ADVERTISEMENT

ನಗರಸಭೆ ಪೌರಾಯುಕ್ತ ಶರಣಪ್ಪರಿಂದ ಅಭಿವೃದ್ಧಿ ಸಾಧ್ಯವಿಲ್ಲ; ಆರೋಪ

ನಗರಸಭೆ ಪೌರಾಯುಕ್ತ ಶರಣಪ್ಪರಿಂದ ಅಭಿವೃದ್ಧಿ ಸಾಧ್ಯವಿಲ್ಲ; ಆರೋಪ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2022, 3:00 IST
Last Updated 16 ಅಕ್ಟೋಬರ್ 2022, 3:00 IST
ಯಾದಗಿರಿ ನಗರಸಭೆ ಪೌರಾಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ‌ ಒತ್ತಾಯಿಸಿದರು
ಯಾದಗಿರಿ ನಗರಸಭೆ ಪೌರಾಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ‌ ಒತ್ತಾಯಿಸಿದರು   

ಪ್ರಜಾವಾಣಿ ವಾರ್ತೆ

ಯಾದಗಿರಿ: ನಗರಸಭೆ ಪೌರಾಯುಕ್ತ ಶರಣಪ್ಪ ವಿನಾಕಾರಣ ನಗರಸಭೆ ಸಿಬ್ಬಂದಿಯನ್ನು ಸೇರಿಸಿ ಸದಸ್ಯರ ವಿರುದ್ಧ ಪ್ರತಿಭಟನೆ ನಡೆಸಿರುವುದನ್ನು ಖಂಡಿಸಿ ನಗರಸಭೆ ಅಧ್ಯಕ್ಷರಾದಿಯಾಗಿ ಸದಸ್ಯರು ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.

ಜಿಲ್ಲಾಧಿಕಾರಿಗೆ ಕಚೇರಿ ಜಮಾಯಿಸಿದ ಸದಸ್ಯರು ಪೌರಾಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ADVERTISEMENT

ಪೌರಾಯುಕ್ತರು ನಗರಸಭೆ ಸದಸ್ಯರು ಅವಾಚ್ಯ ಶಬ್ದ ನಿಂದಿಸಿದ್ದಾರೆ ಎಂದು ಮಾಧ್ಯಮಗಳ ಮುಂದೆ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಸದಸ್ಯರ ಹನುಮಂತ ಇಟಿಗೆ ಪೌರಾಯುಕ್ತರನ್ನು ಭೇಟಿಯಾಗಿ ಅವರ ವಾರ್ಡ್‌ನ ಸಮಸ್ಯೆಗಳ ಬಗ್ಗೆ ಕೇಳಿದಾಗ ಹಾರಿಕೆ ಉತ್ತರವನ್ನು ನೀಡಿದ್ದಾರೆ. ಜುಲೈ 18ರಂದು ನಗರಸಭೆಯಲ್ಲಿ ಜರುಗಿದ್ದ ಸಾಮಾನ್ಯ ಸಭೆಯಲ್ಲಿ ನಡಾವಳಿ ಪತ್ರ ಕೊಡಿ ಎಂದಾಗ ಹಾರಿಕೆ ಉತ್ತರ ನೀಡಿದ್ದಾರೆ. ಅಲ್ಲದೇ ನಗರಸಭೆಯ ಸಭೆಯಲ್ಲಿ ಪಾಸಾದ ಠರಾವುಗಳನ್ನು ಇಲ್ಲಿವರೆಗೆ ಎಷ್ಟು ಕಾರ್ಯಗತಗೊಳಿಸಿದ್ದೀರಿ ಎಂದು ಕೇಳಿದರೂ ಹಾರಿಕೆ ಉತ್ತರ ನೀಡಿದ್ದಾರೆ.ಯಾವುದೇ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿದರು.

ಎಸ್‌ಎಫ್‌ಸಿ ಅನುದಾನ ಮಾರ್ಚ್‌ನಲ್ಲಿ ನಗರಸಭೆಗೆ ಬಂದರೂ ಅದನ್ನು ಟೆಂಡರ್ ಮಾಡಿ ಕಾಮಗಾರಿ ಪ್ರಾರಂಭಿಸುವುದಿಲ್ಲ. ವಿಳಂಬ ಯಾಕೆ ಎಂದು ಕೇಳಿದರೂ ಸರಿಯಾಗಿ ಉತ್ತರಿಸಿಲ್ಲ. ಇವೆಲ್ಲ ವಿಷಯಗಳ ಬಗ್ಗೆ ಸದಸ್ಯರು ಕೇಳಿದರೆ ಅವರ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆಪಾದಿಸಿದರು.

ಅಧ್ಯಕ್ಷ ಸುರೇಶ ಅಂಬಿಗೇರ ವಿರುದ್ಧ ಕೂಡ ಸುಳ್ಳು ಆರೋಪ ಮಾಡಿ ಜಿಲ್ಲಾಧಿಕಾರಿಗೆ ದೂರನ್ನು ನೀಡಿದ್ದಾರೆ. ಇವರಿಗೆ ಕೆಲಸ ಮಾಡುವ ಎಂದು ಹೇಳಿದರೆ ಸಾಕು ಸದಸ್ಯರ ವಿರುದ್ಧ ಸಿಬ್ಬಂದಿಯನ್ನು ಎತ್ತಿಕಟ್ಟೆ ಧರಣಿ ಮಾಡುವ ಮನಸ್ಥಿತಿ ಹೊಂದಿದ್ದಾರೆ. ಇಂಥವರಿಂದ ಯಾದಗಿರಿ ನಗರದಲ್ಲಿ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ. ನಗರಸಭೆಯ ಸಭೆಯಲ್ಲಿ ಸದಸ್ಯರ ಸರ್ವಾನುಮತದಿಂದ ಪಾಸಾದ ಠರಾವುಗಳನ್ನು ಕಾರ್ಯಗೊಳಿಸದ ಇವರ ವಿರುದ್ಧ ಸೂಕ್ತ ಕಠಿಣ ಕ್ರಮ ಜರುಗಿಸಬೇಕೆಂದು ನಗರಸಭೆ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಸ್ಥಾಯಿ ಸಮಿತಿ ಅಧ್ಯಕ್ಷೆ ರುಕಯ್ಯಾ ಬೇಗಂ, ಉಪಾಧ್ಯಕ್ಷೆ ಚಂದ್ರಕಲಾ ಚಂದ್ರಕಾಂತ ಮಡ್ಡಿ, ಸದಸ್ಯರಾದ ಹಣಮಂತ ಇಟಗಿ, ಸ್ವಾಮಿದೇವ ದಾಸನಕೇರಿ, ವಿಲಾಸ್ ಪಾಟೀಲ, ಪ್ರಭಾವತಿ ಮಾರುತಿ ಕಲಾಲ್‌, ಮಹಾದೇವಮ್ಮ ಮಲ್ಲಯ್ಯ ಬೀರನೂರ, ವಿಜಯಲಕ್ಷ್ಮಿ ಕೃಷ್ಣಾ ನಾನೇಕ, ಅಂಬಯ್ಯ ಶಾಬಾದಿ, ಬಸ್ಸಮ್ಮ ಕುರುಕುಂಬಳ, ಸವಿತಾ ಶರಣಗೌಡ ಮಾಲಿಪಾಟೀಲ, ಸಾಹೇದಾ ಸುಲ್ತಾನ ವಹಿಬಾ, ಅಜಯ ಸಿನ್ನೂರ, ಆನಂದ ಗಡ್ಡಿಮನಿ, ಜಯಮ್ಮ ಸುರೇಶ ಮಡ್ಡಿ, ಮಂಜುನಾಥ್ ದಾಸನಕೇರಿ, ನಾಗಪ್ಪ ಬೆನಕಲ್, ಹನುಮಂತ ನಾಯಕ, ಅಸಾದ್ ಚಾವೂಸ್, ಇಸ್ಮಾಯಿಲ್ ಸಾಬ್, ಚನ್ನಕೇಶವ ಗೌಡ ಬಾಣತಿಹಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.