ADVERTISEMENT

ಅಫಜಲಪುರ | ಬತ್ತಿ ಹೋದ ಭೀಮಾನದಿ: ನೀರಿಗಾಗಿ ಪರದಾಟ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 15:12 IST
Last Updated 24 ಮಾರ್ಚ್ 2024, 15:12 IST
ಅಫಜಲಪುರ ತಾಲ್ಲೂಕಿನ ಗುಡ್ಡೇವಾಡಿ ಹತ್ತಿರ ಭೀಮಾ ನದಿಯಲ್ಲಿ ಭಾನುವಾರ ನೀರಿಗಾಗಿ ಮೇಕೆಗಳು ಅಡ್ಡಾಡುತ್ತಿರುವುದು
ಅಫಜಲಪುರ ತಾಲ್ಲೂಕಿನ ಗುಡ್ಡೇವಾಡಿ ಹತ್ತಿರ ಭೀಮಾ ನದಿಯಲ್ಲಿ ಭಾನುವಾರ ನೀರಿಗಾಗಿ ಮೇಕೆಗಳು ಅಡ್ಡಾಡುತ್ತಿರುವುದು    

ಅಫಜಲಪುರ: ತಾಲ್ಲೂಕಿನಲ್ಲಿ ಸುಮಾರು 80 ಕಿ.ಮೀ. ಹರಿಯುತ್ತಿರುವ ಭೀಮಾನದಿ ಸಂಪೂರ್ಣವಾಗಿ ಬತ್ತಿ ಹೋಗಿದ್ದರಿಂದ ನಿತ್ಯ ಜನ, ಜಾನುವಾರುಗಳು ನೀರಿಗಾಗಿ ಕಷ್ಟಪಡುತ್ತಿದ್ದು ನೀರಿಗಾಗಿ ದಿನಾಲು ನದಿಗಳಿಗೆ, ತೋಟಗಳಿಗೆ ಅಲೆದಾಡುವಂತಾಗಿದೆ.

ಕುರಿಗಾಹಿಗಳು ನಿತ್ಯ ಹರಸಾಸ ಪಡುವಂತಾಗಿದೆ. ಭೀಮಾ ನದಿಯಲ್ಲಿ ಎಲ್ಲಿ ಹುಡುಕಿದರೂ ನೀರು ಸಿಗುತ್ತಿಲ್ಲ. ತೋಟಗಳಲ್ಲಿ ಕೊರೆದಿರುವ ಕೊಳವೆಬಾವಿ, ತೆರೆದ ಬಾವಿಗಳು ಬತ್ತಿ ಹೋಗಿದ್ದು ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಂ.ಕೋಟೆ, ‘ತಾಲ್ಲೂಕಿನಲ್ಲಿ ಒಟ್ಟು1 ಲಕ್ಷ ಜಾನುವಾರುಗಳಿವೆ. ಜೂನ್ ತಿಂಗಳಲ್ಲಿ ಮಳೆ ಬಂದರೆ ಸ್ವಲ್ಪ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗುತ್ತದೆ. ಆದರೆ ಜೂನ್ ತಿಂಗಳಲ್ಲಿ ಮಳೆ ವಿಳಂಬವಾದರೆ ಮತ್ತಷ್ಟು ಸಮಸ್ಯೆ ಗಂಭೀರವಾಗುತ್ತದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಬಾಬುರಾವ್ ಜ್ಯೋತಿ ಕುಡಿಯುವ ನೀರಿನ ಬಗ್ಗೆ ಮಾಹಿತಿ ನೀಡಿ, ‘ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ವತಿಯಿಂದ ಈಗಾಗಲೇ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುವ ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಯಲಾಗಿದೆ. ಆದರೆ ಅವುಗಳಿಗೆ ನೀರು ಬರುತ್ತಿಲ್ಲ. ಅಲ್ಪಸಲ್ಪ ಬಂದಿದ್ದರೂ ಸಹ ಅವು ಬಹಳ ದಿನ ಉಳಿಯುತ್ತಿಲ್ಲ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ. ಕೆಲವು ಕಡೆ ಖಾಸಗಿ ಕೊಳೆಬಾವಿಗಳನ್ನು ಖರೀದಿ ಮಾಡಲಾಗುತ್ತಿದೆ. ಇನ್ನೂ ಕೆಲವು ಕಡೆ ಟ್ಯಾಂಕ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ: ಸುಮಾರು 10 ದಿನಗಳಿಂದ ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ರೈತ ಮುಖಂಡ ಶಿವಕುಮಾರ್ ನಾಟಿಕಾರ್, ಇನ್ನೊಂದೆಡೆ ಶ್ರೀಮಂತ ಬಿರಾದಾರ್ ಹಾಗೂ ರೈತರ ಮುಖಂಡರು  ಉಪವಾಸ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು ಇಲ್ಲಿವರೆಗೆ ಶಾಸಕರು, ಸಚಿವರು ಮತ್ತು ನೀರಾವರಿ ಅಧಿಕಾರಿಗಳು ಭೀಮಾ ನದಿಗೆ ನೀರು ಹರಿಸುವುದಾಗಿ ಭರವಸೆಗಳನ್ನ ನೀಡಿದ್ದಾರೆ. ಆದರೆ ಇಲ್ಲಿವರೆಗೂ ಭೀಮ ನದಿಗೆ ನೀರು ಹರಿದು ಬಂದಿಲ್ಲ. ಹೀಗಾಗಿ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದಕ್ಕಾಗಿ ಸಂಬಂಧಪಟ್ಟ ನೀರಾವರಿ ಸಚಿವರು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಉಪವಾಸ ನಿರತ ಬೆಂಬಲಿಗ ರೈತ ಮುಖಂಡರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.