ADVERTISEMENT

ಶೌಚಾಲಯದಿಂದ ಆರೋಗ್ಯಕರ ಸಮಾಜ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 8:00 IST
Last Updated 20 ಆಗಸ್ಟ್ 2012, 8:00 IST
ಶೌಚಾಲಯದಿಂದ ಆರೋಗ್ಯಕರ ಸಮಾಜ ನಿರ್ಮಾಣ
ಶೌಚಾಲಯದಿಂದ ಆರೋಗ್ಯಕರ ಸಮಾಜ ನಿರ್ಮಾಣ   

ಯಾದಗಿರಿ: ಭಾರತ ಹಳ್ಳಿಗಳಿಂದ ಕೂಡಿದ ದೇಶವಾಗಿದ್ದು, ಶೇ 60ರಷ್ಟು ಜನತೆ ಬಯಲು ಶೌಚಾಲಯ ಬಳಕೆ ಮಾಡುತ್ತಿದ್ದಾರೆ. ಇದರಿಂದ ಪರಿಸರ ಹಾಳಾಗಲಿದ್ದು, ನಾನಾ ರೋಗಗಳು ಉತ್ಪತ್ತಿ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ ಹೇಳಿದರು.

ಭಾನುವಾರ ತಾಲ್ಲೂಕಿನ ಯಲ್ಹೇರಿ ಗ್ರಾಮದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಸಹಯೋಗದಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ವತಿಯಿಂದ ಪರಿಶುದ್ಧ ಯೋಜನೆಯಡಿ ನಿರ್ಮಿಸಿದ ಶೌಚಾಲಯಗಳನ್ನು ವೀಕ್ಷಿಸಿದ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ನಿರ್ಮಲ ಭಾರತ ಅಭಿಯಾನ ಯೋಜನೆ ಹಮ್ಮಿಕೊಂಡಿದೆ. ಬರುವ 10ವರ್ಷಗಳಲ್ಲಿ ದೇಶದ ಎಲ್ಲ ಹಳ್ಳಿಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ದೇಶದ 2.40 ಲಕ್ಷ ಗ್ರಾಮ ಪಂಚಾಯಿತಿಗಳಲ್ಲಿ ಕೇವಲ 30 ಸಾವಿರ ಮಾತ್ರ ನಿರ್ಮಲ ಗ್ರಾಮ ಪಂಚಾಯಿತಿಗಳಾಗಿ ರೂಪುಗೊಂಡಿವೆ. ಸಿಕ್ಕಿಂ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳು ನಿರ್ಮಲ ಪಂಚಾಯಿತಿಗಳಾಗಿ ಮಾರ್ಪಟ್ಟಿದ್ದು, ದೇಶದಲ್ಲಿಯೇ ಪ್ರಥಮ ರಾಜ್ಯವಾಗಿದೆ. ಕೇರಳ ಎರಡನೇ ಸ್ಥಾನದಲ್ಲಿದೆ.

ಕರ್ನಾಟಕದಲ್ಲೂ ಬರುವ ದಿನಗಳಲ್ಲಿ ಎಲ್ಲ ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣವಾಗಿ ನಿರ್ಮಲ ಗ್ರಾಮಗಳಾಗಿ ಪರಿವರ್ತನೆಯಾಗಲಿವೆ ಎಂಬ ವಿಶ್ವಾಸವಿದೆ ಎಂದರು.

ದೇಶದಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವ ಎಲ್ಲ ಕುಟುಂಬಗಳಿಗೆ ತಲಾ ರೂ.10 ಸಾವಿರ ನೀಡಲಾಗುವುದು. ಪ್ರತಿ ಗ್ರಾಮ ಪಂಚಾಯಿತಿಗೆ ಪರಿಸರ ಸ್ವಚ್ಛತೆಗಾಗಿ ರೂ. 7 ರಿಂದ 20 ಲಕ್ಷದವರೆಗೆ ಅನುದಾನ ಒದಗಿಸುವುದರ ಜೊತೆಗೆ ಗ್ರಾಮೀಣ ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣ ಮಾಡುವ ಕಾರ್ಯದ ನೇತೃತ್ವವನ್ನು ಆಯಾ ಗ್ರಾಮದ ಸ್ತ್ರೀಶಕ್ತಿ ಸಂಘದ ಮಹಿಳೆಯರಿಗೆ ನೀಡಲಾಗುವುದು. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಶೌಚಾಲಯಗಳು ನಿರ್ಮಾಣವಾಗಿ ಒಳ್ಳೆಯ ಪರಿಸರ ಸೃಷ್ಟಿಯಾಗುತ್ತವೆ. ಉತ್ತರ ಕರ್ನಾಟಕದಲ್ಲಿ ಇನ್ಫೋಸಿಸ್ ಪ್ರತಿಷ್ಠಾನವು ಶೌಚಾಲಯಗಳ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ. ಇತರ ಸಂಘ ಸಂಸ್ಥೆಗಳು ಮುಂದೆ ಬರಬೇಕು ಎಂದು ಮನವಿ ಮಾಡಿದರು.

ಬರುವ ದಿನಗಳಲ್ಲಿ ಸೌರಶಕ್ತಿ ಬಳಕೆ ಯೋಜನೆ ಜಾರಿಗೆ ತರಲು ಚಿಂತನೆ ನಡೆದಿದೆ ಎಂದ ಅವರು, ಈ ಗ್ರಾಮಗಳಲ್ಲಿ ಎಲ್ಲರೂ ಶೌಚಾಲಯ ನಿರ್ಮಾಣ ಮಾಡಿಕೊಂಡಾಗ ಇಲಾಖೆಯಿಂದ ಬಹುಮಾನ ವಿತರಿಸಲಾಗುವುದು ಎಂದು ಘೋಷಿಸಿದರು.

ಶಾಸಕ ಬಾಬುರಾವ ಚಿಂಚನಸೂರ ಮಾತನಾಡಿ, ಈ ಕ್ಷೇತ್ರ ಹಿಂದುಳಿದಿದೆ. ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಕುಡಿಯುವ ನೀರಿನ ಸಮಸ್ಯೆ ಇದೆ. ಕೇಂದ್ರ ಸಚಿವರು ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಜೊತೆಗೆ ಸಮಾಜದ ಎಲ್ಲ ವರ್ಗದ ಕುಟುಂಬಗಳಿಗೆ ಸರ್ಕಾರದಿಂದ ಶೌಚಾಲಯ ನಿರ್ಮಾಣ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ನೀಲಕಂಠರಾಯ ಯಲ್ಹೇರಿ, ಜಿಲ್ಲೆಯ 80 ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿ ನಡೆದಿದೆ. ಕೇಂದ್ರದಿಂದ ಈ ಭಾಗದ ಕೆರೆಗಳನ್ನು ಅಭಿವೃದ್ಧಿ ಪಡಿಸಿದಲ್ಲಿ ಮಾತ್ರ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ, ಹೆಚ್ಚುವರಿ ಜಿಲ್ಲಾಧಿಕಾರಿ ಜಹೀರಾ ನಸೀಮ್, ಅಣ್ಣರಾವ ಮುತ್ತಟ್ಟಿ, ಶಾಂತರೆಡ್ಡಿ ವನಿಕೇರಿ, ಇನ್ಫೋಸಿಸ್‌ನ ವಾಸುದೇವರಾವ ದೇಶಪಾಂಡೆ, ಅನಿಲ ಕೃಷ್ಣಾ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸುರೇಖಾ ಮಾಲಿಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಮ್ಮ ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.