಡಿಯೊ ಕ್ಯಾಮೆರಾ, ಸಿಸಿಟಿವಿ ಅಳವಡಿಸಲಾಗುತ್ತಿದ್ದು, ಲೇಸರ್ ಬೀಮ್ ತಂತ್ರಜ್ಞಾನವನ್ನೂ ಬಳಸಲಾಗುತ್ತಿದೆ. ಸೆನ್ಸರ್ ಬಳಕೆಯೂ ಆರಂಭವಾಗಿದೆ. ಕ್ರಿಕೆಟ್ ಮತ್ತು ಫುಟ್‌ಬಾಲ್ ಪಂದ್ಯಗಳಲ್ಲಿ ಇರುವಂತೆ ಕಂಬಳದಲ್ಲೂ ತೀರ್ಪು ಪರಿಶೀಲನೆ ಪದ್ಧತಿ ಜಾರಿಗೆ ಬಂದಿದೆ. ಕಂಬಳದಲ್ಲಿ ಫಲಿತಾಂಶ ಅಳೆಯಲು ಬಳಸುವ ಲೇಜರ್ ಬೀಮ್ ತಂತ್ರಜ್ಞಾನ ಕೈಕೊಟ್ಟರೆ, ಓಟ ಟೈ ಅದರೆ ಅಥವಾ ಸಂದೇಹಗಳು ಬಂದರೆ ಟಿವಿ ಅಂಪೈರ್ ನೆರವು ಪಡೆಯಲಾಗುತ್ತದೆ. ಕೋಣಗಳ ಮಾಲೀಕರ ಸಮಕ್ಷಮದಲ್ಲಿ ಟಿವಿ ದೃಶ್ಯಾವಳಿ ಪರಿಶೀಲಿಸಿ ಮೂರನೇ ಅಂಪೈರ್ ಅಂತಿಮ ತೀರ್ಪು ನೀಡುವ ಪದ್ಧತಿ ಇದೆ.
ಕಂಬಳದ ಓಟಗಾರರಿಗೆ ಒಂದು ಋತುವಿನ ಕಂಬಳಕ್ಕೆ ಇಂತಿಷ್ಟು ಎಂದು ಆಯಾ ಕೋಣಗಳ ಮಾಲೀಕರು ಸಂಭಾವನೆ ನಿಗದಿ ಮಾಡಿರುತ್ತಾರೆ. ಬೇಡಿಕೆಯ ಓಟಗಾರರಿಗೆ ₹ 7 ಲಕ್ಷ ವರೆಗೂ ಸಂಭಾವನೆ ನೀಡಲಾಗುತ್ತದೆ. ಪ್ರತಿ ಋತುವಿನಲ್ಲಿ ಕನಿಷ್ಠ 25 ಕಂಬಳ ನಡೆಯುತ್ತಿದ್ದು, ಪ್ರತಿ ಕಂಬಳ ಹಾಗೂ ಗೆಲುವಿಗೆ ಅವರಿಗೆ ಹೆಚ್ಚುವರಿ ಹಣವನ್ನೂ ಕೊಡಲಾಗುತ್ತದೆ. ಕೋಣ ಓಡಿಸುವವರು ಕೃಷಿಕರೇ ಆಗಿರುತ್ತಾರೆ. ಕೆಸರಿನಲ್ಲಿ ಕೆಲಸ ಮಾಡಿ ಅನುಭವ ಇರುವ, ದೈಹಿಕ ಕ್ಷಮತೆ ಕಾಯ್ದುಕೊಳ್ಳುವವರನ್ನು ಹೆಚ್ಚಾಗಿ ಇದಕ್ಕೆ ಬಳಸಿಕೊಳ್ಳಲಾಗುತ್ತದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 250ಕ್ಕೂಹೆಚ್ಚು ಕಂಬಳ ಓಟಗಾರರು ಇದ್ದಾರೆ. ಶ್ರೀನಿವಾಸ ಗೌಡ, ನಿಶಾಂತ್ ಶೆಟ್ಟಿ ಮುಂತಾದವರು ಕಂಬಳದ ಓಟದಲ್ಲಿ ದಾಖಲೆ ಬರೆದಿದ್ದಾರೆ. ಶ್ರೀನಿವಾಸ್ ಗೌಡ ಅವರು ಉಡುಪಿ ಮೂಲಕದ ಆಭರಣ ಜ್ಯುವೆಲರ್ಸ್‌ನ ರೂಪದರ್ಶಿ ಆಗಿದ್ದರು.
ಪ್ರಸಕ್ತ ಕಂಬಳ ಋತುವಿನಲ್ಲಿ 80 ಬಡಗಬೆಟ್ಟು ಕಲ್ಲಪಾಪು ಶ್ರೀಕಾ ಸಂದೀಪ್ ಶೆಟ್ಟಿ ಅವರ ಕೋಣಗಳ ಜೋಡಿ ಕಂಬಳದ ಅತಿ ವೇಗದ ಓಟದ ದಾಖಲೆಯನ್ನು ಸ್ಥಾಪಿಸಿವೆ. ಮಂಗಳೂರು ರಾಮ -ಲಕ್ಷ್ಮಣ ಜೋಡುಕರೆ ಕಂಬಳದ ನೇಗಿಲು ಹಿರಿಯ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಈ ದಾಖಲೆ ನಿರ್ಮಾಣವಾಗಿದೆ. ಶ್ರೀಕಾ ಸಂದೀಪ್ ಶೆಟ್ಟಿ ಮಾಲಿಕತ್ವದ ಗಾಂಧಿ ಮೈದಾನ ಸಂತು ಮತ್ತು ಸುರತ್ಕಲ್ ಪಾಂಚ ಕೋಣಗಳನ್ನು ಕುಂದ ಬಾರಂದಡಿ ಮಾಸ್ತಿಕಟ್ಟೆಯ ಸ್ವರೂಪ್ ಕುಮಾರ್ ಓಡಿಸಿದ್ದರು. ಆ ಕೋಣಗಳು 125 ಮೀ ದೂರವನ್ನು 10.87 ಸೆಕೆಂಡ್‌ಗಳಲ್ಲಿ ಕ್ರಮಿಸಿದವು. ಈ ಲೆಕ್ಕಾಚಾರದಂತೆ 100 ಮೀ ದೂರವನ್ನು 8.69 ಸೆಕೆಂಡ್‌ಗಳಲ್ಲಿ ಕ್ರಮಿಸಿದಂತಾಗಿದೆ. ಕಂಬಳದ ಅತಿ ವೇಗದ ಓಟ ದಾಖಲೆ ಈ ಹಿಂದೆ ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಅವರ ಮಾಳ ಪುಟ್ಟ ಮತ್ತು ಮಿಜಾರ್ ಅಪ್ಪು ಕೋಣಗಳ ಹೆಸರಿನಲ್ಲಿತ್ತು. 2021ರಲ್ಲಿ ಕಕ್ಯಪದವು ಕಂಬಳದಲ್ಲಿ ಆ ಕೋಣಗಳನ್ನು ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಓಡಿಸಿದ್ದರು. ಅಂದು ಆ ಕೋಣಗಳು 125 ಮೀಟರ್ ಅನ್ನು 10.95 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದವು. 100 ಮೀ ದೂರವನ್ನು 8.76 ಸೆಕೆಂಡ್‌ಗಳಲ್ಲಿ ಕ್ರಮಿಸಿದಂತಾಗಿತ್ತು.
ಕಂಬಳ
ರಾಜ್ಯ ಸರ್ಕಾರ ಕಂಬಳ ಕ್ರೀಡೆಗೆ ಮಾನ್ಯತೆ ನೀಡಿದ್ದು, ಕರ್ನಾಟಕ ರಾಜ್ಯ ಕಂಬಳ ಸಂಸ್ಥೆ ರಚನೆಯಾಗಿದೆ. ರಾಜ್ಯ ಸರ್ಕಾರ ಅನುದಾನವನ್ನೂ ನೀಡುತ್ತಿದೆ.
ಈಗಾಗಲೇ ಕಂಬಳದ ‘ಸೀಮೋಲ್ಲಂಘನೆ‘ಯೂ ಆಗಿತ್ತು. ಅಂದರೆ, ಕಂಬಳವನ್ನು ಬೆಂಗಳೂರಿನಲ್ಲಿ ನಡೆಸಲಾಗಿತ್ತು. ಮುಂದಿನ ವರ್ಷದಿಂದ ಮೈಸೂರು, ಶಿವಮೊಗ್ಗದಲ್ಲಿ ಕಂಬಳ ನಡೆಸುವ ಚಿಂತನೆ ಕಂಬಳ ಸಂಸ್ಥೆಯದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.