ವಡಗೇರಾ: ‘ಜಿಲ್ಲಾ ಕೇಂದ್ರದಿಂದ ಕೂಗಳತೆ ಅಂತರದಲ್ಲಿ ಇರುವ ಬಬಲಾದ ಗ್ರಾಮದ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ರಸ್ತೆಯ ತುಂಬೆಲ್ಲಾ ಜೆಲ್ಲಿಕಲ್ಲುಗಳು ಹರಡಿರುವದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತನದಿಂದ ವಡಗೇರಾ ತಾಲ್ಲೂಕಿನ ಬಹುತೇಕ ಗ್ರಾಮೀಣ ಕೂಡು ರಸ್ತೆಗಳು ಹದಗೆಟ್ಟು ಹೋಗಿದ್ದರೂ ಇಲಾಖೆ ಅಧಿಕಾರಿಗಳು ಜಾಣ ಕುರುಡುತನ ತೊರುತ್ತಿರುವುದರಿಂದ ವಾಹನ ಚಾಲಕರು, ಗ್ರಾಮಸ್ಥರು, ರೈತರು ಹಾಗೂ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಎದುರಿಸುತಿದ್ದಾರೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಈ ರಸ್ತೆ ಹದಗೆಟ್ಟಿರುವದರಿಂದ ರೋಗಿಗಳಿಗೆ, ಗರ್ಭಿರ್ಣಿಯರಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ಸಮಸ್ಯೆಯಾಗುತ್ತಿದೆ. ರಸ್ತೆಯ ಮೇಲೆ ವಾಹನ ಚಲಾವಣೆಯಲ್ಲಿ ಅಜಾಗರೂಕತೆ ತೋರಿದರೆ ಕೈ ಕಾಲು ಮುರಿದುಕೊಳ್ಳುವುದು ಗ್ಯಾರಂಟಿ. ಎಷ್ಟೋ ವೇಳೆ ದ್ವಿಚಕ್ರ ವಾಹನ ಸವಾರರು ಈ ರಸ್ತೆ ಮೇಲೆ ಬಿದ್ದು ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಆದ ಕಾರಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ರಸ್ತೆಯ ಮೇಲೆ ಜೆಲ್ಲಿಕಲ್ಲು ಹಾಗೂ ಗುಂಡಿಗಳು ಬಿದ್ದಿವೆ. ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಆದಷ್ಟು ಬೇಗ ರಸ್ತೆ ದುರಸ್ತಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.– ಗೌತಮ ಕ್ರಾಂತಿ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಗುಲಸರಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.