
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನಲ್ಲಿ ಸೊಂಪಾಗಿ ಬೆಳೆದಿರುವ ಆಲೂಗಡ್ಡೆ ಬೆಳೆ
ಹಾಸನ: ಜಿಲ್ಲೆಯ ಹೆಗ್ಗುರುತಾಗಿದ್ದ ಆಲೂಗಡ್ಡೆ ಕ್ಷೇತ್ರ, ಇದೀಗ ಕ್ಷೀಣಿಸುತ್ತಿದೆ. ಪಾರಂಪರಿಕ ಕೃಷಿಯಿಂದ ಆಲೂಗಡ್ಡೆ ಬೆಳೆಯುವುದು ಕಷ್ಟಕರ ಎಂಬುದನ್ನು ಅರಿತಿರುವ ತೋಟಗಾರಿಕೆ ಇಲಾಖೆ, ಇದೀಗ ವೈಜ್ಞಾನಿಕ ಕೃಷಿಯ ಮೂಲಕ ಮತ್ತೆ ಜಿಲ್ಲೆಯಲ್ಲಿ ಆಲೂಗಡ್ಡೆ ಕ್ಷೇತ್ರ ವಿಸ್ತರಣೆಗೆ ಮುಂದಾಗಿದೆ.
ಒಂದು ಕಾಲದಲ್ಲಿ ಜಿಲ್ಲೆಯ ರೈತರಿಗೆ ಆಸರೆಯಾಗಿದ್ದ ಆಲೂಗಡ್ಡೆ ಬೆಳೆಯು ಈಗ ಹೊರೆಯಾಗಿ ಪರಿಣಮಿಸಿದೆ. ರೋಗ, ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರ ಕೈಗೆ ಲಾಭ ಸಿಗುವುದು ಇರಲಿ, ಹಾಕಿದ ಖರ್ಚೂ ಬಾರದಂತಾಗಿದೆ. ಅಷ್ಟಿಷ್ಟು ಆದಾಯವೂ ದಲ್ಲಾಳಿಗಳ ಪಾಲಾಗುತ್ತಿದ್ದು, ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆಯುವುದನ್ನೇ ರೈತರು ಕಡಿಮೆ ಮಾಡಿದ್ದಾರೆ.
ಭಾರಿ ಇಳುವರಿಯಿಂದಾಗಿ 3 ದಶಕಗಳ ಹಿಂದೆ ಜಿಲ್ಲೆಯ ರೈತರು ಆಲೂಗಡ್ಡೆ ಬೆಳೆಯಲು ಪ್ರಾರಂಭಿಸಿದರು. ಆರಂಭದಲ್ಲಿ ಸುಮಾರು 60 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದ ಬೆಳೆ ಈಗ, 7 ಸಾವಿರ ಹೆಕ್ಟೇರ್‌ಗೆ ಕುಸಿದಿದೆ. ಬೆಳೆಗೆ ಅತಿಯಾದ ರೋಗ ಉಲ್ಬಣಿಸಿದ್ದರಿಂದ 10 ವರ್ಷಗಳಿಂದ ಶೇ 90 ರಷ್ಟು ಬೆಳೆ ಕಡಿಮೆಯಾಗಿದ್ದು, ಸದ್ಯ ಬೆರಳೆಣಿಕೆಯಷ್ಟು ರೈತರು ಬೆಳೆಯುತ್ತಿದ್ದಾರೆ.
ಒಂದು ಎಕರೆ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲು 5 ಕ್ವಿಂಟಲ್ ಬಿತ್ತನೆ ಬೀಜ ಬೇಕಾಗುತ್ತದೆ. ಉಳುಮೆ, ಬಿತ್ತನೆ, ರೋಗ ನಿರೋಧಕ ಔಷಧಿ, ಬೆಳೆಯನ್ನು ಹೊಲದಿಂದ ಕಿತ್ತು ಮಾರಾಟಕ್ಕೆ ಇಡುವವರೆಗೆ ಕನಿಷ್ಠ ₹ 75 ಸಾವಿರದಿಂದ ₹80 ಸಾವಿರ ಖರ್ಚಾಗುತ್ತದೆ. ರೋಗ ಬರದೇ ಇದ್ದರೆ, ಎಕರೆಗೆ 35 ಕ್ವಿಂಟಲ್ ಇಳುವರಿ ಬರುತ್ತದೆ. ಮಾರುಕಟ್ಟೆಯಲ್ಲಿ ವರ್ತಕರು ಕೆ.ಜಿ.ಗೆ ₹20 ರ ದರದಲ್ಲಿ ಖರೀದಿ ಮಾಡುತ್ತಿದ್ದು, ರೈತರಿಗೆ ₹70 ಸಾವಿರ ದೊರಕುತ್ತದೆ. ಅದೇ ಆಲೂಗಡ್ಡೆ ವರ್ತಕರಿಂದ ಗ್ರಾಹಕರಿಗೆ ಕೆ.ಜಿ.ಗೆ ₹30 ರಿಂದ ₹35 ರವರೆಗೆ ಮಾರಾಟ ಆಗುತ್ತದೆ ಎನ್ನುತ್ತಾರೆ ರೈತರು.
ಆಲೂಗಡ್ಡೆ ಬಿತ್ತನೆ ಮಾಡುತ್ತಿರುವ ರೈತರು.
ಭಾವನಾತ್ಮಕ ಬೆಳೆ: ಆಲೂಗಡ್ಡೆಯು ಹಾಸನ ಜಿಲ್ಲೆಯ ಭಾವನಾತ್ಮಕ ಬೆಳೆ. ಅಂಗಾಂಶ ಕೃಷಿ, ಕಾಂಡ ಕಸಿ ಸೇರಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡರೆ ಬೆಳೆಯ ಪುನರುತ್ಥಾನ ಸಾಧ್ಯ’ ಎನ್ನುವುದು ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಚ್. ಅಮರ ನಂಜುಂಡೇಶ್ವರ ಅವರ ಮಾತು.
‘ಮಳೆಗಾಲದಲ್ಲಿ ಅತಿಹೆಚ್ಚು ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯುವ ಜಿಲ್ಲೆ ಹಾಸನ. 30 ವರ್ಷಗಳ ಹಿಂದೆ 50 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿತ್ತು. ಸುಮಾರು 7 ಸಾವಿರ ಹೆಕ್ಟೇರ್‌ಗೆ ಇಳಿದಿದೆ. ರೈತರು ಅವಿನಾಭಾವ ಸಂಬಂಧದಂತೆ ಬೆಳೆಯುತ್ತಿದ್ದರು. ಆದರೆ ಯಾವುದೇ ಬೆಳೆ ಹವ್ಯಾಸಕ್ಕಾಗಿ ಅಲ್ಲ, ಲಾಭದ ದೃಷ್ಟಿಯಿಂದಲೇ ಬೆಳೆಯಬೇಕು’ ಎಂದು ಸಲಹೆ ನೀಡಿದರು.
‘ಆಲೂಗಡ್ಡೆಯನ್ನು ಉತ್ತೇಜಿಸಲು ಅನೇಕ ಸಂಶೋಧನೆ ಕೈಗೊಳ್ಳಲಾಗಿದೆ. ಬಿತ್ತನೆ ಬೀಜಕ್ಕಾಗಿ ಜಲಂಧರ್ ಮೇಲೆಯೇ ಅವಲಂಬಿತರಾಗಿದ್ದೆವು. ಈಗ ಅಂಗಾಂಶ ಕುಡಿ ಸಸಿ ಸಂಶೋಧನೆ ಮೂಲಕ ಬೆಳೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಇದಕ್ಕೆ ಹೆಚ್ಚಿನ ಆರ್ಥಿಕ ಸಹಾಯ ಅಗತ್ಯ’ ಎಂದು ಹೇಳಿದರು.
‘ಮಣ್ಣಿನ ಪರಿಸರ ಸುಧಾರಿಸುವ ಅಗತ್ಯವಿದ್ದು, ಮಣ್ಣು ನಿರ್ಜೀವವಾಗುತ್ತಿದೆ. ಜೋಳ, ಶುಂಠಿ ಮುಂತಾದ ಬೆಳೆಗಳತ್ತ ರೈತರು ಹೆಚ್ಚು ವಾಲುತ್ತಿದ್ದಾರೆ. ಇವು ಅಲ್ಪಕಾಲಿಕ ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಆಲೂಗಡ್ಡೆಗೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.
ಆಲೂಗಡ್ಡೆ ಮೇಳ: ರೈತರು ಆಲೂಗಡ್ಡೆ ಕೃಷಿಯಿಂದ ದೂರು ಸರಿಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ತೋಟಗಾರಿಕೆ ಇಲಾಖೆ, ಇದೀಗ ಆಲೂಗಡ್ಡೆ ಮೇಳದ ಮೂಲಕ ರೈತರಿಗೆ ಅಗತ್ಯ ಮಾಹಿತಿ ನೀಡುವ ಪ್ರಯತ್ನ ಮಾಡಿದೆ.
ಮೇಳದ ಮೂಲಕ ಕೃಷಿ ವಿಧಾನಗಳು, ಆಲೂಗಡ್ಡೆಯ ವಿವಿಧ ತಳಿಗಳು, ಸಸಿಗಳ ಪರಿಚಯ ನೀಡಲಾಗಿದೆ. ಆಲೂಗಡ್ಡೆ ಕೃಷಿಗೆ ಅಗತ್ಯವಿರುವ ಗೊಬ್ಬರ, ಪೌಷ್ಟಿಕಾಂಶಗಳು ಹಾಗೂ ಔಷಧಿಗಳ ಕುರಿತು ಸಮಗ್ರ ಮಾಹಿತಿ ಒದಗಿಸಲಾಗಿದೆ.
ಅಂಗಾಂಶ ಕೃಷಿ ಪದ್ಧತಿಯಡಿ ಆಲೂಗಡ್ಡೆ ಸಸಿಗಳ ಬೆಳವಣಿಗೆ, ನಿರ್ವಹಣೆ ಮತ್ತು ಲಾಭದಾಯಕ ಕೃಷಿ ವಿಧಾನಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು. ಆಲೂಗಡ್ಡೆ ಬಿತ್ತನೆ ಬೀಜಗಳ ಪ್ರದರ್ಶನದ ಜೊತೆಗೆ ಬಿತ್ತನೆಯಿಂದ ಹಿಡಿದು ಬೆಳೆ ಕಟಾವಿನವರೆಗೆ ಅಗತ್ಯವಿರುವ ಕೃಷಿ ಯಂತ್ರೋಪಕರಣಗಳು ಔಷಧಿಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು.
ಮೇಳದಲ್ಲಿ ರಾಜಸ್ಥಾನ, ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಇತರೆ ರಾಜ್ಯಗಳಿಂದಲೂ ವಿವಿಧ ಬಗೆಯ ಆಲೂಗಡ್ಡೆ ತಳಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಹಾಸನದಲ್ಲಿ ಆಯೋಜಿಸಿದ್ದ ಆಲೂಗಡ್ಡೆ ಮೇಳದಲ್ಲಿ ವಿವಿಧ ತಳಿಯ ಆಲೂಗಡ್ಡೆ ಹಾಗೂ ಅಂಗಾಂಶ ಕೃಷಿಯ ಸಸಿಗಳನ್ನು ಪ್ರದರ್ಶಿಸಲಾಯಿತು.
ಇದೇ ಮೊದಲ ಬಾರಿಗೆ ಹಾಸನದಲ್ಲಿ ಆಲೂಗಡ್ಡೆ ಮೇಳ ಆಯೋಜಿಸಲಾಗಿದ್ದು, ಜಿಲ್ಲೆಯಲ್ಲಿ ಕನಿಷ್ಠ 20 ಸಾವಿರದಿಂದ 25 ಸಾವಿರ ಹೆಕ್ಟೇರ್‌ನಲ್ಲಿ ಆಲೂಗಡ್ಡೆಯನ್ನು ಬೆಳೆಯುವಂತೆ ಮಾಡುವುದೇ ಮೇಳದ ಉದ್ದೇಶ.ಯೋಗೇಶ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ
ಒಂದು ಕಾಲದಲ್ಲಿ ದೇಶದ ಗಮನ ಸೆಳೆದಿದ್ದ, ಆಲೂಗಡ್ಡೆ ಬೆಳೆಯುವ ಜಿಲ್ಲೆಯಾಗಿದ್ದ ಹಾಸನದಲ್ಲಿ, ಬೆಳೆಯನ್ನು ಸಂರಕ್ಷಿಸಿ, ಉತ್ತೇಜಿಸಲಾಗುವುದು.ಕೃಷ್ಣ ಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ
20 ವರ್ಷಗಳಿಂದ ಚಿಪ್ಸ್ ತಯಾರಿಕೆಗೆ ಬಳಸುವ ವಿಶೇಷ ಎಫ್‌ಸಿ–5 ಮತ್ತು ಎಫ್‌ಸಿ–12 ತಳಿಗಳ ಆಲೂಗಡ್ಡೆ ಬೆಳೆಯುತ್ತಿದ್ದೇನೆ. ಕಳೆದ ವರ್ಷ ಎಂಟು ಎಕರೆಯಲ್ಲಿ ಎಕರೆಗೆ ಸುಮಾರು 100 ಚೀಲ ಇಳುವರಿ ದೊರೆತಿದೆ. ಅಂಗಮಾರಿ ರೋಗ, ಅತಿವೃಷ್ಟಿ, ಅನಾವೃಷ್ಟಿಯಿಂದ ಆಲೂಗಡ್ಡೆ ಬೆಳೆಯುವ ಕ್ಷೇತ್ರ ಕಡಿಮೆಯಾಗಿದೆ. ಗುಣಮಟ್ಟದ ಬೀಜ, ಔಷಧಿ, ಮಾರ್ಗದರ್ಶನ ನೀಡಿದಲ್ಲಿ, ಆಲೂಗಡ್ಡೆ ಕೃಷಿ ಹೆಚ್ಚಾಗುವ ಸಾಧ್ಯತೆ ಇದೆ.ಶಂಕರ್, ಅಪ್ಪೆನಹಳ್ಳಿಯ ಆಲೂಗಡ್ಡೆ ಬೆಳೆಗಾರ
25 ವರ್ಷಗಳಿಂದ ಆಲೂಗಡ್ಡೆ ಕೃಷಿ ಮಾಡುತ್ತಿದ್ದು. ಕೆಲವೊಮ್ಮೆ ಇಳುವರಿ ಕಡಿಮೆಯಾದರೂ, ಪ್ರತಿವರ್ಷ ಆಲೂಗಡ್ಡೆ ಬೆಳೆಯುತ್ತಿದ್ದೇವೆ. ಆದರೆ, ಪ್ರತಿಬಾರಿಯೂ ರೈತರು ನಷ್ಟ ಅನುಭವಿಸಿದರೆ, ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ರೈತರು ಆಲೂಗಡ್ಡೆ ಬೆಳೆಯುವ ನಿಟ್ಟಿನಲ್ಲಿ ಇಲಾಖೆಯಿಂದ ಅಗತ್ಯ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಅವಶ್ಯಕವಾಗಿದೆ.ಸುರೇಶ್, ಬಿಟ್ಟಹಳ್ಳಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.