ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ತುಮಕೂರು: ಜಿಲ್ಲೆಯಲ್ಲಿ ಅವಧಿ ಪೂರ್ವ ಹೆರಿಗೆಗಳ ಸಂಖ್ಯೆ ಹೆಚ್ಚುತ್ತಿದ್ದು, ಇದು ನವಜಾತ ಶಿಶು ಮತ್ತು ತಾಯಿ ಮರಣ ಪ್ರಮಾಣ ಏರಿಕೆಗೆ ಹಾದಿ ಮಾಡಿಕೊಡುತ್ತಿದೆ.
ಕಳೆದ ಮೂರು ವರ್ಷದಲ್ಲಿ 5,446 ಹೆರಿಗೆಗಳು 9 ತಿಂಗಳು ತುಂಬುವ ಮುನ್ನ ಆಗಿವೆ. ಒಟ್ಟು ಹೆರಿಗೆ ಪೈಕಿ ಶೇ 10ರಷ್ಟು ಇದೇ ರೀತಿ ಆಗುತ್ತಿವೆ. 2023–24ರಲ್ಲಿ 1,763, 2024–25ರಲ್ಲಿ 2,190 ಗರ್ಭಿಣಿಯರಿಗೆ ಅವಧಿಗೂ ಮುನ್ನವೇ ಹೆರಿಗೆಯಾಗಿದೆ. ಸರ್ಕಾರಿ ಮತ್ತು ಖಾಸಗಿ ಎರಡೂ ಆಸ್ಪತ್ರೆಗಳಲ್ಲಿ ಇಂತಹ ಹೆರಿಗೆಗಳ ಸಂಖ್ಯೆ ಹೆಚ್ಚಾಗುತ್ತಿವೆ.
37 ವಾರಗಳ ಒಳಗೆ ಹೆರಿಗೆಯಾದರೆ ಅದನ್ನು ಅವಧಿ ಪೂರ್ವ ಹೆರಿಗೆ ಎಂದು ಪರಿಗಣಿಸಲಾಗುತ್ತದೆ. ಕಳೆದ ಮೂರು ವರ್ಷದಲ್ಲಿ ಬಹುತೇಕ ಹೆರಿಗೆಗಳು 32ರಿಂದ 34ನೇ ವಾರಕ್ಕೆ ಆಗಿವೆ. ಹೀಗಾದರೆ ಹೆರಿಗೆ ನಂತರ ಶಿಶು ಸಾವನ್ನಪ್ಪುವ ಸಂಭವ ಹೆಚ್ಚಿರುತ್ತದೆ. ಮಗು ಬದುಕಿ ಉಳಿದರೆ ಅಪೌಷ್ಟಿಕತೆಯಿಂದ ಬಳಲುತ್ತದೆ. ತೂಕ ಕಡಿಮೆ ಇರುವುದರಿಂದ ಬೆಳವಣಿಗೆಯೂ ಕುಂಠಿತವಾಗುತ್ತದೆ.
ಜಿಲ್ಲೆಯ ಪೈಕಿ ತುಮಕೂರು ತಾಲ್ಲೂಕಿನಲ್ಲಿ ಅವಧಿ ಪೂರ್ವ ಹೆರಿಗೆ ಸಂಖ್ಯೆ ಜಾಸ್ತಿಯಾಗುತ್ತಿದೆ. ಕಳೆದ ವರ್ಷ 1,500 ಗರ್ಭಿಣಿಯರಿಗೆ 37 ವಾರ ತುಂಬುವ ಮೊದಲೇ ಹೆರಿಗೆಯಾಗಿದೆ. ನಂತರದ ಸ್ಥಾನವನ್ನು ಶಿರಾ ಪಡೆದಿದೆ. ಇಲ್ಲಿ ಕಳೆದ ಮೂರು ವರ್ಷದಲ್ಲಿ 627 ಗರ್ಭಿಣಿಯರು ಅವಧಿಗೂ ಮುನ್ನವೇ ಶಿಶುವಿಗೆ ಜನ್ಮ ನೀಡಿದ್ದಾರೆ.
37 ವಾರಕ್ಕೂ ಮೊದಲೇ ಆಗುವ ಹೆಚ್ಚಿನ ಹೆರಿಗೆಗಳು ಸಿಸೇರಿಯನ್ ಮೂಲಕವೇ ಆಗಿವೆ. ಗರ್ಭಿಣಿಯರಲ್ಲಿ ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ, ರಕ್ತಹೀನತೆ ಸಮಸ್ಯೆ ಕಾಣಿಸಿಕೊಂಡರೆ ಹೆರಿಗೆ ಬೇಗ ಆಗುತ್ತದೆ. ಇದು ಶಿಶುವಿನ ಜೀವಕ್ಕೆ ಅಪಾಯ ತಂದೊಡ್ಡುತ್ತದೆ. ಇದರ ತಡೆಗೆ ಗರ್ಭಾವಸ್ಥೆಯಿಂದಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ತಾಯಂದಿರು ಎಚ್ಚರಿಕೆ ವಹಿಸಿದಷ್ಟೂ ಉತ್ತಮ. ಪೌಷ್ಟಿಕ ಆಹಾರ ಸೇವನೆಗೆ ಆದ್ಯತೆ ನೀಡಬೇಕು ಎಂದು ತಜ್ಞ ವೈದ್ಯರು ಹೇಳುತ್ತಾರೆ.
‘32ರಿಂದ 37 ವಾರಗಳ ಒಳಗಡೆ ಹೆರಿಗೆಯಾದರೆ ಮಗುವಿಗೆ ಹಾಲುಣಿಸಲು ತೊಂದರೆಯಾಗುತ್ತದೆ. ಆದಷ್ಟು ಬೆಚ್ಚಗೆ ಇರುವಂತೆ ನೋಡಿಕೊಳ್ಳಬೇಕು. ಉಷ್ಣಾಂಶ ಕಡಿಮೆಯಾದರೆ ಉಸಿರಾಟದ ಸಮಸ್ಯೆಯಾಗಿ ಶಿಶು ಪ್ರಾಣ ಕಳೆದುಕೊಳ್ಳಬಹುದು. ಇದರ ಬಗ್ಗೆ ತಾಯಿ, ವೈದ್ಯರು ಎಚ್ಚರ ವಹಿಸಬೇಕಾದ ಅಗತ್ಯ ಇದೆ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಮನೆಯಲ್ಲಿಯೂ ನಿಗಾ ವಹಿಸಬೇಕು. ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಮಗು, ತಾಯಿ ಇಬ್ಬರ ಪ್ರಾಣಕ್ಕೆ ಕುತ್ತು ಬರುತ್ತದೆ’ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಮೋಹನ್ ಎಚ್ಚರಿಸುತ್ತಾರೆ.
ಅವಧಿ ಪೂರ್ವ ಹೆರಿಗೆಯಿಂದ ಆಗುವ ತೊಂದರೆಗಳ ಕುರಿತು ಗರ್ಭಿಣಿಯರಿಗೆ ಅರಿವು ಮೂಡಿಸಲಾಗುತ್ತಿದೆ. ಪೌಷ್ಟಿಕ ಆಹಾರ ಸೇವನೆಗೆ ಮಾರ್ಗದರ್ಶನ ಮಾಡಲಾಗುತ್ತಿದೆ. ಆಸ್ಪತ್ರೆಗಳಿಂದ ಕಬ್ಬಿಣಾಂಶ ಮಾತ್ರೆ ವಿತರಿಸಲಾಗುತ್ತಿದೆ. ಸಕಾಲಕ್ಕೆ ಆರೋಗ್ಯ ಸೇವೆ ತಲುಪಿಸಲಾಗುತ್ತಿದೆ. ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡರೆ ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ.ಡಾ.ಮೋಹನ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ
‘ಅವಧಿ ಪೂರ್ವ ಹೆರಿಗೆ ತಡೆಯುವುದು ಬಹಳ ಕಷ್ಟ. ಹೀಗಾಗಿಯೇ ಶಿಶು ಮರಣ ಸಂಪೂರ್ಣ ನಿಯಂತ್ರಣ ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಸ್ತ್ರೀರೋಗ ತಜ್ಞೆ ಡಾ.ಉಷಾ.
ಮೊದಲ ಹೆರಿಗೆಯ ಸಮಯದಲ್ಲಿ ಹೀಗೆಯೇ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಗರ್ಭಾವಸ್ಥೆಯಲ್ಲಿ ಉತ್ತಮ ಆಹಾರ ಸೇವನೆ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡುತ್ತಾರೆ.
| ವರ್ಷ | ಹೆರಿಗೆ |
|---|---|
| 2023–24 | 1,763 |
| 2024–25 | 2,190 |
| 2025–26 | 1,493 |
| ತಾಲ್ಲೂಕು | ಹೆರಿಗೆ |
|---|---|
| ಚಿಕ್ಕನಾಯಕನಹಳ್ಳಿ | 24 |
| ಗುಬ್ಬಿ | 25 |
| ಕೊರಟಗೆರೆ | 104 |
| ಕುಣಿಗಲ್ | 177 |
| ಮಧುಗಿರಿ | 427 |
| ಪಾವಗಡ | 287 |
| ಶಿರಾ | 627 |
| ತಿಪಟೂರು | 167 |
| ತುಮಕೂರು | 3,598 |
| ತುರುವೇಕೆರೆ | 10 |
| ಒಟ್ಟು | 5,446 |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.