ADVERTISEMENT

ಹಿಂದೂ–ಮುಸ್ಲಿಂ ನಡುವೆ ಕಲಹ ಸೃಷ್ಟಿ: ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 31 ಮೇ 2022, 3:49 IST
Last Updated 31 ಮೇ 2022, 3:49 IST
ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಮಾತನಾಡಿದರು
ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಮಾತನಾಡಿದರು   

ಶಹಾಪುರ: ಹಿಂದೂ ಮತ್ತು ಮುಸ್ಲಿಮರ ನಡುವೆ ಕಲಹ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯವರ ದೇವಸ್ಥಾನ ಪ್ರವೇಶಕ್ಕೆ 150 ಜನ ಪೊಲೀಸರು ಭದ್ರತೆ ನೀಡಿರುವುದು ನಾಚಿಗೇಡಿನ ಸಂಗತಿ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮತನಾಡಿದರು.

ದೇಶದ ಪ್ರಗತಿ ಹಾಗೂ ಸಮಾನತೆಯ ವಿರೋಧಿಗಳು, ಜಾತಿ ಮತ್ತು ಧರ್ಮಗಳ ನಡುವೆ ಜಗಳ ಹಚ್ಚುವವರನ್ನು ದೇಶದ್ರೋಹಿಗಳೆಂದು ಕರೆಯುವಂತೆ ಅಂಬೇಡ್ಕರ್ ಹೇಳಿದ್ದರು. ಈಗ ಸಮಾನತೆಗಾಗಿ ಹೋರಾಟ ಮಾಡುವವರನ್ನು ದೇಶ ದ್ರೋಹಿಗಳೆಂದು ಕರೆಯಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಅಂಬೇಡ್ಕರ್ ಅವರು ಕೇವಲ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲಿಲ್ಲ. ಜನರ ಸ್ವಾಭಿಮಾನಕ್ಕಾಗಿ ಹೋರಾಡಿದರು. ಅವರು ದೇಶ ಕಂಡ ಶ್ರೇಷ್ಠ ಆರ್ಥಿಕ, ಕಾನೂನು, ಇತಿಹಾಸ ಹಾಗೂ ರಾಜನೀತಿ ತಜ್ಞ. ಅವರ ಬಗ್ಗೆ ಓದಿದಾಗ ಮಾತ್ರ ಗೊತ್ತಾಗುತ್ತದೆ. ಈಗಿನ ಯುವಕರು ಫೇಸ್‌ಬುಕ್, ವಾಟ್ಸಪ್ ಬಿಟ್ಟು ಪುಸ್ತಕ ಓದುವುದನ್ನು ಕಲಿಯಲಿ ಎಂದು ಸಲಹೆ ನೀಡಿದರು.

ಕೋಮುವಾದಿಗಳು ಮತ್ತೆ ಜ್ಞಾನವ್ಯಾಪಿ, ಪೀರ್ ಭಾಷಾ ದರ್ಗಾಗಳಲ್ಲಿ ಶಿವಲಿಂಗ ಹುಡುಕುತ್ತಿದ್ದಾರೆ. ಇದು ಸಹೋದರತೆಗೆ ಧಕ್ಕೆ ತರುತ್ತದೆ. ಹಿಂದುಳಿದವರು, ದಲಿತರು ತಮ್ಮ ಮಕ್ಕಳನ್ನು ಬಿಜೆಪಿಯವರ ಧರ್ಮ ರಕ್ಷಣೆಗೆ ಬಳಸಿಕೊಂಡು ಕೇಸರಿ ಶಾಲು ಹಾಕುತ್ತಿದ್ದಾರೆ. ನೀವು ನೀಲಿ ಶಾಲು ಧರಿಸಿ ಕೇಸರಿ ಶಾಲಲ್ಲ. ನೀಲಿ ಶಾಲಿನಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಎಲ್ಲ ಶರಣರು ಇದ್ದಾರೆ. ಯಾವ ಶರಣರೂ ಜೈ ಶ್ರೀರಾಮ್ ಎನ್ನಲಿಲ್ಲ. ಅಜಾನ್, ಹಿಜಾಬ್, ಮುಸ್ಲಿಮರೊಂದಿಗೆ ವ್ಯಾಪಾರ ಬೇಡ ಎನ್ನುವ ಈಗಿನ ಸಿದ್ಧಾಂತಕ್ಕೆ ನೀವು ಒಳಗಾಗಬೇಡಿ ಎಂದು ಮನವಿ ಮಾಡಿದರು.

ಭಂತೆ ಆದಿತ್ಯ, ಭಂತೆ ಸಾರಿಪುತ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಚನ್ನಾರೆಡ್ಡಿ ಪಾಟೀಲ ತುನ್ನೂರು, ಡಾ.ಕಾಮರೆಡ್ಡಿ, ಶ್ರೀನಿವಾಸರೆಡ್ಡಿ ಕಂದಕೂರು, ಬಸುಗೌಡ ಬಿಳ್ಹಾರ, ನೀಲಕಂಠ ಬಡಿಗೇರ, ನಿಜಗುಣ ದೋರನಹಳ್ಳಿ, ಮಾನಪ್ಪ ಹೊಸೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.