ADVERTISEMENT

ಸರ್ಕಾರಿ ಸೌಲಭ್ಯಗಳ ಸದ್ಬಳಕೆಗೆ ಶಾಸಕ ವೆಂಕಟರಡ್ಡಿ ಮುದ್ನಾಳ ಸಲಹೆ

ಲಿಂಗೈಕ್ಯ ವಿಶ್ವನಾಥರಡ್ಡಿ ಮುದ್ನಾಳ ಸಭಾಂಗಣ, ಹೆಚ್ಚುವರಿ ಕೋಣೆಗಳ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 6:55 IST
Last Updated 31 ಡಿಸೆಂಬರ್ 2021, 6:55 IST
ಯಾದಗಿರಿಯ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹೆಚ್ಚುವರಿ ತರಗತಿ ಕೋಣೆಗಳು ಮತ್ತು ಸಭಾಂಗಣವನ್ನು ಶಾಸಕ ವೆಂಕಟರಡ್ಡಿ ಮುದ್ನಾಳ ಲೋಕಾರ್ಪಣೆಗೊಳಿಸಿದರು
ಯಾದಗಿರಿಯ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹೆಚ್ಚುವರಿ ತರಗತಿ ಕೋಣೆಗಳು ಮತ್ತು ಸಭಾಂಗಣವನ್ನು ಶಾಸಕ ವೆಂಕಟರಡ್ಡಿ ಮುದ್ನಾಳ ಲೋಕಾರ್ಪಣೆಗೊಳಿಸಿದರು   

ಯಾದಗಿರಿ: ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್, ಟ್ಯಾಬ್, ವಿದ್ಯಾಸಿರಿ, ವಿದ್ಯಾರ್ಥಿನಿಯರಿಗೆ ಶುಲ್ಕ ಮರು ಪಾವತಿ, ರೈತ ಮಕ್ಕಳಿಗೆ ವಿದ್ಯಾನಿಧಿ ಹೀಗೆ ಅನೇಕ ಸೌಲಭ್ಯಗಳನ್ನು ಸರ್ಕಾರದಿಂದ ನೀಡಲಾಗುತ್ತಿದೆ. ಅವುಗಳನ್ನು ಸದ್ಭಳಕೆ ಮಾಡಿಕೊಂಡು ತಮ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಾಸಕ ವೆಂಕಟರಡ್ಡಿ ಮುದ್ನಾಳ ಕರೆ ನೀಡಿದರು.

ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2018-19ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಸರ್ಕಾರಿ ಪದವಿ ಮಹಾವಿದ್ಯಾಲಯದ ಹೆಚ್ಚುವರಿ ತರಗತಿ ಕೋಣೆಗಳು ಮತ್ತು ಸಭಾಂಗಣವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಉನ್ನತ ಶಿಕ್ಷಣ ಪಡೆಯಲು ಗ್ರಾಮೀಣ ಮತ್ತು ಬಡ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಅವರಿಗೆ ಗುಣಮಟ್ಟದ ಶಿಕ್ಷಣ ನೀಡಲು ಕಾಲೇಜಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಲಾಗಿದೆ. ಹೆಚ್ಚುವರಿ ತರಗತಿ ಕೊಠಡಿಗಳು, ಪ್ರಯೋಗಾಲಯ, ಶೌಚಾಲಯ, ಕಂಪೌಂಡ್ ನಿರ್ಮಾಣ ಹಾಗೂ ಕುಡಿಯುವ ನೀರಿನ ಘಟಕ ಸ್ಥಾಪನೆ ಹೀಗೆ ಅನೇಕ ಅಭಿವೃದ್ಧಿಯ ಕಾಮಗಾರಿಗಳನ್ನು ನೆರವೇರಿಸಲಾಗಿದೆಯೆಂದು ಹೇಳಿದರು.

ADVERTISEMENT

ನೂತನವಾಗಿ ನಿರ್ಮಾಣಗೊಂಡ ಸಭಾಂಗಣಕ್ಕೆ ಕಾಲೇಜು ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರು ಸೇರಿ ಒಮ್ಮತದ ನಿರ್ಣಯ ಮಾಡಿ ಲಿಂಗೈಕ್ಯ ತಮ್ಮ ತಂದೆ ವಿಶ್ವನಾಥರಡ್ಡಿ ಮುದ್ನಾಳ ಸಭಾಂಗಣ ಎಂದು ನಾಮಕರಣ ಮಾಡಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ಖಂಡಪ್ಪ ದಾಸನ್ ಮಾತನಾಡಿ, ಲಿಂಗೈಕ್ಯ ವಿಶ್ವನಾಥರಡ್ಡಿ ಮುದ್ನಾಳ ವಚನ ಪರಿಪಾಲಕರು, ಸ್ವಾತಂತ್ರ್ಯ ಹೋರಾಟಗಾರರು, ಅಸ್ಪಶೃತಾ ನಿವಾರಕರು, ರಾಜಕೀಯ ಮುತ್ಸದ್ಧಿ, ಅಪ್ಪಟ ದೇಶಪ್ರೇಮಿಯಾಗಿದ್ದರು. ಇಂಥವರ ತತ್ವ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು. ಮುತ್ಸದ್ಧಿ ನಮ್ಮ ಮಧ್ಯೆ ಆಗಿ ಹೋಗಿದ್ದಾರೆಂಬ ಅರಿವನ್ನು ಮೂಡಿಸಲು ಅವರ ಹೆಸರು ಚಿರಸ್ಥಾಯಿ ಗೊಳಿಸಲು ಸಭಾಂಗಣಕ್ಕೆ ಅವರ ಹೆಸರು ಇಡಲಾಗಿದೆಯೆಂದು ಹೇಳಿದರು.

ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ಮಾತನಾಡಿ, ಕಾಲೇಜಿನ ಅಭಿವೃದ್ಧಿಗಾಗಿ ಅಹವಾಲು ಸಲ್ಲಿಸಿದಾಗಲೆಲ್ಲ ಶಾಸಕರು ಸ್ಪಂದಿಸಿ ಅನುದಾನ ನೀಡಿದ್ದಾರೆ. ಕಾಲೇಜು ಮೂಲಭೂತ ಸೌಕರ್ಯಗಳಿಂದ ಉತ್ತಮಗೊಂಡಿದ್ದು, ಗುಣಮಟ್ಟದ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಯಾದಗಿರಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಚಂಡ್ರಕಿ, ನಗರಸಭೆ ಸದಸ್ಯ ಹಣಮಂತ ಇಟಗಿ, ಕಾಲೇಜು ಅಭಿವೃದ್ಧಿ ಸದಸ್ಯರಾದ ಸೋಮನಾಥ ಜೈನ್, ಸ್ನೇಹಾ ರಸಾಳಕರ್, ನರೇಂದ್ರ ಗಾಂಧಿ, ಪ್ರಮುಖರಾದ ಶರಣಗೌಡ ಬಾಡಿಯಾಳ, ಮೋಹನಬಾಬು, ರುದ್ರಗೌಡ, ಕೆಎಚ್‌ಬಿ ಎಂಜಿನಿಯರ್ ಶರಣಗೌಡ ಇದ್ದರು.

ನಿರ್ಮಲಾ ಪ್ರಾರ್ಥನಾ ಗೀತೆ ಹಾಡಿದರು. ಡಾ. ಸರ್ವೋದಯ ಶಿವಪುತ್ರ ಸ್ವಾಗತಿಸಿದರು. ಡಾ. ದೇವಿಂದ್ರಪ್ಪ ಹಳಿಮನಿ ವಂದಿಸಿದರು. ಪ್ರೊ. ಉಮೇಶ ನಿರೂಪಿಸಿದರು.

***

ಜಿಲ್ಲೆಯಲ್ಲಿ ಬೃಹತ್ತಾಗಿರುವ ಸರ್ಕಾರಿ ಪದವಿ ಕಾಲೇಜಿನ ಸಮಗ್ರ ಅಭಿವೃದ್ಧಿಗಾಗಿ ನಾನು ಸದಾ ಸಿದ್ಧನಿದ್ದು, ಇಲ್ಲಿಯವರೆಗೆ ಸುಮಾರು ₹8 ಕೋಟಿ ಅನುದಾನ ನೀಡಿದ್ದೇನೆ

ವೆಂಕಟರೆಡ್ಡಿ ಮುದ್ನಾಳ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.