ADVERTISEMENT

ಯಾದಗಿರಿ | ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ: ಜಿಲ್ಲಾಧಿಕಾರಿ ಮನವಿ

​ಪ್ರಜಾವಾಣಿ ವಾರ್ತೆ
Published 23 ಮೇ 2020, 16:17 IST
Last Updated 23 ಮೇ 2020, 16:17 IST
ಎಂ.ಕೂರ್ಮಾರಾವ್, ಜಿಲ್ಲಾಧಿಕಾರಿ
ಎಂ.ಕೂರ್ಮಾರಾವ್, ಜಿಲ್ಲಾಧಿಕಾರಿ   

ಯಾದಗಿರಿ: 'ಕೋವಿಡ್-19 ಪ್ರಕರಣಗಳನ್ನು ತ್ವರಿತವಾಗಿ ಪತ್ತೆ ಹಚ್ಚಿದಲ್ಲಿ ಪಾಸಿಟಿವ್ ವ್ಯಕ್ತಿಗಳಿಗೆ ಶೀಘ್ರ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಲು 20 ತಂಡಗಳನ್ನು ರಚಿಸಲಾಗಿದೆ.’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ತಿಳಿಸಿದ್ದಾರೆ.

'ಸರ್ಕಾರದ ಮಾರ್ಗಸೂಚಿಗಳನ್ವಯ ಸದ್ಯ ಪ್ರತಿದಿನ ಸುಮಾರು 800ರವರೆಗೆ ಮಾದರಿಗಳನ್ನು ಕೊರೊನಾ ಪರೀಕ್ಷೆಗಾಗಿ ಕಳುಹಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಮಾದರಿಗಳನ್ನು ಪರೀಕ್ಷೆ ಮಾಡಲು ಬೆಂಗಳೂರಿನಲ್ಲಿ ಒಂದು ಲ್ಯಾಬ್ ಕೂಡ ಸರ್ಕಾರ ನಿಗದಿಪಡಿಸಿದೆ. ಇದರಲ್ಲಿ ದಿನಕ್ಕೆ ಸುಮಾರು 1,500 ಮಾದರಿಗಳನ್ನು ಪರೀಕ್ಷೆ ಮಾಡಬಹುದಾಗಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೋವಿಡ್-19 ಟೆಸ್ಟ್ ಪೂರ್ವಭಾವಿಯಾಗಿ ನಡೆಸುವ ಟ್ರೂನ್ಯಾಟ್ ಟೆಸ್ಟ್ ಲ್ಯಾಬ್ ಅನ್ನು ಈಗಾಗಲೇ ಉದ್ಘಾಟನೆ ಮಾಡಲಾಗಿದ್ದು, ಒಟ್ಟು 2 ಟ್ರೂನ್ಯಾಟ್ ಟೆಸ್ಟ್ ಲ್ಯಾಬ್‍ಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಕೋವಿಡ್-19 ಆರ್ಟಿಫಿಸಿಯಲ್ ಲ್ಯಾಬ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದ್ದು, ಲ್ಯಾಬ್‍ನ ಉಪಕರಣ ಬಂದ ತಕ್ಷಣ ಪರೀಕ್ಷೆ ನಡೆಸಲಾಗುವುದು. ಆರ್ಟಿಫಿಸಿಯಲ್ ಲ್ಯಾಬ್ ಆರಂಭವಾದಲ್ಲಿ ಕೊರೊನಾ ಪರೀಕ್ಷೆಗಾಗಿ ಬೇರೆ ಕಡೆ ಮಾದರಿ ಕಳುಹಿಸುವುದು ತಪ್ಪುತ್ತದೆ’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯ ಕೊರೊನಾ ಪಾಸಿಟಿವ್ ವ್ಯಕ್ತಿಗಳನ್ನು ಮುದ್ನಾಳ ಸಮೀಪದ ನೂತನ ಜಿಲ್ಲಾಸ್ಪತ್ರೆ (ಕೋವಿಡ್-19 ಆಸ್ಪತ್ರೆ)ಯಲ್ಲಿ ಅವಲೋಕನೆಗಾಗಿ ಇರಿಸಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ 150 ಬೆಡ್‍ಗಳ ವ್ಯವಸ್ಥೆ ಇದ್ದು, ಈ ಪೈಕಿ 32 ಬೆಡ್‍ಗಳಿಗೆ ಹೈಫ್ಲೋ ಆಕ್ಸಿಜನ್ ವ್ಯವಸ್ಥೆ ಇದೆ. ಇನ್ನೂ 100 ಬೆಡ್‍ಗಳಿಗೆ ಹೈಫ್ಲೋ ಆಕ್ಸಿಜನ್ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೇ, ಹೆಚ್ಚಿನ ಬೆಡ್‍ಗಳ ವ್ಯವಸ್ಥೆಗೂ ಕ್ರಮ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಕೋವಿಡ್-19 ಸೌಮ್ಯ ಮತ್ತು ಅತೀ ಸೌಮ್ಯ ಪ್ರಕರಣಗಳಿಗಾಗಿ ಭೀಮರಾಯನಗುಡಿಯಲ್ಲಿ 250 ಬೆಡ್, ಬಂದಳ್ಳಿ ಏಕಲವ್ಯ ಶಾಲೆಯಲ್ಲಿ 200 ಬೆಡ್, ಸುರಪುರ ನಿಷ್ಠಿ ಕಾಲೇಜಿನಲ್ಲಿ ಕೂಡ ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ, ಸಾರ್ವಜನಿಕರಲ್ಲಿ ಆತಂಕ ಅಥವಾ ಭಯ ಬೇಡ ಎಂದು ತಿಳಿಸಿದರು.

ಕೊರೊನಾ ತಡೆಗಾಗಿ ವೈದ್ಯರು ಮತ್ತು ತಜ್ಞ ವೈದ್ಯರ ನೇಮಕ ಮಾಡಿಕೊಳ್ಳಲು ಈಗಾಗಲೇ ಪ್ರಕಟಣೆ ಹೊರಡಿಸಲಾಗಿದೆ. ಅರ್ಹ ವೈದ್ಯರು ಮತ್ತು ತಜ್ಞ ವೈದ್ಯರು ನೇರವಾಗಿ ಸಂಪರ್ಕಿಸಿದರೂ ತಕ್ಷಣ ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ ಇದ್ದರು.

***

ಎಲ್ಲ ಕ್ವಾರಂಟೈನ್‌ಗಳಲ್ಲಿ ಇದ್ದವರ ಗಂಟಲು ದ್ರವ ಮಾದರಿ ತೆಗೆದುಕೊಂಡು ಶೀಘ್ರವೇ ಮಾದರಿ ಸಂಗ್ರಹ ಹೆಚ್ಚಳ ಮಾಡಲಾಗುವುದು
-ಎಂ.ಕೂರ್ಮಾರಾವ್‌,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.