ADVERTISEMENT

ಯಾದಗಿರಿ | ಸಂಭ್ರಮ ಹೆಚ್ಚಿಸಿದ ಮಾನವ ಸರಪಳಿ

ಜಿಲ್ಲೆಯಾದ್ಯಂತ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 15:21 IST
Last Updated 15 ಸೆಪ್ಟೆಂಬರ್ 2024, 15:21 IST
ಯಾದಗಿರಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಭಾನುವಾರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ 
ಯಾದಗಿರಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಭಾನುವಾರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ    

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಜಿಲ್ಲೆಯ ಯರಗೋಳ ಗಡಿಯಿಂದ ಗೂಗಲ್‌ನ ಗಡಿಯವರೆಗೆ ಬೃಹತ್ ಮಾನವ ಸರಪಳಿ ಆಯೋಜಿಸಿದ್ದು, ಸಂಭ್ರಮ ಹೆಚ್ಚಿಸಿತ್ತು.

ಭಾನುವಾರ ಬೆಳಿಗ್ಗೆ ಜಿಲ್ಲಾಡಳಿತ ಭವನದಲ್ಲಿ ವೇದಿಕೆ ಕಾರ್ಯಕ್ರಮ ಏರ್ಪಡಿಸಿದ್ದು, ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಮುಖಂಡರು, ಅಧಿಕಾರಿ ವರ್ಗ ಸಿದ್ಧತೆಯ ಗಡಿಬಿಡಿಯಲ್ಲಿದ್ದರು. ವೇದಿಕೆ ಮುಂಭಾಗದಲ್ಲಿ ಸಂವಿಧಾನ ಪೀಠಿಕೆ ಬೃಹತ್‌ ಫಲಕ ಅಳವಡಿಸಲಾಗಿತ್ತು.

ವಿವಿಧ ಕಲಾ ತಂಡಗಳು ಭಾಗವಹಿಸಿ ಸಾರ್ವಜನಿಕರನ್ನು ಗಮನ ಸೆಳೆದವು. ಡೊಳ್ಳು, ಬಾಜಭಜಂತ್ರಿ, ವಿವಿಧ ವಾದ್ಯ ಮೇಳಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಇದೇ ವೇಳೆ ಸಂವಿಧಾನ ಪೀಠಿಕೆ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ADVERTISEMENT

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಬೀದರ್ ರಾಜ್ಯದಿಂದ ಚಾಮರಾಜನಗರವರೆಗೆ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಮಾನವ ಸರಪಳಿ ರೂಪಿಸುವ ಮೂಲಕ ವಿಶೇಷವಾಗಿ ಆಚರಿಸಿರುವುದು ಸಂಭ್ರಮಕ್ಕೆ ಕಾರಣವಾಗಿತ್ತು. ಯಾದಗಿರಿ ಜಿಲ್ಲೆಯಲ್ಲಿ ಯರಗೋಳದಿಂದ ಆರಂಭವಾದ ಮಾನವ ಸರಪಳಿ, ಅಲ್ಲಿಪುರ, ಯಾದಗಿರಿ, ಭೀಮಾ ನದಿ ಸೇತುವೆ, ವಡಗೇರಾ ಕ್ರಾಸ್‌, ಗೆಡ್ಡೆಸೂಗೂರು, ಹಾಲಗೇರಾ, ವಡಗೇರಾ, ತುಮಕೂರು, ಅಭಿಶಾಳ, ರೋಟ್ನಡಗಿ, ಕದರಾಪುರ, ಗೂಗಲ್‌ ಸೇತುವೆ ವರೆಗೆ ಮಾನವ ಸರಪಳಿ ರಚಿಸಲಾಗಿತ್ತು. ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು, ಅಧಿಕಾರಿಗಳು, ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಸಂಭ್ರಮಿಸಿದರು.

ಗಮನ ಸೆಳೆದ ಡ್ರೆಸ್‌ ಕೋಡ್‌: ಜಿಲ್ಲಾಡಳಿತ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಧಿಕಾರಿ, ಸಿಬ್ಬಂದಿ ವರ್ಗ ವೇಷ ಭೂಷಣಗಳಿಂದ ಗಮನ ಸೆಳೆದರು. ಮಹಿಳಾ ಅಧಿಕಾರಿ, ಸಿಬ್ಬಂದಿ ಸಂಪ್ರಾದಾಯಿಕ ಸೀರೆ, ಪುರುಷ ಅಧಿಕಾರಿ ಸಿಬ್ಬಂದಿ ಪಂಚೆ ತೊಟ್ಟು ಸಂಭ್ರಮಿಸಿದರು.

ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಜಿಲ್ಲಾಡಳಿತ ಭವನದ ಆವರಣದಲ್ಲಿ ಭಾನುವಾರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಯರಗೋಳದಿಂದ ಗೂಗಲ್ ಬ್ರಿಡ್ಜ್ ಗಡಿಯವರೆಗೆ ಹಮ್ಮಿಕೊಂಡ ಮಾನವ ಸರಪಳಿ ವೇದಿಕೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ದೀಪ ಬೆಳಗಿಸಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು,‘ಇಂದಿನ ದಿನ ವಿಶೇಷ ಹಾಗೂ ಇತಿಹಾಸದ ದಿನವಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಬೀದರ್ ಜಿಲ್ಲೆಯಿಂದ ಚಾಮರಾಜನಗರದವರೆಗೆ ಸುಮಾರು 2,500 ಕಿಲೋಮೀಟರ್ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಂಡಿದೆ’ ಎಂದರು.

‘ಭಾರತ ದೇಶದಲ್ಲಿ ವಿವಿಧ ಜಾತಿ, ಧರ್ಮ, ಸಮುದಾಯ, ಭಾಷೆ, ಆಚಾರ ವಿಚಾರ, ಸಂಸ್ಕೃತಿ ಇತ್ಯಾದಿಗಳ ವೈವಿಧ್ಯಗಳು ಇದ್ದುರೂ ಇಂದಿಗೂ ಕೂಡ ಭಾರತ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸಿಕೊಂಡು ಬಂದಂಥ ಜಗತ್ತಿನ ಏಕೈಕ ದೇಶ, ಜಾತ್ಯತೀತ ತತ್ವಗಳ ಅಡಿಯಲ್ಲಿ ರೂಪಿತವಾದ ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂಬ ಭಾವನೆ ನಮ್ಮೆಲ್ಲರಲ್ಲಿ ಅಡಕವಾಗಿದೆ’ ಎಂದು ಹೇಳಿದರು.

‘ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಸಂವಿಧಾನ ಬಗ್ಗೆ ಮಾನವ ಸರಪಳಿ ನಿರ್ಮಿಸುವ ಉದ್ದೇಶ ನಾವೆಲ್ಲರೂ ಕೂಡ ಒಂದೇ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬುದಾಗಿದೆ. ನಾಡಿನ ಜನರು ಕೈ ಜೋಡಿಸಿದಾಗ ಮಾತ್ರ ರಾಜ್ಯ, ರಾಷ್ಟ್ರ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಮಾತನಾಡಿ,‘ಪ್ರಜಾಪ್ರಭುತ್ವ ಬಲಪಡಿಸಿ ಅದರ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಲುವಾಗಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಸೌಹಾರ್ದತೆಯ ಭದ್ರಬುನಾದಿ ಮೇಲೆ ನಿಂತಿದೆ. ನಾವು ಆಳವಾದ, ಸಹಭಾಗಿತ್ವದ ಪ್ರಜಾಪ್ರಭುತ್ವಕ್ಕೆ ಬದ್ಧರಾಗಿರೋಣ ಮತ್ತು ಗೌರವಿಸೋಣ’ ಎಂದರು.

ಈ ಸಂದರ್ಭದಲ್ಲಿ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಪಾಟೀಲ, ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲವೀಶ್ ಒರ್ಡಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಸಂಗೀತ, ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ್ ಸೇರಿದಂತೆ ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.

ಯಾದಗಿರಿ ನಗರದ ನೇತಾಜಿ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಭಾನುವಾರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ‌‌ ನಿರ್ಮಿಸಲಾಯಿತು
ಯಾದಗಿರಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಚಿವ ಶಾಸಕ ಜಿಲ್ಲಾಧಿಕಾರಿ ಎಸ್‌ಪಿ ಅವರು ಮಾನವ ಸರಪಳಿ‌‌ ಯಲ್ಲಿ ಭಾಗವಹಿಸಿದ್ದರು
ಯಾದಗಿರಿ ನಗರದ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಭಾನುವಾರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ‌‌ಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ವೇಷ ಧರಿಸಿದ ಪುಟ್ಟ ಮಕ್ಕಳ ವಿಶೇಷ ಗಮನ ಸೆಳೆಯಿತು
ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿನ್ನಲೆಯಲ್ಲಿ ಧಿಕ್ಕಾರ ಕೂಗಿದ ಸಂಘಟನೆಗಳ ಮುಖಂಡರು

ಶಾಸಕರ ಬಂಧನಕ್ಕೆ ವಿವಿಧ ಸಂಘಟನೆಗಳ ಆಗ್ರಹ ಯಾದಗಿರಿ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ವೇದಿಕೆ ಕಾರ್ಯಕ್ರಮದಲ್ಲಿ ನಗರಠಾಣೆಯ ಪಿಎಸ್‌ಐ ದಿ.ಪರಶುರಾಮ್‌ ಸಾವಿನ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭಾಗವಹಿಸಬಾರದು ಎಂದು ದಲಿತ ಕನ್ನಡಪ‍ರ ಸಂಘಟನೆಗಳಿಂದ ಆಗ್ರಹಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರು ರಾಜಾ ವೇಣುಗೋಪಾಲ ನಾಯಕ ಹಾಗೂ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸಸಿಗಳನ್ನು ನೆಡಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತೆರಳಿದರು. ಈ ವೇಳೆ ವೇದಿಕೆ ಮುಂಭಾಗಕ್ಕೆ ಧುಮುಕಿದ ಪ್ರತಿಭಟನಾಕಾರರು ಜೈ ಸಂವಿಧಾನ ಘೋಷಣೆ ಹಾಕಿಲ್ಲವೆಂದು ದಲಿತ ಸಂಘಟನೆಗಳ ಮುಖಂಡರು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಅವರಲ್ಲಿ ಕೆಲವರು ವೇದಿಕೆ ಮೇಲೆ ಹತ್ತಿ ಮೈಕ್ ಮೂಲಕ ಧಿಕ್ಕಾರ ಹಾಕಿದರು. ಇದಾದ ಬಳಿಕ ಪಿಎಸ್‌ಐ ಪರಶುರಾಮ ಅವರ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕರನ್ನು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದು ಸರಿಯಲ್ಲ. ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ಶಾಸಕರ ಕಾರಿಗೆ ಮುತ್ತಿಗೆ ಹಾಕಲು ಹೋರಾಟಗಾರರು ಜಿಲ್ಲಾಡಳಿತ ಭವನದ ಗೇಟ್ ಬಳಿ ಜಮಾಯಿಸಿದರು. ಪಕ್ಕದ ಗೇಟಿನಿಂದ ಶಾಸಕರನ್ನು ಪೊಲೀಸರು ಕಳುಹಿಸಿದರು. ಶಾಸಕರನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.