ADVERTISEMENT

ಕೃಷಿ ಮೇಳದಿಂದ ಬೇಸಾಯದತ್ತ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 6:35 IST
Last Updated 6 ಜನವರಿ 2012, 6:35 IST

ಸುರಪುರ: ಇಂದಿನ ತಂತ್ರಜ್ಞಾನ ಯುಗದಲ್ಲಿ ನಾವು ಕೃಷಿಯನ್ನು ಮರೆಯತ್ತಿದ್ದೇವೆ. ಆಧುನಿಕ ಕೃಷಿ ನಮ್ಮ ಪ್ರಾಚೀನ ಪದ್ಧತಿಗಳನ್ನು ಮರೆ ಮಾಚುತ್ತಿದೆ. ಇದರಿಂದ ರೋಗ ರುಜಿನಗಳಿಗೆ ಬಲಿಯಾಗುವುದು ಸಾಮಾನ್ಯವಾಗಿದೆ. ಕೃಷಿ ಮೇಳ ಮಕ್ಕಳನ್ನು ಬೇಸಾಯದತ್ತ ಆಕರ್ಷಿಸಲು ಉತ್ತಮ ಕಾರ್ಯಕ್ರಮವಾಗಿದೆ ಎಂದು ಅಜೀಂ ಪ್ರೇಮಜಿ ಫೌಂಡೇಶನ್‌ದ ಬಾಲಸ್ನೇಹಿ ಕಾರ್ಯಕ್ರಮದ ಮುಖ್ಯಸ್ಥ ಉಮಾಶಂಕರ ಪೆರಿಯೋಡಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸತ್ಯಂಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಕೃಷಿ ಮೇಳದಲ್ಲಿ ಅವರು ಮಾತನಾಡಿದರು.

ಮೇಳ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಗೌಡ ಪಾಟೀಲ ಮಾತನಾಡಿ, ವಿಜ್ಞಾನ, ಮೆಟ್ರಿಕ್ ಇತರ ಮೇಳಗಳಂತೆ ಕೃಷಿ ಮೇಳ ಆಯೋಜನೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ. ಶಿಕ್ಷಣ ಇಲಾಖೆ ಮಕ್ಕಳನ್ನು ಎಲ್ಲಾ ವಿಧದಲ್ಲೂ ಪ್ರೋತ್ಸಾಹಿಸುತ್ತಿದೆ. ಕೇವಲ ಎಂಜಿನಿಯರ್, ವೈದ್ಯರಿಗೆ ಮಕ್ಕಳು ಸೀಮಿತರಾಗದೆ ಕೃಷಿ ವಿಜ್ಞಾನಿಗಳು, ಪ್ರಗತಿಪರ ರೈತರಾಗಲು ಇಂತಹ ಮೇಳ ಉಪಯುಕ್ತವೆನಿಸಲಿವೆ ಎಂದು ಪ್ರತಿಪಾದಿಸಿದರು.

ಮಕ್ಕಳಲ್ಲಿ ವಿದ್ಯಾರ್ಥಿ ದಿಸೆಯಲ್ಲಿಯೆ ಬೇಸಾಯದ ಬಗ್ಗೆ ಪರಿಜ್ಞಾನ ಮೂಡಲು ಕೃಷಿ ಮೇಳಗಳನ್ನು ಮೇಲಿಂದ ಮೇಲೆ ಆಯೋಜಿಸುವುದು ಅವಶ್ಯವಾಗಿದೆ. ಕೃಷಿ ಮೇಳವನ್ನು ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿ ಏರ್ಪಡಿಸಬೇಕು. ಮೇಳಕ್ಕೆ ರೈತರನ್ನು ಆಹ್ವಾನಿಸಿ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ರೈತ ಮುಖಂಡರಾದ ಮಲ್ಲಿಕಾರ್ಜುನ್ ಸತ್ಯಂಪೇಟೆ ಮತ್ತು ಡಾ. ಶರಣಪ್ಪ ಯಾಳಗಿ ಸಲಹೆ ನೀಡಿದರು.

ಸಾವಯವ ಕೃಷಿ, ಕೃಷಿ ಸಲಕರಣೆಗಳು, ಕೃಷಿ ಹೊಂಡ, ಚೆಕ್ ಡ್ಯಾಂ, ತಿಪ್ಪೆ ಗೊಬ್ಬರ, ಎರೆ ಹುಳು ಗೊಬ್ಬರ, ಪೋಷಕಾಂಶಗಳು ಇತರವುಗಳ ಬಗ್ಗೆ ಮಾಹಿತಿ ನೀಡಲು ಮಕ್ಕಳು 26 ಮಳಿಗೆಗಳನ್ನು ಹಾಕಿ ವೀಕ್ಷಕರಿಗೆ ವಿವರಣೆ ನೀಡಿದರು.

ಬಾಲಸ್ನೇಹಿ ಕಾರ್ಯಕ್ರಮದ ಸಂಯೋಜಕ ಎಸ್. ರುದ್ರೇಶ, ಇಕೋ ಕ್ಲಬ್ ಅಧ್ಯಕ್ಷ ಅಪ್ಪಾರಾವ್ ನಾಯಕ್, ಹಯ್ಯಾಳಪ್ಪ, ವೆಂಕಟೇಶ ಶುಕ್ಲ, ನಿಂಗಣ್ಣ ಮುಖ್ಯ ಅತಿಥಿಗಳಾಗಿದ್ದರು. ಮುಖ್ಯ ಗುರು ಲಿಂಗಯ್ಯ ಕಲ್ಲೂರಮಠ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಕಿ ರಾಜೇಶ್ವರಿ ಸ್ವಾಗತಿಸಿದರು. ಮಂಜುಳಾ ನಿರೂಪಿಸಿದರು. ಮಾಧುರಿ ವಂದಿಸಿದರು. ವನಜಾ ಚಾಮನಾಳ, ರೇಣುಕಾ, ಆರತಿ, ನಿಂಗಪ್ಪ, ಗ್ರಾಮಸ್ಥರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.