ADVERTISEMENT

ಯಾದಗಿರಿ: ‘ಭೀಮೆ’ ಪ್ರವಾಹದ ರುದ್ರನರ್ತನ

ನದಿ ಪಾತ್ರದ ಬೆಳೆಗಳನ್ನು ಆಪೋಶನ ತೆಗೆದುಕೊಂಡ ಪ್ರವಾಹ: ‘ಜಲಾಘಾತ’ಕ್ಕೆ ತತ್ತರಿಸಿದ ಜನ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 6:32 IST
Last Updated 28 ಸೆಪ್ಟೆಂಬರ್ 2025, 6:32 IST
ಭೀಮಾ ನದಿ ಪ್ರವಾಹದ ನೀರು ಶನಿವಾರ ಯಾದಗಿರಿಯ ಹುರಸಗುಂಡಗಿ ಗ್ರಾಮಕ್ಕೆ ನುಗ್ಗಿರುವುದು
ಭೀಮಾ ನದಿ ಪ್ರವಾಹದ ನೀರು ಶನಿವಾರ ಯಾದಗಿರಿಯ ಹುರಸಗುಂಡಗಿ ಗ್ರಾಮಕ್ಕೆ ನುಗ್ಗಿರುವುದು   

ಯಾದಗಿರಿ: ಮಹಾರಾಷ್ಟ್ರದಲ್ಲಿನ ಮಳೆಯಿಂದ ಅಲ್ಲಿನ ಭೀಮಾ ಕಣಿವೆಯ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಇದರಿಂದ ಭೀಮೆಯ ಪ್ರವಾಹದ ರುದ್ರನರ್ತನವು ನದಿ ಪಾತ್ರದ ನಿವಾಸಿಗಳ ಬದುಕನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಹುಚ್ಚೆದ ಪ್ರವಾಹ ಮತ್ತು ಎಡೆಬಿಡದೆ ಸುರಿದ ಮಳೆಯಿಂದ ‘ಜಲಾಘಾತ’ವಾಗಿ ಜನರು ತತ್ತರಿಸಿದ್ದಾರೆ.

ಭೀಮೆಯ ಪ್ರವಾಹದ ಸೆಳೆತಕ್ಕೆ ರಸ್ತೆಗಳು, ಸೇತುವೆಗಳು, ಜಮೀನುಗಳಲ್ಲಿ ಹುಲುಸಾಗಿ ಬೆಳೆದು ನಿಂತಿದ್ದ ಬೆಳೆಗಳು ಕೊಚ್ಚಿ ಹೋಗಿವೆ. ಮನೆಗಳು, ಕಟ್ಟಡಗಳು ಕುಸಿದು ಬಿದ್ದಿವೆ. ಹೊಲ–ಗದ್ದೆಗಳಲ್ಲಿ ನೀರು ಹರಿಯುತ್ತಿರುವುದರಿಂದ ಅಪಾರ ಪ್ರಮಾಣ ಬೆಳೆಗಳಿಗೆ ನಷ್ಟವಾಗಿದೆ. ಪ್ರವಾಹದ ನೀರು ಹಳ್ಳಗಳಿಗೆ ವ್ಯಾಪಿಸಿಕೊಂಡಿದ್ದರಿಂದ ಗ್ರಾಮಗಳ ನಡುವಿನ ಸಂಪರ್ಕವೂ ಕಡಿತವಾಗಿದೆ. 

ನಾಯ್ಕಲ್ ಗ್ರಾಮಕ್ಕೂ ಭೀಮೆ ಕಾಲಿಟ್ಟಿದ್ದು, ಶಹಾಪುರ ರಸ್ತೆಯ ಬದಿಯ ಸಾಯಿ ಮಂದಿರ ಮುಳುಗಡೆಯಾಗಿದೆ. ನೀರಿನ ಪ್ರಮಾಣ ಇನ್ನಷ್ಟು ಹೆಚ್ಚಾದರೆ ರಸ್ತೆಯ ಮೇಲೂ ಆವರಿಸಿಕೊಳ್ಳಲಿದೆ. ಇನ್ನಷ್ಟು ಮನೆಗಳಿಗೂ ನೀರು ನುಗ್ಗಲಿದೆ. ಗ್ರಾಮಸ್ಥರರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.

ADVERTISEMENT

ನಗರದ ಸಮೀಪದ ನದಿ ದಡದಲ್ಲಿರುವ ಕಂಗಳೇಶ್ವರ ದೇವಸ್ಥಾನ, ಸ್ಮಶಾನ, ಜಾಕ್‌ವಾಲ್‌, ಮೀನು ಮಾರುಕಟ್ಟೆ ಪ್ರದೇಶವೂ ಸಂಪೂರ್ಣವಾಗಿ ಮುಳುಗಡೆಯಾಗಿದೆ. ರೈಲ್ವೆ ಹಳಿಯ ವರೆಗೂ ಪ್ರವಾಹದ ನೀರು ಆವರಿಸಿಕೊಂಡಿದ್ದು, ದೊಡ್ಡ ಹಳ್ಳದ ಸುತ್ತಲಿನ ಹಸಿರು ಗದ್ದೆಗಳು ಜಲಮಯವಾಗಿವೆ.

ಪ್ರವಾಹದ ಬಿಸಿ ಅಬ್ಬೆತುಮಕೂರು, ತಳಕ, ಶಹಾಪುರ, ಅಣಬಿ, ಹುರಸಗುಂಡಗಿ, ಹಬ್ಬಳ್ಳಿ, ತಂಗಡಗಿ, ಮರಮಕಲ್, ಬಲಕಲ್, ನಾಲವಡಗಿ, ಕುಮನೂರು, ಶಿವನೂರು, ನಾಯ್ಕಲ್‌ ಸೇರಿದಂತೆ ಹಲವು ಗ್ರಾಮಗಳಿಗೆ ತಟ್ಟಿದೆ. ಪ್ರವಾಹಕ್ಕೆ ಒಳಗಾಗುವ ಗ್ರಾಮಗಳಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಿ, ಪ್ರವಾಹದ ಪರಿಸ್ಥಿತಿ ಮೇಲೆ ನಿಗಾ ಇರಿಸಲಾಗಿದೆ.

ಮುಂದಿನ 48 ಗಂಟೆ ಭೀಮಾ ನದಿಯಲ್ಲಿ ಒಳ ಹರಿವಿನಿಂದ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹದ ಅಪಾಯ ಕಂಡು ಬರುವ ಸಾಧ್ಯತೆ ಇರುತ್ತದೆ. ಸನ್ನತಿ ಹಾಗೂ ಯಾದಗಿರಿ ಬ್ರಿಡ್ಜ್ ಕಂ ಬ್ಯಾರೇಜ್ ನೀರಿನ ಮಟ್ಟವು ಒಳ ಹಾಗೂ ಹೊರಹರಿವು 4.20 ಲಕ್ಷ ಕ್ಯೂಸೆಕ್‌ ಇದೆ. ಹುರಸಗುಂಡಗಿ ಗ್ರಾಮದ 5 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೀಮಾ ನದಿ ಪ್ರವಾಹದ ನೀರು ಶನಿವಾರ ಯಾದಗಿರಿಯ ಹುರಸಗುಂಡಗಿ ಗ್ರಾಮಕ್ಕೆ ನುಗ್ಗಿದ್ದು ನಿವಾಸಿಯೊಬ್ಬರು ಮನೆಯ ಸಾಮಗ್ರಿಗಳನ್ನು ಹೊರ ತಂದರು   
ಯಾದಗಿರಿ ಸಮೀಪದ ಹಳೇ ಸೇತುವೆ ಬಳಿ ಮೈದುಂಬಿ ಹರಿಯುತ್ತಿರುವ ಭೀಮಾ ನದಿ
ಯಾದಗಿರಿ ಸಮೀಪದಲ್ಲಿ ಭೀಮಾ ನದಿಯ ಪ್ರವಾಹದ ನೀರು ಜಮೀನುಗಳಿಗೆ ನುಗ್ಗಿರುವುದು
ಯಾದಗಿರಿಯ ನಾಯ್ಕಲ್ ಸಮೀಪದ ಸಾಯಿಬಾಬ ದೇವಸ್ಥಾನ ಭೀಮಾ ನದಿ ಪ್ರವಾಹದಲ್ಲಿ ಮುಳುಗಿರುವುದು

ಹುರಸಗುಂಡಗಿಗೆ ನುಗ್ಗಿದ ನೀರು

ನದಿ ದಡದ ಹುರಸಗುಂಡಗಿ ಗ್ರಾಮಕ್ಕೆ ನುಗ್ಗಿದೆ. 50ಕ್ಕು ಹೆಚ್ಚು ಮನೆಗಳಿಗೆ ಭೀಮೆ ಕಾಲಿಟ್ಟಿದ್ದು ನಿವಾಸಿಗಳು ರಾತ್ರೋರಾತ್ರಿ ಸಾಮಾನು ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳಿದರು. ಅರ್ಧ ಗ್ರಾಮಕ್ಕೆ ನೀರು ಆವರಿಸಿದ್ದು ಪುನರ್ವಸತಿಗೆ ಸ್ಥಳಾಂತರ ಆಗದವರು ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದಾರೆ. ದವಸ ಧಾನ್ಯಗಳನ್ನು ಸಂಬಂಧಿಕರ ಮನೆಯಲ್ಲಿ ಇರಿಸಿ ಪ್ರವಾಹ ತಗ್ಗುವ ನಿರೀಕ್ಷೆಯಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ‘6 ಕೋಣೆಗಳಲ್ಲಿ ಮೂರು ಕುಟುಂಬದವರು ವಾಸಿಸುತ್ತಿದ್ದ ಕೂಡು ಕುಟುಂಬಕ್ಕೆ ಕೇವಲ ₹ 1 ಲಕ್ಷ ಪರಿಹಾರ ಕೊಟ್ಟಿದ್ದಾರೆ. 30x30 ಅಳತೆಯ ಜಾಗದಲ್ಲಿ ಮನೆ ಕಟ್ಟಲು ಪರಿಹಾರದ ಹಣ ಬುನಾದಿ ತೋಡಲು ಸಾಲುವುದಿಲ್ಲ. ಇನ್ನು ಕುಟುಂಬಸ್ಥು ನಾಲ್ಕು ದನಗಳನ್ನು ಕಟ್ಟಿಕೊಂಡು ಹೇಗೆ ಬದುಕು ಕಟ್ಟಿಕೊಳ್ಳಬೇಕು’ ಎನ್ನುತ್ತಾರೆ ಗ್ರಾಮಸ್ಥರ ಶಿವಯೋಗಿ. ‘ಬುನಾದಿಗಾಗಿ ಎದೆಮಟ್ಟ ಅಗೆದರೂ ಗಟ್ಟಿಯಾದ ಮಣ್ಣು ಬರುವುದಿಲ್ಲ. 20 ವರ್ಷಗಳ ಹಿಂದೆ ಪರಿಹಾರ ಕೊಟ್ಟ ಅಧಿಕಾರಿಗಳು ಅದರ‌ಲ್ಲಿಯೇ ಮನೆ ಕಟ್ಟಿಸಿಕೊಳ್ಳಿ ಎನ್ನುತ್ತಾರೆ. ಆ ದುಡ್ಡಲ್ಲಿ ಬುನಾದಿ ಭರ್ತಿಗೆ ಕಲ್ಲುಗಳು ಖರೀದಿಸಲು ಆಗುವುದಿಲ್ಲ. ಪ್ರವಾಹದ ಆತಂಕದ ನಡುವೆ ಜೀವನ ಸವೆಸುತ್ತಿದ್ದೇವೆ. ಹೆಚ್ಚಿನ ಪರಿಹಾರ ಧನ ಕೊಟ್ಟರೆ ಪುನರ್ವಸತಿಯತ್ತ ಹೋಗುತ್ತೇವೆ’ ಎನ್ನುತ್ತಾರೆ ಬಸವರಾಜ ಚನ್ನಪ್ಪ. 

‘ನೀರಿನ ಪ್ರಮಾಣದಲ್ಲಿ ಏರಿಕೆ ಸಾಧ್ಯತೆ’

‘ಮಹಾರಾಷ್ಟ್ರದಲ್ಲಿ ಮಳೆ ಸುರಿಯುವುದು ಕಡೆಮೆಯಾಗಿದೆ. ಆದರೆ ನೀರಿನ ಹರಿವಿನ ಪ್ರಮಾಣದಲ್ಲಿ ಇಳಿಕೆಯಾಗಿಲ್ಲ. ಸೊನ್ನ ಸನ್ನತಿ ಬ್ರೀಜ್ ಕಂ ಬ್ಯಾರೇಜ್‌ಗಳಿಂದ 4.60 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ತಿಳಿಸಿದರು. ‘ನೀರಿನ ಪ್ರಮಾಣ ಹೆಚ್ಚಳವಾಗಿ ಹೊರ ಹರಿವಿನ ಪ‍್ರಮಾಣ 5 ಲಕ್ಷ ಕ್ಯೂಸೆಕ್ ದಾಟುವ ಸಾಧ್ಯತೆ ಇದೆ. ಜಿಲ್ಲಾಡಳಿತವು ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಪ್ರವಾಹಕ್ಕೆ ಗುರಿಯಾಗುವ ಗ್ರಾಮಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದ್ಯೊಯುವ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಕಾಳಜಿ ಕೇಂದ್ರಗಳನ್ನು ತೆರೆದಿದೆ’ ಎಂದರು. 

‘ಆಯ್ದುಕೊಂಡು ತಿನ್ನುವ ಕೋಳಿ ಕಾಲು ಮುರಿದಂತಾಗಿದೆ

‘ಒಂದು ಕಡೆ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಮತ್ತೊಂದು ಉಕ್ಕಿ ಹರಿಯುತ್ತಿರುವ ಭೀಮಾ ನದಿ ಪ್ರವಾಹ. ಇವೆರಡರ ನಡುವೆ ಬೆಳೆಗಳು ಸಿಲುಕಿ ರೈತನ ಪಾಡು ಆಯ್ದುಕೊಂಡು ತಿನ್ನುವ ಕೋಳಿಯ ಕಾಲು ಮುರಿದಂತೆ ಆಗಿದೆ. ಇಂತಹ ಪಾಡು ಯಾರಿಗೂ ಬರಬಾರದು’ ಎಂದು ರೈತ ಮಹಿಳೆ ಲಕ್ಷ್ಮಿಬಾಯಿ ಅಲವತ್ತುಕೊಂಡರು. ‘ಮಳೆ ನಿಂತಿದೆ ಎಂದು ಮಧ್ಯಾಹ್ನ ಹತ್ತಿ ಬಿತ್ತಿದ್ದ ಹೊಲದ ಕಡೆಗೆ ಹೋಗಿದ್ದೆ. ಹೊಲದ ತುಂಬ ಹೊಳೆ ನೀರು ನಿಂತಿದ್ದು ಕಂಡು ಕಣ್ಣಲ್ಲಿ ನೀರು ಬಂದವು. ಇನ್ನೊಂದು ತಿಂಗಳಾಗಿದ್ದರೆ ವರ್ಷದ ಅನ್ನ ಸಿಗುತ್ತಿತ್ತು. ಮಳೆ ಪ್ರವಾಹ ಅದಕ್ಕೂ ಮಣ್ಣು ಹಾಕಿತು’ ಎಂದರು. ಇದಕ್ಕೆ ಧ್ವನಿ ಗೂಡಿಸಿದ ರೈತ ಖಾಜಾ ಹುಸೇನ್ ‘ಗೊಬ್ಬರ ಬಿತ್ತನೆ ಬೀಜಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಪೊಲೀಸರ ಏಟು ತಿಂದಿದ್ದೇವೆ. ಗೊಬ್ಬರಕ್ಕಾಗಿ ಕ್ಯೂನಲ್ಲಿ ನಿಂತಿದ್ದ ಕೆಲವರು ಮೂರ್ಚೆ ಹೋಗಿ ಬಿದ್ದಿದ್ದರು. ಅಷ್ಟೊಂದು ಕಷ್ಟಪಟ್ಟು ತಂದಿದ್ದ ಗೊಬ್ಬರ ಬೀಜ ನೀರಲ್ಲಿ ಹೋಮ ಮಾಡಿದಂತೆ ಆಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.