ADVERTISEMENT

ಬದ್ದೇಪಲ್ಲಿ: ಅದ್ದೂರಿ ಆಂಜನೇಯ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 5:21 IST
Last Updated 27 ಅಕ್ಟೋಬರ್ 2025, 5:21 IST
ಸೈದಾಪುರ ಸಮೀಪದ ಬದ್ದೇಪಲ್ಲಿ ಗ್ರಾಮದ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದ ನಿಮಿತ್ತ ಭಾನುವಾರ ಬೆಳಿಗ್ಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡುವೆ ಅದ್ದೂರಿ ರಥೋತ್ಸವ ಜರಗಿತು
ಸೈದಾಪುರ ಸಮೀಪದ ಬದ್ದೇಪಲ್ಲಿ ಗ್ರಾಮದ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದ ನಿಮಿತ್ತ ಭಾನುವಾರ ಬೆಳಿಗ್ಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡುವೆ ಅದ್ದೂರಿ ರಥೋತ್ಸವ ಜರಗಿತು   

ಬದ್ದೇಪಲ್ಲಿ (ಸೈದಾಪುರ): ಸಮೀಪದ ಬದ್ದೇಪಲ್ಲಿ ಗ್ರಾಮದ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದ ನಿಮಿತ್ತ ಭಾನುವಾರ ಬೆಳಿಗ್ಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿ ರಥೋತ್ಸವ ಜರುಗಿತು.

ವಿವಿಧ ಹೂ ಮಾಲೆಗಳಿಂದ ಸಿಂಗರಿಸಲಾಪಟ್ಟಿದ್ದ ರಥಕ್ಕೆ ಬೆಳಗಿನ ಜಾವಾ ಕುಂಭವನ್ನು ಹೊತ್ತು ತಂದ ಭಕ್ತರು ರಥದ ಸುತ್ತಲೂ ಪ್ರದಕ್ಷಣೆ ಹಾಕಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದಿಂದ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿಟ್ಟು ಅದ್ದೂರಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥದ ಹಗ್ಗವನ್ನು ಹಿಡಿದ ಯುವ ಪಡೆ ಆಂಜನೇಯ ಮಹಾರಾಜ್ ಕೀ ಜೈ ಎಂದು ಘೋಷಣೆ ಕೂಗುತ್ತ ಹೆಜ್ಜೆ ಹಾಕಿದರು. ಪಾದಗಟ್ಟೆಯನ್ನು ತಲುಪಿದ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮತ್ತೆ ವಾಪಸ್ ಮೂಲಸ್ಥಾನಕ್ಕೆ ತಂದು ನಿಲ್ಲಿಸಲಾಯಿತು. ರಥೋತ್ಸವದಲ್ಲಿ ಬಾಜಾ ಭಜಂತ್ರಿಗಳ ಜತೆಗೆ ಪಟಾಕಿಗಳ ಸದ್ದು ಮುಗಿಲು ಮುಟ್ಟಿತು.

ADVERTISEMENT

ಜಾತ್ರೆಗೂ ಮುನ್ನ ಶುಕ್ರವಾರ ರಾತ್ರಿ ಗ್ರಾಮದ ಹೂಗಾರ ಅವರ ಮನೆಯಿಂದ ಆಂಜನೇಯ ದೇವಸ್ಥಾನದವರೆಗೆ ಪಲ್ಲಕ್ಕಿ ಮೆರವಣಿಗೆ ಅದ್ದೂರಿಯಾಗಿ ಸಾಗಿತು. ಜಾತ್ರಾ ದಿನವಾದ ಶನಿವಾರ ಅಗ್ನಿಕುಂಡಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ದೈವ ಭಕ್ತರು ಪಾದಯಾತ್ರೆಯ ಮೂಲಕ ಪಕ್ಕದ ತೆಲಂಗಾಣ ಬೈರನಹಳ್ಳಿ ಗ್ರಾಮಕ್ಕೆ ತೆರಳಿ ಅಲ್ಲಿ ಬುಸಣ್ಣ ತಾತ ಅವರ ಕರ್ತೃ ಗದ್ದೆಗೆಗೆ ವಿಶೇಷ ಪೂಜೆ ಸಲ್ಲಿಸಿ ಹಿಂತಿರುಗಿದರು. ತರುವಾಯ ದೇವಸ್ಥಾನದ ಮುಂಭಾಗದಲ್ಲಿದ್ದ ಅಗ್ನಿಕುಂಡದಲ್ಲಿ ಪ್ರವೇಶ ಮಾಡುವ ಮೂಲಕ ಭಕ್ತಿ ಸಮರ್ಪಿಸಿದರು. ಇದಕ್ಕೂ ಮುನ್ನ ಗ್ರಾಮದ ಪ್ರತಿ ಮನೆಯಿಂದ ಜ್ಯೋತಿಯನ್ನು ತಂದು ದೇವರಿಗೆ ಅರ್ಪಣೆ ಮಾಡಲಾಯಿತು. ರಾತ್ರಿ ಆಂಜನೇಯ ಸ್ವಾಮಿಯ ಉಚ್ಚಯ ಎಳೆಯಲಾಯಿತು.

ಪ್ರತಿ ವರ್ಷದ ದೀಪಾವಳಿ ಹಬ್ಬದ ತರುವಾಯ ಬರುವ ಮೊದಲ ಶನಿವಾರದಂದು ಬದ್ದೇಪಲ್ಲಿ ಆಂಜನೇಯ ಜಾತ್ರೆ ಜರುಗುವುದು ವಿಶೇಷವಾಗಿದೆ.

ಇಡೀ ದಿನ ರಾತ್ರಿ ಭಜನೆ ಕಾರ್ಯಕ್ರಮ ಜರುಗಿತು. ಇದರ ಜೊತೆಗೆ ಗ್ರಾಮೀಣ ಸೊಗಡಿನ ಕೈಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಸುತ್ತಲಿನ ಹತ್ತಾರು ಗ್ರಾಮಗಳಿಂದ ಆಗಮಿಸಿದ್ಧ ಜಟ್ಟಿಗಳು ಕೈಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದರು. ವಿಜೇತರಿಗೆ ತೆಂಗಿನ ಕಾಯಿ ಹಾಗೂ ಬೆಳ್ಳಿ ಕಡಗ ನೀಡುವುದು ವಿಶೇಷವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.