
ಯಾದಗಿರಿ: ‘ಜೀವನದುದ್ದಕ್ಕೂ ತಾಯಿ, ಮಾತೃ ಭೂಮಿ ಹಾಗೂ ಮಾತೃ ಭಾಷೆಗೆ ನಾವು ಸದಾ ಋಣಿಯಾಗಿ ಇರಬೇಕು. ಕನ್ನಡ ಭಾಷೆಯ ಬಗ್ಗೆ ಉದಾರತನದ ಜೊತೆಗೆ ಅಭಿಮಾನವೂ ಇರಿಸಿಕೊಳ್ಳಬೇಕು’ ಎಂದು ಸಾಹಿತಿ ಶಾಂತಪ್ಪ ಬೂದಿಹಾಳ ಹೇಳಿದರು.
ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಜಿಲ್ಲಾ ಭವನದಲ್ಲಿ ಬುಧವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸಗರನಾಡು ಸೇವಾ ಪ್ರತಿಷ್ಠಾನ ಹಾಗೂ ಕಸಾಪ ವತಿಯಿಂದ ಆಯೋಜಿಸಿದ್ದ ಕನ್ನಡ ಭಾಷೆ ಬಾಂಧವ್ಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘ದ್ರಾವಿಡ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ತುಳು ಭಾಷೆಗಳ ಪೈಕಿ ಕನ್ನಡಿಗರು ಹೊರತುಪಡಿಸಿ ಉಳಿದವರು ಕಟ್ಟಾ ಭಾಷಾ ಅಭಿಮಾನಿಗಳಿದ್ದಾರೆ. ನಮ್ಮಲ್ಲಿಯೂ ಅಂತಹುದ್ದೆ ಅಭಿಮಾನ ಬರಬೇಕಿದೆ’ ಎಂದರು.
‘ಗಡಿ ಭಾಗದ ರಾಜ್ಯಗಳಲ್ಲಿ ಕನ್ನಡ ಶಾಲೆಗಳನ್ನು ಕರ್ನಾಟಕ ಸರ್ಕಾರದ ನಡೆಸುತ್ತಿದ್ದು, ಮಕ್ಕಳು ಹಾಜರಾತಿಯೂ ಉತ್ತಮವಾಗಿದೆ. ಆದರೆ, ಕನ್ನಡ ಭಾಷೆಯ ಶಿಕ್ಷಕರ ಕೊರತೆ ಕಾಡುತ್ತಿದೆ. ಆಯಾ ರಾಜ್ಯಗಳು ತಮ್ಮ ಭಾಷೆಯ ಶಿಕ್ಷಕರನ್ನು ನೇಮಿಸಿ ತಮ್ಮದೆ ಭಾಷೆಯನ್ನು ಕಲಿಸುತ್ತಿದ್ದು, ಗಡಿ ಭಾಗದ ಮಕ್ಕಳು ಕನ್ನಡ ಭಾಷೆಯಿಂದ ದೂರಾಗುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕಿದ್ದರೂ ಸರ್ಕಾರದಿಂದ ಸರಿಯಾಗಿ ಸೌಕರ್ಯಗಳು ಸಿಗುತ್ತಿಲ್ಲ. ಅನುವಾದ ಚಟುವಟಿಕೆಗಳು ಮಂದವಾಗಿ ನಡೆಯುತ್ತಿವೆ. ಅಗತ್ಯ ಸೌಲಭ್ಯ ಒದಗಿಸಿ, ಅನುವಾದ ಕಾರ್ಯವನ್ನು ತೀವ್ರಗತಿಯಲ್ಲಿ ಚುರುಕುಗೊಳಿಸಬೇಕು’ ಎಂದರು.
ಸಾಹಿತಿ ಜಯದೇವಿ ಗಾಯಕವಾಡ ಮಾತನಾಡಿ, ‘ಸಂಸ್ಕೃತಿಯ ಪೂರಕ ಹಾಗೂ ಜೀವನಾಡಿಯಾಗಿರುವ ಭಾಷೆಯ ಬಗ್ಗೆ ಅಭಿಮಾನ ಇರಬೇಕು ಹೊರತು ಅತಿರೇಕ ಇರಬಾರದು. ಕನ್ನಡ ಭಾಷೆಯ ಮೇಲೆ ಉರ್ದು, ಇಂಗ್ಲಿಷ್, ತಮಿಳು, ತೆಲುಗು, ಪಂಜಾಬಿ, ಸಂಸ್ಕೃತ ಸಾಹಿತ್ಯದ ಪ್ರಭಾವ ಅಗಾಧವಾಗಿದೆ. ಹೀಗಾಗಿ, ಕನ್ನಡ ಭಾಷೆಯಲ್ಲಿ ಸೌಹಾರ್ದ ಮತ್ತು ಸಾಮರಸ್ಯ ಗುಣವೂ ಇದೆ’ ಎಂದರು.
‘ಕನ್ನಡ ಭಾಷೆಯ ಬಗ್ಗೆ ಹೆಮ್ಮೆ ಇರಿಸಿಕೊಂಡು, ಅನ್ಯ ಭಾಷೆಗಳನ್ನು ಕಲಿಯಬೇಕು. ಮುಖ್ಯವಾಗಿ ಅಂತರರಾಷ್ಟ್ರೀಯ ಭಾಷೆಯಾದ ಇಂಗ್ಲಿಷ್ ಕಲಿತರೆ ವ್ಯಕ್ತಿತ್ವ ವೃದ್ಧಿಸಿಕೊಳ್ಳಬಹುದು’ ಎಂದು ಹೇಳಿದು.
ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲ ಸುಭಾಶ್ಚಂದ್ರ ಕೌಲಗಿ ಮಾತನಾಡಿ, ‘ಕನ್ನಡ ಭಾಷೆ ಬಗೆಗಿನ ಹುಲಿತನದ ಪ್ರಜ್ಞೆ ಇರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಕುರಿತು ತಮ್ಮ ವಿಚಾರ ಮಂಡಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿ ಗಾಳೆಪ್ಪ ಪೂಜಾರಿ, ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ, ರಾಯಚೂರು ವಿವಿಯ ವಿದ್ಯಾವಿಷಯಕ ಪರಿಷತ್ ಸದಸ್ಯ ಶೇಖರ ರ್‍ಯಾಕಾ, ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಎಸ್. ಅಂಗಡಿ, ಸಾಹಿತಿ ಗುರುಪ್ರಸಾದ ವೈದ್ಯ ಸೇರಿ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.