ಯಾದಗಿರಿ: ಸನ್ನತ್ತಿ ಬ್ಯಾರೇಜ್‌ನ ಹಿನ್ನೀರಿನಲ್ಲಿ ಮುಳುಗಡೆ ಆಗಲಿರುವ ಶಹಾಪುರ ತಾಲ್ಲೂಕಿನ ಹುರಸಗುಂಡಿಗಿ ಗ್ರಾಮದ ಸಂತ್ರಸ್ತರಿಗೆ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದು, ಮುಖ್ಯ ಎಂಜಿನಿಯರ್ ಪರಿಶೀಲನೆ ಮಾಡಿದ ನಂತರ ಲೇಔಟ್ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹುರಸಗುಂಡಿಗಿಯಲ್ಲಿ ಮೂರು ವಿಷಯಗಳಿವೆ. ಮುಳುಗಡೆ ಆಗುವ ಜಮೀನು ಹಾಗೂ ಮನೆಗಳಿಗೆ ಪರಿಹಾರ ನೀಡಬೇಕು. ಇನ್ನೊಂದೆಡೆ ಮನೆಗಳನ್ನು ನಿರ್ಮಿಸಲು ವಸತಿ ವಿನ್ಯಾಸ ಅಭಿವೃದ್ಧಿಪಡಿಸಬೇಕಾಗಿದೆ ಎಂದರು.
ಮುಳುಗಡೆ ಆಗಲಿರುವ ಮನೆಗಳ ಸಮೀಕ್ಷೆಯಲ್ಲಿ ದೋಷವಿದೆ ಎಂಬ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಮತ್ತೊಂದು ಸಮೀಕ್ಷೆ ನಡೆಸಲಾಗಿದ್ದು, ವರದಿ ಸಿದ್ಧಪಡಿಸಲಾಗಿದೆ. ಈಗಾಗಲೇ ಮನೆಗಳ ಪರಿಹಾರ ಪಡೆಯುವವರ ಪಟ್ಟಿ ಸಿದ್ಧವಾಗಿದೆ. ಅದರಂತೆ ಪರಿಹಾರ ಧನ ಸ್ವೀಕರಿಸಲು ಗ್ರಾಮಸ್ಥರು ಒಪ್ಪಿದ್ದಾರೆ. ಹೆಚ್ಚಿನ ಪರಿಹಾರಕ್ಕೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಸಂತ್ರಸ್ತರಿಗೆ ಮನೆ ನಿರ್ಮಿಸಲು ಲೇಔಟ್ ಅಭಿವೃದ್ಧಿ ಪಡಿಸಬೇಕಾಗಿದೆ. ಅದಕ್ಕಾಗಿ ರೂ.2 ಕೋಟಿಯ ಅಂದಾಜು ಪತ್ರಿಕೆಯನ್ನು ಸಲ್ಲಿಸಲಾಗಿದೆ. ಸುಸಜ್ಜಿತ ಲೇಔಟ್ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡದ ಹಿನ್ನೆಲೆಯಲ್ಲಿ ರೂ.9 ಕೋಟಿಯ ಅಂದಾಜು ಸಿದ್ಧಪಡಿಸಲಾಗಿದೆ. ಈ ಮೊತ್ತ ಹೆಚ್ಚಾಗಲಿದೆ ಎಂಬ ಹಿನ್ನೆಲೆಯಲ್ಲಿ ಮುಖ್ಯ ಎಂಜಿನಿಯರ್‌ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಲಾಗಿದೆ. ಪರಿಶೀಲಿಸಿದ ನಂತರ ಇಷ್ಟು ಮೊತ್ತ ಅಗತ್ಯವಾಗಿದೆ ಎಂಬ ನಿರ್ಧಾರಕ್ಕೆ ಬಂದಲ್ಲಿ, ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಮೊದಲು ಗುರುತಿಸಿದ್ದ ನಿವೇಶನದಲ್ಲಿ ಕಪ್ಪು ಮಣ್ಣಿದ್ದು, ಬೇರೆ ಸ್ಥಳಕ್ಕೆ ಗ್ರಾಮಸ್ಥರು ಮನವಿ ಮಾಡಿದ್ದರು. ಆದರೆ ಒಂದು ತಿಂಗಳು ಕಾಲಾವಕಾಶ ನೀಡಿದ್ದರೂ ಯಾವುದೇ ಸ್ಥಳವನ್ನು ಗ್ರಾಮಸ್ಥರು ಗುರುತಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಹಳೆಯ ಜಾಗೆಯಲ್ಲಿಯೇ ಮನೆ ನಿರ್ಮಿಸಲು ಒಪ್ಪಿಕೊಂಡಿದ್ದಾರೆ. ಕಪ್ಪು ಮಣ್ಣು ಇರುವುದರಿಂದ ತಳಪಾಯಕ್ಕಾಗಿ ಹೆಚ್ಚಿನ ಪರಿಹಾರ ನೀಡುವಂತೆ ಕೋರಿಕೆ ಸಲ್ಲಿಸಿದ್ದಾರೆ. ಇದಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಭೂಸ್ವಾಧೀನ ಪ್ರಕ್ರಿಯೆಯನ್ನು ಕೃಷ್ಣಾ ಭಾಗ್ಯ ಜಲನಿಗಮದವರೇ ಮಾಡಬೇಕಿದ್ದು, ಸರ್ಕಾರ ಸೂಚಿಸಿದರೇ ಮಾತ್ರ ಪರಿಹಾರ ವಿತರಣೆಯಲ್ಲಿ ಜಿಲ್ಲಾಡಳಿತ ಮಧ್ಯ ಪ್ರವೇಶಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.ಪ್ರತಿ ತಿಂಗಳು ಹುರಸಗುಂಡಿಯಲ್ಲಿ ಅಧಿಕಾರಿಗಳು ಗ್ರಾಮಸ್ಥರ ಜೊತೆ ಸಭೆ ನಡೆಸುತ್ತಿದ್ದು, ಅಹವಾಲುಗಳನ್ನು ಆಲಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.