ADVERTISEMENT

ಸುರಪುರ ಪುರಸಭೆ: ಮತದಾನ ಶಾಂತಿಯುತ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 9:55 IST
Last Updated 11 ಜನವರಿ 2012, 9:55 IST

ಸುರಪುರ: ಇಲ್ಲಿನ ಪುರಸಭೆಯ ವಾರ್ಡ್ ನಂ-16 ಮೇದಾಗಲ್ಲಿಯ ಉಪ ಚುನಾವಣೆಗೆ ಮಂಗಳವಾರ ನಡೆದ ಮತದಾನ ಶಾಂತಿಯುತವಾಗಿತ್ತು.

ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಕ್ರಮೇಣ ಬಿರುಸುಗೊಂಡಿತು. ಮಹಿಳೆಯರೂ ಸಾಲುಗಟ್ಟಿ ನಿಂತು ಮತದಾನ ಮಾಡಲು ಉತ್ಸಾಹ ತೋರಿದರು.

ಮೇದಾಗಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮತಗಟ್ಟೆಯನ್ನಾಗಿಸಲಾಗಿತ್ತು. ಏಕೈಕ ಮತಗಟ್ಟೆಯಲ್ಲಿ ಶೇಕಡಾ 75.57 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಒಟ್ಟು 1015 ಮತದಾರರಲ್ಲಿ 537 ಪುರುಷ ಮತ್ತು ಮತ್ತು 478 ಮಹಿಳಾ ಮತದಾರರಿದ್ದರು. ಅದರಲ್ಲಿ 413 ಪುರುಷ ಮತ್ತು 354 ಮಹಿಳೆ ಮತದಾರರು, ಒಟ್ಟು 767 ಮತದಾರರು ಮತ ಚಲಾಯಿಸಿದರು.

ಇದು ಈ ವಾರ್ಡಿಗೆ ನಡೆದಿರುವ ಎರಡನೆ ಉಪ ಚುನಾವಣೆ. ಈ ಹಿಂದೆ ಸದಸ್ಯರಾಗಿ ಆಯ್ಕೆಯಾಗಿದ್ದ ನಾಗಪ್ಪ ಚವಲಕರ್ ಮತ್ತು ರಾಘವೇಂದ್ರ ಕಳ್ಳಿಮನಿ ಸರ್ಕಾರಿ ಸೇವೆ ದೊರಕಿದ್ದರಿಂದ ರಾಜೀನಾಮೆ ಸಲ್ಲಿಸಿದ್ದರು. ಎರಡೂ ಬಾರಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

ಈ ಬಾರಿ ಬಿಜೆಪಿಯಿಂದ ವೀರೇಶ ಕುಲಕರ್ಣಿ, ಕಾಂಗ್ರೆಸ್‌ನಿಂದ ಯಂಕಣ್ಣ ಕುದುರಿಮನಿ, ಜೆಡಿಎಸ್‌ನಿಂದ ಭರತ ಭೀಮಪ್ಪ ಸ್ಪರ್ಧಿಸಿದ್ದಾರೆ.

ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವ ಈ ಕ್ಷೇತ್ರದಲ್ಲಿ ಬಿಜೆಪಿ ತನ್ನ ಸ್ಥಾನ ಉಳಿಸಿಕೊಳ್ಳಲು ಭರ್ಜರಿ ಪ್ರಚಾರ ಮಾಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೂ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ.

ಮೂವರು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಜನವರಿ 13 ರಂದು ಬೆಳಿಗ್ಗೆ 8 ಗಂಟೆಗೆ ಇಲ್ಲಿನ ಮಿನಿ ವಿಧಾನಸೌಧದಲ್ಲಿ ಮತ ಏಣಿಕೆ ನಡೆಯಲಿದೆ. 10 ಗಂಟೆಯೊಳಗೆ ಫಲಿತಾಂಶ ಹೊರಬೀಳುವ ಸಾಧ್ಯತೆಗಳಿವೆ.

ಇಲ್ಲಿನ ಪೊಲೀಸ್ ಇನ್ಸ್‌ಪೆಕ್ಟರ್ ಟಿ. ಜಿ. ದೊಡ್ಡಮನಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಯಾವುದೇ ಅಹಿತಕರ ಘಟನೆ ನಡೆಯದಂತೆ 1 ಡಿ.ಆರ್. ತುಕುಡಿ, 3 ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್‌ಗಳು, 4 ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳು, 3 ಸಹಾಯಕ ಸಬ್ ಇಪೆಕ್ಟರ್‌ಗಳು, 8 ಮುಖ್ಯ ಪೇದೆ, 25 ಜನ ಪೊಲೀಸರನ್ನು ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.