ADVERTISEMENT

ಯುದ್ಧದಲ್ಲಿ ಮಡಿದ ವೀರರ ಕಥೆ ಹೇಳುವ ಶಿಲೋದ್ಯಾನ: ನೋಡ ಬನ್ನಿ, ವೀರಗಲ್ಲು ಪಾರ್ಕ್‌

ಕೆ.ಓಂಕಾರ ಮೂರ್ತಿ
Published 19 ಜನವರಿ 2026, 2:09 IST
Last Updated 19 ಜನವರಿ 2026, 2:09 IST
   

ಕೋಲಾರ: ನಾವು ವಿವಿಧೆಡೆ ವಾಟರ್‌ ಪಾರ್ಕ್‌, ಅನಿಮಲ್‌ ಪಾರ್ಕ್‌, ಫುಡ್‌ ಪಾರ್ಕ್‌ ನೋಡಿದ್ದೇವೆ, ಕೇಳಿದ್ದೇವೆ. ಆದರೆ, ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲೊಂದು ಕಲ್ಲುಗಳಿಗೊಂದು ವಿಶೇಷ ಪಾರ್ಕ್‌ ನಿರ್ಮಿಸಲಾಗಿದೆ.

ಅದುವೇ ವೀರಗಲ್ಲುಗಳ ಉದ್ಯಾನ, ಶಿಲೋದ್ಯಾನ. ಶತಮಾನಗಳ ಹಿಂದೆ ಈ ಭಾಗದಲ್ಲಿ ನಡೆದ ಯುದ್ಧಗಳಲ್ಲಿ ಮಡಿದ ವೀರರ ನೆನಪುಗಳು, ತ್ಯಾಗಗಳನ್ನು ಈ ವೀರಗಲ್ಲುಗಳು ಬಿಚ್ಚಿಡುತ್ತವೆ.

ಇವು ವಿಜಯನಗರ ಸಾಮ್ರಾಜ್ಯ ಸೇರಿದಂತೆ ವಿವಿಧ ರಾಜಮನೆತನಗಳ ಆಳ್ವಿಕೆ ಕಾಲದ ವೀರಗಲ್ಲುಗಳು. ವಿವಿಧ ಗ್ರಾಮಗಳ ಸುತ್ತ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪಾಳು ಬಿದ್ದು ದುರ್ಬಳಕೆ ಆಗುತ್ತಿದ್ದವು. ಬಟ್ಟೆ ಹೊಗೆಯಲು, ಅಡಿಪಾಯ ಹಾಕಲು, ಕೊಟ್ಟಿಗೆ ನಿರ್ಮಿಸಿಕೊಳ್ಳಲು, ಜಾನುವಾರು ಕಟ್ಟಲು ಜನರು ಬಳಸಿಕೊಳ್ಳುತ್ತಿದ್ದರು.

ADVERTISEMENT

ಇಂಥ ವೀರಗಲ್ಲು, ಶಾಸನಗಳನ್ನು ಸಂರಕ್ಷಿಸಲು ಒಂದೆಡೆ ಸೇರಿಸಿ ಉದ್ಯಾನದ ರೂಪ ಕೊಡಲಾಗಿದೆ. ಇಡೀ ರಾಜ್ಯಕ್ಕೆ ಮಾದರಿಯಾಗಿ ಈ ಉದ್ಯಾನ ಹೊರಹೊಮ್ಮಿದೆ.

ಉದ್ಯಾನದಲ್ಲಿ ಹತ್ತಾರು ವೀರಗಲ್ಲುಗಳನ್ನು ಸಾಲಾಗಿ ಜೋಡಿಸಿಟ್ಟು, ರಕ್ಷಣೆಗೆ ಗೋಪುರ ಕೂಡ ನಿರ್ಮಿಸಲಾಗಿದೆ. ಇದಕ್ಕೆ ಮೆರುಗು ನೀಡುವಂತೆ ಉದ್ಯಾನದ ಪಕ್ಕದಲ್ಲೇ ಪುಷ್ಕರಿಣಿ ಅಭಿವೃದ್ಧಿಪಡಿಸಲಾಗಿದೆ. ಹಿಂದೆ ಚಿರತೆ ಹಿಡಿಯುತ್ತಿದ್ದ ಕಲ್ಲಿನಾಕಾರದ ಬೋನು ಕೂಡ ಇಲ್ಲಿದೆ. ಬೃಹತ್‌ ಬಂಡೆಯಾಕಾರದ ಕಲ್ಲಿನ ಕೆಳಗಡೆ ಪಾಂಡವರ ಗುಡಿ ಇದೆ. ರಾಜರ ಕಾಲದಲ್ಲಿ ಬಳಸುತ್ತಿದ್ದ ಹೊರಳುಕಲ್ಲು ಇದೆ. ಪಕ್ಕದಲ್ಲೇ ಇರುವ ಬೆಟ್ಟ, ಪ್ರಾಚೀನ ಗುಡಿಗಳು ಈ ಊರನ್ನು ಪ್ರವಾಸಿ ಗ್ರಾಮವಾಗಿ ಮಾರ್ಪಡಿಸಿವೆ. ಈ ಉದ್ಯಾನವೀಗ ಪ್ರವಾಸಿ ತಾಣವಾಗಿಯೂ ಗಮನ ಸೆಳೆಯುತ್ತಿದೆ. ಇತಿಹಾಸ ಪ್ರೇಮಿಗಳು, ಸಂಶೋಧಕರು ಹಾಗೂ ಸುತ್ತಲಿನ ಗ್ರಾಮಸ್ಥರು ಭೇಟಿ ನೀಡಿ ವೀಕ್ಷಿಸುತ್ತಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಚೋಳರು, ಗಂಗರು ಆಳ್ವಿಕೆ ನಡೆಸಿದ್ದರು. ಆಗಿನ ಕಾಲದ ಶಿಲೆಗಳು, ವೀರಗಲ್ಲುಗಳ ಕೂಡ ವಿವಿಧೆಡೆ ಪಾಳು ಬಿದ್ದಿದ್ದವು. ಇಂಥ ಐತಿಹಾಸಿಕ ಕುರುಹುಗಳ ಸಂರಕ್ಷಣೆಗೆ ಇತಿಹಾಸ ಪ್ರೇಮಿಗಳು, ಸಂಶೋಧಕರ ಸಲಹೆ ಪರಿಶೀಲಿಸಿ‌ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಉದ್ಯಾನ ರೂಪ ಕೊಡಲು ಮುಂದಾದವು. ಮನರೇಗಾ ಯೋಜನೆಯಡಿ ಉದ್ಯಾನ ನಿರ್ಮಿಸಿ ಸಂರಕ್ಷಿಸಲಾಗಿದೆ. ಈಚೆಗೆ ಕೋಲಾರ ಜಿಲ್ಲಾಧಿಕಾರಿ ಎಂ.ಆರ್.ರವಿ ಭೇಟಿ ನೀಡಿದ್ದು, ಖುದ್ದಾಗಿ ಆಸಕ್ತಿ ವಹಿಸಿ ಮತ್ತಷ್ಟು ಅಭಿವೃದ್ಧಿಗೆ ಹೆಜ್ಜೆ ಇಟ್ಟಿದ್ದಾರೆ.

ಇತಿಹಾಸ ಪ್ರೇಮಿಯೂ ಆಗಿರುವ ಐಟಿ ಉದ್ಯೋಗಿ ಬೆಂಗಳೂರಿನ ಸ್ವಾಮಿನಾಥನ್, ಅರಿವು ಭಾರತ ಸಂಸ್ಥೆಯ ಅರಿವು ಶಿವಪ್ಪ ಸೇರಿದಂತೆ ಹಲವರು ಜಿಲ್ಲೆಯ ಮತ್ತಷ್ಟು ಗ್ರಾಮಗಳಲ್ಲಿ ವೀರಗಲ್ಲು, ಶಾಸನ, ಬಿಡಿಶಿಲ್ಪಗಳನ್ನು ಸಂರಕ್ಷಿಸಲು ಕೈಜೋಡಿಸಿದ್ದಾರೆ. ಹಿಂದೆ ಇದ್ದ ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್‌ ಕುಮಾರ್‌ ಕೂಡ ವೀರಗಲ್ಲು ತಲೆಎತ್ತಲು ಪ್ರಮುಖ ಕಾರಣಕರ್ತರ‌ಲ್ಲಿ ಒಬ್ಬರು. ಇವರ ಈ ಕೆಲಸಕ್ಕೆ ಬಹಳಷ್ಟು ಮೆಚ್ಚುಗೆಯೂ ವ್ಯಕ್ತವಾಗಿದೆ.

‘ಯುದ್ಧಗಳಲ್ಲಿ ಮಡಿದವರ ನೆನಪಿನಲ್ಲಿ ಹಾಕಿರುವ ವೀರಗಲ್ಲುಗಳು ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಕಂಡುಬರುತ್ತವೆ. ಈಚೆಗೆ ನಿಧಿಗಳ್ಳರು ನಿಧಿ ಆಸೆಗಾಗಿ ವೀರಗಲ್ಲುಗಳನ್ನು ಧ್ವಂಸಗೊಳಿಸಿರುವ ನಿದರ್ಶನಗಳಿವೆ. ಹೀಗಾಗಿ, ಸ್ಥಳೀಯರಲ್ಲಿ ಸಂರಕ್ಷಣೆಯ ಮಹತ್ವ ತಿಳಿಸಿ ಅವುಗಳ ರಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಸ್ಥಳೀಯರು ತಮ್ಮ ಪೂರ್ವಜರ ನೆನಪು ಉಳಿಸಿಕೊಳ್ಳಬೇಕು, ಪ್ರಾಣ ತ್ಯಾಗ ಮಾಡಿ ಊರು ರಕ್ಷಿಸಿದವರಿಗೆ ಗೌರವ ಸಲ್ಲಿಸಬೇಕು ಎನ್ನುತ್ತಾರೆ ಇತಿಹಾಸ ಪ್ರೇಮಿ ಶಿವಪ್ಪ ಅರಿವು.

ಕೋಲಾರ ಜಿಲ್ಲೆಯಲ್ಲಿ 1,800 ಹಳ್ಳಿಗಳಿದ್ದು, 1,500ಕ್ಕೂ ಅಧಿಕ ಶಾಸನಗಳಿವೆ. ಇದಕ್ಕಿಂತ ಹೆಚ್ಚು ಶಾಸನರಹಿತ ವೀರಗಲ್ಲುಗಳು ಇವೆ. ಇವು ಇರುವ ಜಾಗಗಳು ಬಹುಶಃ ಇದೇ ವೀರರ ಕುಟುಂಬಕ್ಕೆ ಸೇರಿದ್ದವು ಎಂದು ಇತಿಹಾಸ ತಜ್ಞರು ಹೇಳುತ್ತಾರೆ.

‘ಮೈಸೂರಿನಲ್ಲಿ ನಡೆದ ದಸರಾ ಮೆರವಣಿಗೆಯಲ್ಲೂ ಕೋಲಾರ ಜಿಲ್ಲೆಯ ವೀರಗಲ್ಲು ಸ್ತಬ್ಧಚಿತ್ರ ನಿರ್ಮಿಸಿ ಪ್ರದರ್ಶಿಸಲಾಗಿತ್ತು. ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗಿದ ಮೆರವಣಿಗೆಯಲ್ಲಿ ವೀರಗಲ್ಲು ಉತ್ಖನನ ಹಾಗೂ ಮರುಸ್ಥಾಪನೆ ಸ್ತಬ್ಧಚಿತ್ರ ಗಮನ ಸೆಳೆದಿತ್ತು’ ಎಂದು ತಿಳಿಸುತ್ತಾರೆ ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಸದಸ್ಯ ನಂಜುಂಡೇಗೌಡ.

ವೀರಗಲ್ಲು ಉಳಿಸಿಕೊಳ್ಳಲು ಐತಿಹಾಸಿಕ ಪ್ರಜ್ಞೆ ಅಗತ್ಯ. ಮುಂದಿನ ಪೀಳಿಗೆಗಳಿಗೆ, ಇತಿಹಾಸದ ವಿದ್ಯಾರ್ಥಿಗಳಿಗೆ ನೈಜ ಇತಿಹಾಸದ ಅರಿವು ಅಗತ್ಯವಾಗಿರುತ್ತದೆ. ಇವು ಇತಿಹಾಸದ ಕೊಂಡಿಗಳಾಗಿವೆ. ಇಂತಹ ವೀರಗಲ್ಲು, ಸ್ಮಾರಕಗಳನ್ನು ಗುರುತಿಸಿ ಅಭಿವೃದ್ಧಿಪಡಿಸಿ ಸಂರಕ್ಷಿಸಬೇಕಿದೆ. ಪುರಾತತ್ವ ಇಲಾಖೆಯ ಜೊತೆಗೆ ಇತಿಹಾಸ ಆಸಕ್ತರು ನಿಯೋಗದ ಸಹಕಾರದೊಂದಿಗೆ ಜಿಲ್ಲೆಯ ಐತಿಹಾಸಿಕ ಸಂಸ್ಕೃತಿ ಎಲ್ಲೆಡೆ ಪಸರಿಸುವಂತಾಗಬೇಕಿದೆ
ಎಂ.ಆರ್.ರವಿ, ಜಿಲ್ಲಾಧಿಕಾರಿ, ಕೋಲಾರ

ಮ್ಯೂಸಿಯಂಗೆ ಸ್ಥಳ ನೀಡಲು ಸಿದ್ಧ

ಐತಿಹಾಸಿಕ ದಾಖಲೆಗಳಾದ ಶಾಸನಗಳು, ವೀರಗಲ್ಲುಗಳು, ತಾಳೆಗೆರೆ ದಾಖಲೆ ಸಂಗ್ರಹದ ಮ್ಯೂಸಿಯಂ ಮಾಡುವುದಾದರೆ ಕೋಲಾರ ಜಿಲ್ಲಾಡಳಿತ ಜಾಗ ನೀಡಲು ಸಿದ್ಧವಿದೆ. ಇದೊಂದು ಪ್ರೇಕ್ಷಣೀಯ ಸ್ಥಳವಾಗಬೇಕಿದೆ. ಸರ್ಕಾರದ ಮಟ್ಟದಲ್ಲಿ ಮಂಜೂರಾತಿ ಮಾಡಿಸಲು ತಜ್ಞರು, ಜನಪ್ರತಿನಿಧಿಗಳು ಗಮನ ಸೆಳೆಯುವಂತಾಗಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದರು.

ಅರಾಭಿಕೊತ್ತನೂರು ಮಾತ್ರವಲ್ಲ; ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಹುನ್ಕುಂದ, ಮಾಲೂರು ತಾಲ್ಲೂಕಿನ ದೊಡ್ಡಶಿವಾರ, ಮುಳಬಾಗಿಲು ತಾಲ್ಲೂಕಿನ ಜೋಗಲಕಾಷ್ಟಿ ಗ್ರಾಮದಲ್ಲೂ ವೀರಗಲ್ಲು ಉದ್ಯಾನಗಳು ತಲೆ ಎತ್ತುತ್ತಿವೆ. ಜೊತೆಗೆ ಇಲ್ಲಿ ಇನ್ನೂ ಹಲವು ಕೆಲಸಗಳು ನಡೆಯಬೇಕಿದೆ. ಈ ಸಂಬಂಧ ಸಭೆ ನಡೆಸಿ ರೂಪುರೇಷೆ ರೂಪಿಸುವಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ
–ಅರಿವು ಶಿವಪ್ಪ, ಇತಿಹಾಸ ಪ್ರೇಮಿ, ಅರಿವು ಭಾರತ ಸಂಸ್ಥೆ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.