ADVERTISEMENT

ರಾಜಕಾರಣಿಗಳಿಗೆ ಬೆಳದಿಂಗಳಾದ ಬಿಸಿಲು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 7:05 IST
Last Updated 9 ಏಪ್ರಿಲ್ 2013, 7:05 IST

ಕೆಂಭಾವಿ: ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಏರುತ್ತಿರುವಂತೆಯೇ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪ್ರಚಾರದ ಕಾವೂ ಅಷ್ಟೇ ತೀವ್ರತೆ ಪಡೆದುಕೊಳ್ಳುತ್ತಿದೆ.

ಉರಿಬಿಸಿಲು ರಾಜಕಾರಣಿಗಳಿಗೆ ಮಾತ್ರ ಬೆಳದಿಂಗಳಂತಾಗಿದೆ. ಚುನಾವಣೆ ಸಮೀಪಿಸುತ್ತಿರುವಂತೆಯೇ ಎಲ್ಲ ರಾಜಕೀಯ ನಾಯಕರು, ಚುನಾವಣೆ ಅಖಾಡಕ್ಕೆ ಇಳಿದ ಅಭ್ಯರ್ಥಿಗಳ ಎದೆ ಬಡಿತ ಮತ್ತಷ್ಟು ಹೆಚ್ಚಾಗಿದ್ದು ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ.

ಜಿಲ್ಲೆಯಲ್ಲೇ ಅತ್ಯಂತ ಪ್ರತಿಷ್ಠೆ ಚುನಾವಣೆ ಕ್ಷೇತ್ರ ಎಂದು ಖ್ಯಾತಿ ಗಳಿಸಿದ  ಶಹಾಪುರ ಮತಕ್ಷೇತ್ರದಲ್ಲಿ ಎಂದೂ ಕಂಡರಿಯದ ರಾಜಕೀಯ ಕುತೂಹಲ  ಕಂಡು ಬರುತ್ತಿದ್ದು, ಪ್ರತಿಯೊಂದು ಗ್ರಾಮದ ಮತದಾರರು ತಮ್ಮಲ್ಲೇ ಲೆಕ್ಕಾಚಾರಕ್ಕೆ ಅಣಿಯಾಗುತ್ತಿದ್ದಾರೆ. ಇದರಿಂದ ಚುನಾವಣೆ ಬಿಸಿ ಮತ್ತಷ್ಟು ಏರತೊಡಗಿದೆ.

ಬೇಸಿಗೆ ಉರಿ ಬಿಸಿಲಿ ಹೆಚ್ಚುತ್ತಿದ್ದಂತೆಯೇ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕೂಡಾ ಕೈಕೊಡುತ್ತಿದ್ದು, ಅನಿಯಮಿತ ವಿದ್ಯುತ್ ಕಡಿತದಿಂದ ಜನ ಕಂಗಾಲಾಗಿದ್ದಾರೆ. ಬಿಸಿಲಿನ ತಾಪಕ್ಕೆ ನೆರಳು, ತಂಪಾದ ಗಾಳಿ ಸಿಕ್ಕರೆ ಸಾಕು ಎನ್ನುವ ಜನರಿಗೆ ಚುನಾವಣೆ ಬಿಸಿ ಅಡೆತಡೆ ಮಾಡಿದೆ.

ಶಹಾಪುರ ಮತಕ್ಷೇತ್ರದಲ್ಲಿ ಹಿಂದೆ ನಡೆದ ಎಲ್ಲ ವಿಧಾನಸಭೆಯ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿಲ್ಲವಾದರೂ, ಎರಡು ಮನೆತನಗಳು ಈ ಕ್ಷೇತ್ರವನ್ನು ಮತ್ತೊಬ್ಬರಿಗೆ ಬಿಟ್ಟು ಕೊಟ್ಟಿಲ್ಲ. ಆದರೆ ಈ ಚುನಾವಣೆಯಲ್ಲಿ ಅನೇಕ ಘಟಾನುಘಟಿಗಳು, ವಿವಿಧ ಪ್ರಮುಖ ಪ್ರಾದೇಶಿಕ ಪಕ್ಷಗಳಿಂದ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಮುಖ ನಾಯಕರಿಗೆ ಗೆಲುವು ಮತ್ತಷ್ಟು ದೂರವಾಗುವ ಸಾಧ್ಯತೆ ಕಂಡುಬರುತ್ತಿವೆ.

ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಕೆಜೆಪಿ, ಜೆಡಿಎಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಬಿಜೆಪಿ ಮತ್ತು ಬಿಎಸ್ಸಾರ್ ಕಾಂಗ್ರೆಸ್ ಪಕ್ಷಗಳು ಮಾತ್ರ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಿಲ್ಲ.

ಘೋಷಣೆಯಾದ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಈಗಾಗಲೇ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಉರಿ ಬಿಸಿಲನ್ನು ಲೆಕ್ಕಿಸದೇ ಕಾರ್ಯಕರ್ತರ ಸಭೆ, ಪಕ್ಷಗಳಿಗೆ ಬರಮಾಡಿಕೊಳ್ಳುವ ಅನೇಕ ರಾಜಕೀಯ ಚಟುವಟಿಕೆಗಳು ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.