ADVERTISEMENT

ಭೂಸ್ವಾಧೀನ: ₹ 319 ಕೋಟಿ ಅನುದಾನ ಬಿಡುಗಡೆ

ಮೈಸೂರು ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆ ಪ್ರಕ್ರಿಯೆಗೆ ಲಭಿಸಿದ ಜೀವ!

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 2:33 IST
Last Updated 17 ಏಪ್ರಿಲ್ 2022, 2:33 IST
ಮೈಸೂರಿನ ವಿಮಾನ ನಿಲ್ದಾಣ
ಮೈಸೂರಿನ ವಿಮಾನ ನಿಲ್ದಾಣ   

ಮೈಸೂರು: ಮೈಸೂರು ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡಿರುವ ಭೂಮಿ ಸಂಬಂಧ ರೈತರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ₹ 319 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ರನ್‌ವೇ ವಿಸ್ತರಣೆಗೆ ಕೇಂದ್ರ ಸರ್ಕಾರದ ಒಪ್ಪಿಗೆ ಲಭಿಸಿದ್ದು, ಶೀಘ್ರವೇ ಅನುದಾನ ಬಿಡುಗಡೆ ಮಾಡುವಂತೆ ಸಂಸದ ಪ್ರತಾಪಸಿಂಹ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು.

‌‘ರನ್‌ವೇ ವಿಸ್ತರಣೆಗೆ ಕೇಂದ್ರ ಸರ್ಕಾರ ಈಗಾಗಲೇ ₹ 700 ಕೋಟಿ ಮೀಸಲಿಟ್ಟಿದೆ. ಇನ್ನೂ ಹೆಚ್ಚಿನ ಅನುದಾನದ ಅಗತ್ಯವಿದೆ. ಅಂಡರ್‌ಪಾಸ್‌ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ₹ 400 ಕೋಟಿ ಬೇಕಾಗುತ್ತದೆ. ಹೀಗಾಗಿ, ಅಂಡರ್‌ ಪಾಸ್‌ ನಿರ್ಮಾಣದ ಬದಲು ರಾಷ್ಟ್ರೀಯ ಹೆದ್ದಾರಿಯನ್ನೇ ಡಿವಿಯೇಷನ್‌ ಮಾಡುವ ಯೋಜನೆ ಇದೆ. ಸದ್ಯದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದು ಸಂಸದ ಪ್ರತಾಪಸಿಂಹ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಭೂಸ್ವಾಧೀನಕ್ಕೆ ಅನುದಾನ ಬಿಡುಗಡೆ ಮಾಡಿಸಿಕೊಳ್ಳಲು ಸತತ ಐದು ವರ್ಷಗಳಿಂದ ಪ್ರಯತ್ನಿಸಿದ್ದೇನೆ. ಈ ಅವಧಿಯಲ್ಲಿ ಮೂರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಪತ್ರ ನೀಡಿದ್ದೇನೆ. ಸಚಿವರಾದ ವಿ.ಸೋಮಣ್ಣ, ಎಸ್‌.ಟಿ.ಸೋಮಶೇಖರ್‌ ನೆರವಿನಿಂದ ಅನುದಾನ ಲಭಿಸಿದೆ’ ಎಂದರು.

ಈ ಉದ್ದೇಶಕ್ಕೆ ಒಟ್ಟು 240 ಎಕರೆ ಜಮೀನು ಬೇಕಿದೆ. 206 ಎಕರೆ 22.5 ಗುಂಟೆ ಜಮೀನು ನೀಡಲು ಮುಂದಾಗಿರುವ ರೈತರಿಗೆ ಎಕರೆಗೆ ₹ 1.5 ಕೋಟಿಯಂತೆ ನೀಡಲು ಸರ್ಕಾರ ಈಗಾಗಲೇ ಒಪ್ಪಿಗೆ ಸೂಚಿಸಿದೆ.

‘ಪ್ರತಾಪಸಿಂಹ ಅವರ ಸತತ ಪ್ರಯತ್ನದಿಂದ ಭೂಸ್ವಾಧೀನಕ್ಕೆ ಹಣ ಬಿಡುಗಡೆ ಆಗಿದೆ. ಇನ್ನು ಉಳಿದ ಪ್ರಕ್ರಿಯೆಗಳು ವೇಗ ಪಡೆಯಲಿವೆ’ ಎಂದು ಮಂಡಕಳ್ಳಿಯಲ್ಲಿರುವ ವಿಮಾನ ನಿಲ್ದಾಣದ ನಿರ್ದೇಶಕ ಆರ್‌.ಮಂಜುನಾಥ್‌ ತಿಳಿಸಿದರು.

2005 ಹಾಗೂ 2012ರಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಜೊತೆ ರಾಜ್ಯ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದ್ದು, ರನ್‌ವೇ ವಿಸ್ತರಣೆಗೆ ಭೂಮಿಯನ್ನು ಉಚಿತವಾಗಿ ನೀಡುವುದಾಗಿ ಹೇಳಿತ್ತು.

ವಿಮಾನ ನಿಲ್ದಾಣದ ಮುಂದೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗೆ (ಮೈಸೂರು–ನಂಜನಗೂಡು) ಅಂಡರ್‌ಪಾಸ್‌ ನಿರ್ಮಿಸಿ ಅದರ ಮೇಲೆ ರನ್‌ವೇ ಅಭಿವೃದ್ಧಿಪಡಿಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಒಪ್ಪಿಗೆ ಸೂಚಿಸಿದೆ. ತಾಂತ್ರಿಕ ಅಧಿಕಾರಿಗಳು ಮಣ್ಣಿನ ಸಾಮರ್ಥ್ಯ ಪರೀಕ್ಷಿಸಿ, ಹಸಿರು ನಿಶಾನೆ ಕೂಡ ತೋರಿದ್ದಾರೆ. ಭದ್ರತಾ ಒಪ್ಪಿಗೆಯೂ ಲಭಿಸಿದೆ.

ಸದ್ಯ 1,740 ಮೀಟರ್‌ ಉದ್ದದ ರನ್‌ವೇ ಇದೆ. ಅದನ್ನು ಮತ್ತೆ 1,010 ಮೀಟರ್‌ ವಿಸ್ತರಿಸುವ ಅಗತ್ಯವಿದೆ. ವಿಸ್ತರಣೆಯಾದಲ್ಲಿ ದೊಡ್ಡ ವಿಮಾನಗಳು (ಏರ್‌ ಬಸ್‌, ಬೋಯಿಂಗ್‌ ಜೆಟ್‌) ಬಂದಿಳಿಯಲು ಸಾಧ್ಯವಾಗಲಿದ್ದು, ವಿದೇಶಕ್ಕೂ ಸಂಪರ್ಕ ಕಲ್ಪಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.