
ಯಾದಗಿರಿ: ‘ನಮ್ಮ ದೇಶದಲ್ಲಿ ಉತ್ಪಾದನೆಯಲ್ಲಿ ತೊಡಗುವ ಯುವಸಮುದಾಯ 60 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿದೆ. ಯುವ ಜನರು ಸ್ವತಂತ್ರವಾಗಿ ಚಿಂತಿಸುವ ಮತ್ತು ಪ್ರಶ್ನಿಸುವ ಗುಣವನ್ನು ಅಳವಡಿಸಿಕೊಳ್ಳಬೇಕು’ ಎಂದು ಎಐಡಿವೈಒ ಅಖಿಲ ಭಾರತೀಯ ಉಪಾಧ್ಯಕ್ಷ ಜಿ. ಶಶಿಕುಮಾರ ಸಲಹೆ ನೀಡಿದರು.
ನಗರದ ಜಿಲ್ಲಾ ಕಸಾಪ ಸಭಾಂಗಣದಲ್ಲಿ ಭಾನುವಾರ ಎಐಡಿಎಸ್ಒ ಸಂಘಟನೆಯ 60ನೇ ವರ್ಷಾಚರಣೆ ಅಂಗವಾಗಿ ಆಯೋಜಿಸಿದ್ದ ಯುವಜನರ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಮಾತನಾಡಿದ ಅವರು, ‘ಸಮಾಜದ ಪ್ರಗತಿಗೆ ಪೂರಕವಾದ ಯುವಕರ ಶಕ್ತಿಯನ್ನು ಬಳಸುವಲ್ಲಿ ಸರ್ಕಾರಗಳು ವಿಫಲವಾಗಿವೆ’ ಎಂದರು.
‘ರಾಜಕೀಯ ಪಕ್ಷಗಳು ಯುವಜನರನ್ನು ಕುಡಿತ, ಜೂಜು, ಮಾದಕ ವ್ಯಸನ, ಅಶ್ಲೀಲ ಸಿನಿಮಾ ಸಾಹಿತ್ಯದಲ್ಲಿ ಮುಳುಗಿಸಿ ಜಾತಿ, ಕೋಮು ವಿಭಜನೆಗೆ ಬಳಸಿಕೊಳ್ಳುತ್ತಿವೆ. ಯುವಜನರು ಸ್ವಾರ್ಥ ರಾಜಕೀಯ ಪಕ್ಷಗಳ ದಾಳಗಳಾದೆ ಸಮಾಜದಲ್ಲಿನ ಅನ್ಯಾಯ, ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ವಿರುದ್ಧ ಧ್ವನಿ ಎತ್ತಬೇಕು’ ಎಂದು ಹೇಳಿದರು.
‘ಯೌವನಕ್ಕೆ ಕಾಲಿಡುವಾಗ ಬರುವ ಭಾವನೆಗಳು ನೈಸರ್ಗಿಕ, ಅದು ತಪ್ಪಲ್ಲ. ಆದರೆ, ಅವುಗಳನ್ನು ಪ್ರಬುದ್ಧತೆಯಿಂದ ನಿರ್ವಹಿಸಿ. ಪ್ರೇಮದ ಹೆಸರಿನಲ್ಲಿ ಕೇವಲ ಆಕರ್ಷಣೆಗೆ ಬಲಿಯಾಗದಿರಿ. ಪ್ರೀತಿಯು ಪರಸ್ಪರ ಗೌರವ, ಘನತೆಯಿಂದಿರಬೇಕು. ನಾವುಗಳು ಪ್ರಾಣಿಗಳಲ್ಲ, ಸರಿ-ತಪ್ಪುಗಳನ್ನು ವಿಮರ್ಷಿಸಿ ಹೆಜ್ಜೆಯಿಡಬೇಕು’ ಎಂದರು.
ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಶರಣಪ್ಪ ಉದ್ಬಾಳ್ ಮಾತನಾಡಿ, ‘ದೇಶದ ಸ್ವಾತಂತ್ರ್ಯಕ್ಕೆ ಹಲವು ಜನ ಕ್ರಾಂತಿಕಾರಿಗಳು ತ್ಯಾಗ, ಬಲಿದಾನ ಮಾಡಿದ್ದಾರೆ. ಬ್ರಿಟಿಷರ ವಿರುದ್ಧ ಮಾತ್ರವಲ್ಲದೆ ದೇಶದಲ್ಲಿನ ಅಸಮಾನತೆಯ ವಿರುದ್ಧವು ಸಹ ಹೋರಾಡಿದ್ದರು’ ಎಂದರು.
‘ಉದಮಸಿಂಗ್, ಕರ್ತಾರ್ ಸಿಂಗ್ ಸರಬಾ, ಖುದಿರಾಂ ಬೋಸ್, ಸೂರ್ಯ ಸೇನ್, ನೇತಾಜಿ, ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಅಶ್ಫಾಖುಲ್ಲಾ ಖಾನ್ ಸೇರಿದಂತೆ ಹಲವು ಮಹನೀಯರು ಮುಂತಾದವರು ಶೋಷಣಾ ರಹಿತ ಸಮಾಜವಾದಿ ಭಾರತದ ಕನಸು ಕಂಡಿದ್ದರು. ಆದರೆ, ಅದು ನನಸಾಗಲಿಲ್ಲ’ ಎಂದರು.
‘ಶಿವದಾಸ್ ಘೋಷ್ ಅವರ ಚಿಂತನೆಗಳ ಆಧಾರದಂತೆ ಎಐಡಿವೈಒ ಸ್ಥಾಪನೆಯಾಗಿದೆ. ಸ್ವಾತಂತ್ರ್ಯ ನಂತರ 77 ವರ್ಷಗಳಾದರೂ ಜನ ನಿರುದ್ಯೋಗ, ಬಡತನದಂತ ಸಮಸ್ಯೆಗಳಿಂದ ಬಳಲುತಿದ್ದಾರೆ. ಅಂತಹ ಸಮಸ್ಯೆಗಳ ವಿರುದ್ಧ ಹೋರಾಡುತ್ತಾ ಸಮಾನತೆಯ ಭಾರತ ಕಟ್ಟುವುದು ನಮ್ಮ ಸಂಘಟನೆಯ ಕಾರ್ಯ’ ಎಂದು ತಿಳಿಸಿದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಚನ್ನಬಸವ ಜಾನೇಕಲ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.