ADVERTISEMENT

ಹೊಸ ಬದುಕಿಗೆ ಕಾಲಿಟ್ಟ ಮಾನಸಿಕ ಅಸ್ವಸ್ಥೆ

ಸುರಪುರ: ಕಾನೂನು ಸೇವಾ ಪ್ರಾಧಿಕಾರದ ಮಾನವೀಯ ಕಾರ್ಯ

ಅಶೋಕ ಸಾಲವಾಡಗಿ
Published 28 ಜನವರಿ 2023, 6:26 IST
Last Updated 28 ಜನವರಿ 2023, 6:26 IST
ಮಾನಸಿಕ ಅಸ್ವಸ್ಥೆಯಿಂದ ಗುಣಮುಖಳಾದ ಮಹಿಳೆ ಸುರಪುರದ ಕೋರ್ಟ್‍ನಲ್ಲಿ ಬುಧವಾರ ನ್ಯಾಯಾಧೀಶ ಮಾರುತಿ ಕೆ. ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು
ಮಾನಸಿಕ ಅಸ್ವಸ್ಥೆಯಿಂದ ಗುಣಮುಖಳಾದ ಮಹಿಳೆ ಸುರಪುರದ ಕೋರ್ಟ್‍ನಲ್ಲಿ ಬುಧವಾರ ನ್ಯಾಯಾಧೀಶ ಮಾರುತಿ ಕೆ. ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು   

ಸುರಪುರ: ಮಾನಸಿಕ ಅಸ್ವಸ್ಥೆಯೊಬ್ಬರು ಕಾನೂನು ಸೇವಾ ಪ್ರಾಧಿಕಾರದ ಕಾಳಜಿಯಿಂದ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.

2022ರ ಸೆಪ್ಟೆಂಬರ್ ತಿಂಗಳು. ಇಲ್ಲಿಯ ಸಿವಿಲ್ ನ್ಯಾಯಾಧೀಶ ಮಾರುತಿ ಕೆ. ಕಾನೂನು ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಲು ತಮ್ಮ ವಾಹನದಲ್ಲಿ ಹೊರಟಿದ್ದರು. ಅವರಿಗೆ ಮಾನಸಿಕ ಅಸ್ವಸ್ಥ ಮಹಿಳೆ ಕಣ್ಣಿಗೆ ಬಿದ್ದರು. ಅನತಿ ದೂರದಲ್ಲಿ ಕಾಲೇಜು ವಿದ್ಯಾರ್ಥಿನಿಯರು ಹೊರಟಿದ್ದನ್ನು ಗಮನಿಸಿದ ನ್ಯಾಯಾಧೀಶರು, ಮಾನಸಿಕ ಅಸ್ವಸ್ಥೆಗೆ ಬಟ್ಟೆ ತೊಡಿಸುವಂತೆ ವಿದ್ಯಾರ್ಥಿನಿಯರಿಗೆ ಹಣ ನೀಡಿದರು. ವಿದ್ಯಾರ್ಥಿನಿಯರು ಸ್ಪಂದಿಸಿ ನೈಟಿ ತಂದು ತೊಡಿಸಿದರು.

ಮರುದಿನ ವಿದ್ಯಾರ್ಥಿನಿಯರು ಮಾನಸಿಕ ಅಸ್ವಸ್ಥೆ ಮತ್ತೆ ವಿಚಿತ್ರವಾಗಿ ಹಾಗೂ ಅಸಭ್ಯವಾಗಿ ತಿರುಗುತ್ತಿರುವುದನ್ನು ಗಮನಿಸಿದರು. ಏನಾದರೂ ವ್ಯವಸ್ಥೆ ಮಾಡಬೇಕೆಂದು ತಮಗೆ ಪರಿಚಿತ ವಕೀಲ ಸಲೀಂ ಖಾಜಿ ಅವರೊಂದಿಗೆ ಚರ್ಚಿಸಿದರು. ಅವರ ಸಲಹೆಯಂತೆ ಖಾಜಿಯವರೊಂದಿಗೆ ಕೋರ್ಟ್‍ಗೆ ತೆರಳಿ ವಿದ್ಯಾರ್ಥಿನಿಯರಾದ ಅಂಬಿಕಾ, ರೇಣುಕಾ, ಯಲ್ಲಮ್ಮ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೆಪ್ಟೆಂಬರ್ 6 ರಂದು ಮನವಿ ಸಲ್ಲಿಸಿದರು. ಮನವಿ ತಕ್ಷಣ ಕೈಗೆತ್ತಿಕೊಂಡ ನ್ಯಾಯಾಧೀಶ ಮಾರುತಿ ಕೆ. ಅವರು ಅಸ್ವಸ್ಥೆಗೆ ತಕ್ಷಣ ಚಿಕಿತ್ಸೆಯ ವ್ಯವಸ್ಥೆ ಮಾಡುವಂತೆ ಪೊಲೀಸ್ ಇಲಾಖೆಗೆ ಸೆ. 7ರಂದು ಸೂಚಿಸಿದರು.

ADVERTISEMENT

ಕಾರ್ಯಪ್ರವೃತ್ತರಾದ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್‌ ಕೃಷ್ಣ ಸುಬೇದಾರ, ಸಹಾಯಕ ಇನ್‍ಸ್ಪೆಕ್ಟರ್ ಮನೋಹರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪನಾಯಕ ಅವರ ನೆರವಿನಿಂದ ಅಸ್ವಸ್ಥೆಯನ್ನು ಅದೇ ದಿನ ಧಾರವಾಡ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಪದ್ಮಾವತಿ ನಾಯಕ ಸಹ ಸಹಾಯ ಮಾಡಿದರು. ಆಸ್ಪತ್ರೆ ವೈದ್ಯರ ಚಿಕಿತ್ಸೆಯಿಂದ ಪವಾಡವೆಂಬಂತೆ ಅಸ್ವಸ್ಥೆ 4 ತಿಂಗಳಲ್ಲೇ ಸಂಪೂರ್ಣ ಗುಣಮುಖಳಾದಳು. ವೈದ್ಯರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರು. ಪೊಲೀಸರು ಜ.24 ರಂದು ಕರೆದುಕೊಂಡು ಬಂದರು. ಜ.25 ರಂದು ನ್ಯಾಯಾಧೀಶರನ್ನು ಭೇಟಿಯಾದ ಮಹಿಳೆ ಕೃತಜ್ಞತೆ ಸಲ್ಲಿಸಿದರು. ನ್ಯಾಯಾಧೀಶರ ಕಣ್ಣಲ್ಲೂ ಆನಂದ ಭಾಷ್ಪ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.