ADVERTISEMENT

ಶೌಚಾಲಯ ನಿರ್ಮಾಣ: ಜಾಗೃತಿ ಮೂಡಿಸಿ

ಕಕ್ಕೇರಾ: ಪುರಸಭೆ ಸದಸ್ಯರಿಗೆ ಶಾಸಕ ರಾಜೂಗೌಡ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 7:00 IST
Last Updated 2 ಜೂನ್ 2018, 7:00 IST

ಕಕ್ಕೇರಾ: ಶೌಚಾಲಯ ನಿರ್ಮಾಣಕ್ಕೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಶಾಸಕ ರಾಜೂಗೌಡ ಪುರಸಭೆ ಸದಸ್ಯರಿಗೆ ಸಲಹೆ ನೀಡಿದರು.

ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ತುರ್ತು ಸಭೆಯಲ್ಲಿ ಅವರು ಮಾತನಾಡಿದರು. ನೀಲಕಂಠರಾಯನಗಡ್ಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆ ಕಾಮಗಾರಿಯನ್ನು ವಿಸ್ತರಿಸಲಾಗುವುದು. ಇದಕ್ಕಾಗಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಹೇಳಿದರು.

ಜನರಿಗೆ ಮೂಲಸೌಲಭ್ಯ ಕಲ್ಪಿಸಿಕೊಡುವಲ್ಲಿ ಆದ್ಯತೆ ನೀಡಲಾಗುವುದು. ಪ್ರತಿಯೊಂದು ಕುಟುಂಬವು ಕಡ್ಡಾಯವಾಗಿ ಶೌಚಾಲಯ ಹೊಂದಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ವರದಿ ತಯಾರಿಸಿ ಕೊಟ್ಟರೆ ಅಗತ್ಯ ಅನುದಾನ ಪಡೆದು ಹೈಟೆಕ್‌ ಶೌಚಾಲಯ ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.

ADVERTISEMENT

ಉಪ ಕಾಲುವೆಗಳ ದುರಸ್ತಿ ಹಾಗೂ ಪುನಶ್ಚೇತನಕ್ಕಾಗಿ ವರದಿ ನೀಡಬೇಕು ಎಂದು ಕೆಬಿಜೆಎನ್ಎಲ್ ಎಂಜಿನಿಯರ್‌ ಶೀಲಾರ್ ಅವರಿಗೆ ಸೂಚಿಸಿದರು.

ಎಲ್ಲಾ ವಾರ್ಡ್‌, ದೊಡ್ಡಿಗಳಿಗೆ ವಿದ್ಯುತ್‌ ಸೌಲಭ್ಯ ಒದಗಿಸಿಕೊಡಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಸ್ಲಂ ನಿವಾಸಿಗಳಿಗೆ ಆಶ್ರಯ ಮನೆಗಳನ್ನು ನಿರ್ಮಿಸುವ ಚಿಂತನೆ ಇದ್ದು, ಈ ಬಗ್ಗೆ ವರದಿ ತಯಾರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಆದಪ್ಪ ಸುರಪುರಕರ್ ಅವರಿಗೆ ಸೂಚಿಸಿದರು.

ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಗ್ರಾಮೀಣ ಪ್ರದೇಶದ ರಸ್ತೆ ತೀರಾ ಹದಗೆಟ್ಟಿದ್ದು, ಕಾಮಗಾರಿಗೆ ಸಂಬಂಧಿಸಿದಂತೆ ವರದಿ ನೀಡಬೇಕು ಎಂದು ಲೋಕೋಪಯೋಗಿ ಅಧಿಕಾರಿಗಳಿಗೆ ಹೇಳಿದರು.

ಪುರಸಭಾಧ್ಯಕ್ಷ ದಶರಥ ಆರೇಶಂಕರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷೆ ಮಲ್ಲಮ್ಮ ಪವಡೆಪ್ಪ ಮ್ಯಾಗೇರಿ, ಪುರಸಭೆ ಸದಸ್ಯರಾದ ಭೀಮನಗೌಡ ಹಳ್ಳಿ, ರಾಜು ಹವಾಲ್ದಾರ, ನಿಂಗಾನಾಯ್ಕ ರಾಠೋಡ, ಪರಶುರಾಮ ಪೂಜಾರಿ, ಬಸಯ್ಯಸ್ವಾಮಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.