ADVERTISEMENT

ಪಟ್ಟಣದಲ್ಲಿ ಡೆಂಗೆ ಭೀತಿ: ಖಾಸಗಿ ವೈದ್ಯರ ಸಭೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 4:30 IST
Last Updated 4 ಅಕ್ಟೋಬರ್ 2012, 4:30 IST
ಪಟ್ಟಣದಲ್ಲಿ ಡೆಂಗೆ ಭೀತಿ: ಖಾಸಗಿ ವೈದ್ಯರ ಸಭೆ
ಪಟ್ಟಣದಲ್ಲಿ ಡೆಂಗೆ ಭೀತಿ: ಖಾಸಗಿ ವೈದ್ಯರ ಸಭೆ   

ಕೆಂಭಾವಿ: ಪಟ್ಟಣದಲ್ಲಿ ಡೆಂಗೆ ಹರಡುತ್ತಿರುವ ವಿಷಯ ತಿಳಿದ ಜನತೆ ಭಯಭೀತರಾಗಿದ್ದು, ಜ್ವರ ಬಂದರೆ ಸಾಕು ದೂರದ ನಗರಗಳಿಗೆ ತೆರಳುತ್ತಿರುವುದು ಸಹಜವಾಗಿದೆ.

ಇಲ್ಲಿಯ ಕೆಲ ಖಾಸಗಿ ರಕ್ತ ತಪಾಸಣಾ ಕೇಂದ್ರಗಳಲ್ಲಿ ಕಿಟ್‌ಗಳ ಮೂಲಕ ರಕ್ತದ ಮಾದರಿ ಪರೀಕ್ಷಿಸಿ, ಡೆಂಗೆ ಬಂದಿದೆ ಎಂದು ದೃಢಪಡಿಸುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ, ಆದರೆ ಸರ್ಕಾರಿ ವೈದ್ಯರು ಹೇಳುವ ಪ್ರಕಾರ ಬೀದರ ವೈದ್ಯಕೀಯ ಕಾಲೇಜಿನ ಪ್ರಯೋಗಾಲಯದಲ್ಲಿ ಮಾತ್ರ ಈ ಪರೀಕ್ಷಾ ಸೌಲಭ್ಯವಿದ್ದು, ಅಲ್ಲಿ ದೃಢಪಟ್ಟರೆ ಮಾತ್ರ ಡೆಂಗಎ ಎಂದು ಪರಿಗಣಿಸಲಾಗುವುದು.

ಇದರಿಂದ ಗೊಂದಲಕ್ಕೀಡಾಗಿರುವ ಪಟ್ಟಣದ ಜನರು, ಯಾರ ಮಾತು ನಂಬಬೇಕು ಎನ್ನುವ ಸ್ಥಿತಿಗೆ ತಲುಪಿದ್ದಾರೆ. ಈ ಕಾಯಿಲೆಯೂ ಬಹುತೇಕ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

ವೈದ್ಯಾಧಿಕಾರಿಗಳ ಸಭೆ: ಪಟ್ಟಣದಲ್ಲಿ ಡೆಂಗೆ ಜ್ವರದಿಂದ ಬಳಲಿ ಚಿಕಿತ್ಸೆಗೆ ಗುಲ್ಬರ್ಗಕ್ಕೆ ಕಳಿಸಿದ ಇಮಾಮ್‌ಸಾಬ ಬಳಗಾರ ಅವರ ಮನೆಗೆ ಭೇಟಿ ನೀಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ. ನಾಯಕ ನೇತೃತ್ವದ ತಂಡ ಪಾಲಕರ ಜೊತೆ ಚರ್ಚಿಸಿತು.

ಈ ಪ್ರದೇಶದಲ್ಲಿ ಪರಿಸರ ನೈರ್ಮಲ್ಯ ಇಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಶುಚಿತ್ವ ಕಾಪಾಡಿಕೊಳ್ಳುವಂತೆ ತಿಳಿಸಿದರು. ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮನೆ ಮನೆಗೆ ತೆರಳಿ ಜನರಿಗೆ ತಿಳಿವಳಿಕೆ ನೀಡುತ್ತಿರುವುದಾಗಿ ಹೇಳಿದರು.

ನಂತರ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡೆಂಗೆ ಜ್ವರದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಕೆಂಭಾವಿ ವಲಯದ ಖಾಸಗಿ ವೈದ್ಯರ ಹಾಗೂ ಸಿಬ್ಬಂದಿಗಳ ಸಭೆ ನಡೆಸಿ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೋಗಿಗಳನ್ನು ಕಳುಹಿಸಿ ಕೊಡಿ. ಸುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಸಾರ್ವಜನಿಕರಿಗೆ ತಿಳಿ ಹೇಳಿ. ರೋಗ ಉಲ್ಬಣವಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡದೇ ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸಿ, ಹೆರಿಗೆ ಸಮಯದಲ್ಲಿ ಮಗು ಮತ್ತು ತಾಯಿ ಮರಣವಾದರೆ ಆಸ್ಪತ್ರೆಗೆ ತಿಳಿಸಿ.

ಮಾರಕ ರೋಗಗಳ ಬಗ್ಗೆ ತಿಳಿ ಹೇಳಿ ಎಂದು ತಿಳಿಸಿದರು. ವೈದ್ಯರಾದ ಡಾ. ವಿಕಾಸ ಪರ್ವತಿಕರ, ಡಾ. ಶಂಕರಗೌಡ ಮೂಲಿಮನಿ, ಡಾ. ಪ್ರಮೋದ, ಖಾಸಗಿ ವೈದ್ಯರಾದ ಡಾ. ಜಕರೆಡ್ಡಿ, ಡಾ. ರವಿ ಅಂಗಡಿ, ಡಾ. ಮಂಜುಳಾ ಪಾಟೀಲ, ಡಾ. ಎ.ಜಿ. ಹಿರೇಮಠ ಮುಂತಾದವರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.