ADVERTISEMENT

ಭಜ್ಜಿ, ಪಕೋಡಾ, ಕಟ್‌ಲೆಟ್‌, ಮಿರ್ಚಿ... ಆಹಾ!

ಅಶೋಕ ಸಾಲವಾಡಗಿ
Published 12 ಅಕ್ಟೋಬರ್ 2018, 10:33 IST
Last Updated 12 ಅಕ್ಟೋಬರ್ 2018, 10:33 IST
ಸುರಪುರದ ಗಣೇಶ ಹೋಟೆಲ್‍ನಲ್ಲಿ ಗ್ರಾಹಕರ ಬಾಯಿ ರುಚಿಸಲು ಸಿದ್ಧವಾಗಿರುವ ತರಹೇವಾರಿ ಚಾಟ್ಸ್
ಸುರಪುರದ ಗಣೇಶ ಹೋಟೆಲ್‍ನಲ್ಲಿ ಗ್ರಾಹಕರ ಬಾಯಿ ರುಚಿಸಲು ಸಿದ್ಧವಾಗಿರುವ ತರಹೇವಾರಿ ಚಾಟ್ಸ್   

ಸುರಪುರ: ’ಗರಮಾಗರಂ ಭಜ್ಜಿ, ಕಚೋರಿ, ಸಮೋಸಾ, ಮೈಸೂರು ಭಜ್ಜಿ...’ ಅಬ್ಬಾ ಆ ಹೆಸರುಗಳನ್ನು ಕೇಳುತ್ತಿದ್ದಂತೆ ನಾಲಿಗೆ ಚಪ್ಪರಿಸುವ ಆಸೆಯಾಗುತ್ತದೆ. ಇವುಗಳನ್ನು ಸವಿಯಬೇಕೆಂದರೆ ನಗರದ ಗಾಂಧಿ ವೃತ್ತದ ಬಳಿ ಇರುವ ಗಣೇಶ ಹೋಟೆಲ್‌ಗೆ ಬರಬೇಕು ನೀವು.

ಸಂಜೆಯಾಗುತ್ತಿದ್ದಂತೆ ಈ ಅಂಗಡಿ ತುಂಬ ಗ್ರಾಹಕರು ಸಾಲುಗಟ್ಟಿ ನಿಲ್ಲುತ್ತಾರೆ. ತಿಂದು, ಮನೆಗೂ ಕೊಂಡೊಯ್ಯುತ್ತಾರೆ. ಮೂರು ವರ್ಷಗಳಿಂದ ಈ ಹೋಟೆಲ್‌ನ ಕುರುಕಲು ತಿನಿಸುಗಳಿಗೆ ಇದೇ ರೀತಿ ಬೇಡಿಕೆ ಇದೆ. ಒಂದೇ ಸೂರಿನಡಿವೈವಿಧ್ಯಮಯ ಚಾಟ್ಸ್ ಸಿಗುವುದೇ ಇಲ್ಲಿನ ವಿಶೇಷ.

ಗುಣಮಟ್ಟ, ದರ, ರುಚಿಯನ್ನು ಕಾಪಾಡಿಕೊಳ್ಳಲಾಗಿದೆ. ಮಧ್ಯಾಹ್ನ 3 ಗಂಟೆಗೆ ತೆರೆಯುವ ಈ ಹೋಟೆಲ್‍ನಲ್ಲಿ ಪ್ರತಿ ಎರಡು ಗಂಟೆಗೊಮ್ಮೆ ಮೆನು ಬದಲಿಯಾಗುತ್ತದೆ.

ADVERTISEMENT

ಮೊದಲ ಎರಡು ಗಂಟೆ ಕಚೋರಿ, ಸಮೋಸಾ, ಕಟ್‍ಲೆಟ್ ಸಿಗುತ್ತದೆ. ನಂತರ ಎರಡು ಗಂಟೆ ಪಕೋಡಾ, ವಡಾಪಾವ್, ಆಲೂಬೊಂಡಾ. ಕೊನೆಯ ಎರಡು ಗಂಟೆಯವರೆಗೆ ಮೆಣಸಿನಕಾಯಿ ಭಜ್ಜಿ, ಈರುಳ್ಳಿ ಭಜ್ಜಿ, ಮೈಸೂರು ಭಜ್ಜಿ ಆಹಾ...

ತರಹೇವಾರಿ ಚಾಟ್ ಚಪ್ಪರಿಸಲು ಗ್ರಾಹಕರು ಪ್ರತಿ ಎರಡು ಗಂಟೆಗೊಮ್ಮೆ ಹೊಟೇಲ್‍ಗೆ ಭೇಟಿ ಕೊಡುತ್ತಾರೆ. ಚಾಟ್ಸ್ ಜೊತೆಗೆ ನೀಡುವ ರುಚಿಯಾದ ಸಾಸ್, ಕೆಂಪು, ಹಸಿರು ಚಟ್ನಿಯೂ ಗ್ರಾಹಕರ ಮನಗೆದ್ದಿದೆ.

ಮಹಿಳೆಯರೂ ಇಲ್ಲಿನ ಚಾಟ್ಸ್ ಇಷ್ಟಪಡುತ್ತಾರೆ. ಕಾರಣ ಹೋಟೆಲ್‌ನಲ್ಲಿ ಕುಳಿತು ತಿನ್ನುವ ಗ್ರಾಹಕರಿಗಿಂತ ಪಾರ್ಸಲ್ ತೆಗೆದುಕೊಂಡು ಹೋಗುವವರ ಸಂಖ್ಯೆಯೇ ಹೆಚ್ಚಾಗಿದೆ.

‘ಬೇರೆ ಹೋಟೆಲ್‌ಗೆ ಹೋಲಿಸಿದರೆ ಇಲ್ಲಿ ಚಾಟ್ಸ್ ದರ ಕಡಿಮೆ. ₹ 50ರಲ್ಲಿ ವಿವಿಧ ಚಾಟ್ಸ್ ತಿಂದು ಹೊಟ್ಟೆ ತುಂಬಿಸಿಕೊಳ್ಳಬಹುದು’ ಎನ್ನುತ್ತಾರೆ ಗ್ರಾಹಕ ನಿಂಗಾರೆಡ್ಡಿ ವಂದಾಲ.

‘ಉಪಜೀವನಕ್ಕಾಗಿ ನಾನು ಯಾವೂದಾದರೂ ವ್ಯವಹಾರ ನಡೆಸಬಹುದಾಗಿತ್ತು. ಹಣದ ಅಡಚಣೆ ಇದ್ದ ಕಾರಣ ಕಡಿಮೆ ಬಂಡವಾಳದಲ್ಲಿ ಚಾಟ್ಸ್ ಭಂಡಾರ ಆರಂಭಿಸಿದೆ. ಗ್ರಾಹಕರ ಉತ್ತಮ ಪ್ರತಿಕ್ರಿಯೆ ದೊರಕಿದ್ದರಿಂದ ಇದೇ ವ್ಯವಹಾರದಲ್ಲಿ ಮುಂದುವರಿಯುವ ಇಚ್ಛೆ ಇದೆ’ ಎನ್ನುವುದು ಮಾಲೀಕ ಸಂದೀಪ ಅವರ ಮನದಾಳ.

‘ಗ್ರಾಹಕರು ನಾವು ತಯಾರಿಸುವ ಚಾಟ್ಸ್ ತಿಂದು ಬಾಯಿ ಚಪ್ಪರಿಸುವುದು ನನಗೆ ಖುಷಿ ತಂದಿದೆ. ನನ್ನ ಹೆಸರು ಹೇಳಿ ನಾನೇ ಕರಿದ ಭಜ್ಜಿ ಬೇಕೆನ್ನುವ ಗ್ರಾಹಕರ ಬೇಡಿಕೆಯಿಂದ ಪುಳಿಕತನಾಗಿದ್ದೇನೆ’ ಎನ್ನುವ ಹರ್ಷ ಕಾರ್ಮಿಕ ನಂದು ಅವರದ್ದು.

*ಚಾಟ್ಸ್ ದರ

ಚೋರಿ, ಸಮೋಸ, ಕಟ್‍ಲೆಟ್‌,ವಡಾಪಾವ್, ಆಲೂ ಬೊಂಡಾ,ಮೆಣಸಿನಕಾಯಿ ಭಜ್ಜಿ, ಮೈಸೂರು ಭಜ್ಜಿ ಎಲ್ಲಕ್ಕೂ ₹ 10. 100 ಗ್ರಾಂ ಪಕೋಡಾ,ಈರುಳ್ಳಿ ಭಜ್ಜಿಗೆ ₹ 20.

* ಹೊಟ್ಟೆ ಹೊರೆಯಲು ಯಾವುದಾದರೂ ವ್ಯಾಪಾರ ಮಾಡಲು ರಾಜಸ್ತಾನದಿಂದ ವಲಸೆ ಬಂದಿದ್ದೇನೆ. ಚಾಟ್ಸ್ ನನ್ನ ಕೈ ಹಿಡಿದಿದೆ

-ಸಂದೀಪ ಪಿರಾಜಿ,ಮಾಲೀಕ

ಅಂಕಿ ಅಂಶ

* ₹ 5,000‌ ಒಂದು ದಿನದ ಸರಾಸರಿ ಸಂಪಾದನೆ

* ₹ 4,000 ದೈನಂದಿನ ವ್ಯಾಪಾರದ ವೆಚ್ಚ

* ₹ 1,000 ಪ್ರದಿದಿನ ಜೇಬಿಗೆ ಸೇರುವ ಲಾಭ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.