ADVERTISEMENT

ಯಾದಗಿರಿ: ದ್ವೇಷ ಭಾಷಣ, ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ವಿರೋಧಿಸಿ ಹೋರಾಟ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 5:57 IST
Last Updated 25 ಡಿಸೆಂಬರ್ 2025, 5:57 IST
ಯಾದಗಿರಿ ನಗರ ಸುಭಾಷ್‌ ವೃತ್ತದಲ್ಲಿ ದ್ವೇಷ ಭಾಷಣ ವಿಧೇಯಕ ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು
ಯಾದಗಿರಿ ನಗರ ಸುಭಾಷ್‌ ವೃತ್ತದಲ್ಲಿ ದ್ವೇಷ ಭಾಷಣ ವಿಧೇಯಕ ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು   

ಯಾದಗಿರಿ: ‘ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ–2025 ಭಾರತೀಯ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಈ ವಿಧೇಯಕವನ್ನು ರಾಜ್ಯ ಸರ್ಕಾರ ತಕ್ಷಣವೇ ಹಿಂಪಡೆಯಬೇಕು’ ಎಂದು ಜಿಲ್ಲಾ ಬಿಜೆಪಿ ಆಗ್ರಹಿಸಿತು.

ನಗರದ ಸುಭಾಷ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಮಾತನಾಡಿ, ‘ಈ ವಿಧೇಯಕವು ಸಂವಿಧಾನವು ನಾಗರಿಕರಿಗೆ ನೀಡಿರುವ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಪ್ರಯತ್ನವಾಗಿದೆ’ ಎಂದು ಆರೋಪಿಸಿದರು.

‘ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಸರ್ಕಾರ ನಾಶಪಡಿಸಲು ಮುಂದಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ದ್ವೇಷ ಭಾಷಣಕ್ಕೆ ವಿಧೇಯಕದಲ್ಲಿ ನೀಡಿರುವ ವ್ಯಾಖ್ಯಾನ ಅಸ್ಪಷ್ಟವಾಗಿದ್ದು, ಸರ್ಕಾರದ ವಿರುದ್ಧದ ಟೀಕೆ, ಸಾಮಾಜಿಕ ಚರ್ಚೆ, ವ್ಯಂಗ್ಯ ಹಾಗೂ ಸತ್ಯವಾಚನವನ್ನೂ ದ್ವೇಷವೆಂದು ಪರಿಗಣಿಸುವ ಅಪಾಯವಿದೆ. ಇದು ಸರ್ಕಾರದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ಸಾಧನವಾಗಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವ ಮುಖಂಡ ಮಹೇಶ್ ಗೌಡ ಮುದ್ನಾಳ ಮಾತನಾಡಿ, ‘ಈ ಕಾಯ್ದೆಯಡಿ ಪೊಲೀಸರಿಗೆ ಅತಿಯಾದ ಹಾಗೂ ನಿರಂಕುಶ ಅಧಿಕಾರ ನೀಡಲಾಗುತ್ತಿದ್ದು, ಪ್ರತಿಬಂಧಕ ಕ್ರಮಗಳ ನೆಪದಲ್ಲಿ ಶಾಂತಿಯುತ ಪ್ರತಿಭಟನೆಗಳು, ಸಭೆಗಳು ಹಾಗೂ ಸಾಮಾಜಿಕ ಚಳುವಳಿಗಳನ್ನು ತಡೆಯುವ ದುರುದ್ದೇಶ ಅಡಗಿದೆ’ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರವು ಈ ವಿಧೇಯಕದ ಮೂಲಕ ಪ್ರತಿಪಕ್ಷಗಳು, ಮಾಧ್ಯಮ ಮತ್ತು ಸಂಘ–ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ಹಾಗೂ ಹೆದರಿಸುವ ಕೆಲಸ ಮಾಡುತ್ತಿದೆ’ ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ, ಸಿದ್ದಣಗೌಡ ವಡಗೇರಾ, ದೇವಿಂದ್ರನಾಥ ನಾದ್, ಪರಶುರಾಮ ಕುರುಕುಂದಾ, ವಿಲಾಸ್ ಪಾಟೀಲ್, ಶ್ರೀಧರ್ ಸಾಹುಕಾರ್ ಮಲ್ಲು ಕೊಲಿವಾಡ ಮಂಜುನಾಥ್ ಗುತ್ತೇದಾರ, ಸುರೇಶ್ ಅಂಬಿಗೇರ್, ಸ್ವಾಮಿದೇವ ದಾಸನಕೇರಿ, ಲಿಂಗಪ್ಪ ಹತ್ತಿಮನಿ, ಶರಣಗೌಡ ಕೊಡ್ಲಾ, ಬಸವರಾಜ ಸೊನ್ನದ್, ವೆಂಕಟರೆಡ್ಡಿ ಮಾಲಿ ಪಾಟೀಲ, ಶಿವಣ್ಣ ದೊಡ್ಡಮನಿ, ರಾಜಶೇಖರ್ ಕಾಡಮಗೇರಾ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಬಿಜೆಪಿ ಮಂಡಲ ವತಿಯಿಂದ ಪ್ರತಿಭಟನೆ

ಸುರಪುರ: ರಾಜ್ಯ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ವಿರೋಧಿಸಿ ಭಾರತೀಯ ಜನತಾ ಪಕ್ಷ ಸುರಪುರ ಮಂಡಲ ವತಿಯಿಂದ ತಹಶೀಲ್ದಾರ್ ಕಚೇರಿ ಮುಂದೆ ಬುಧವಾರ ಪ್ರತಿಭಟಿನೆ ನಡೆಸಲಾಯಿತು.

ಮಂಡಲ ಅಧ್ಯಕ್ಷ ವೇಣುಮಾಧವನಾಯಕ ಮಾತನಾಡಿ, ‘ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಹೊರಟಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ 2025 ವಿಧೇಯಕ ಸಂವಿಧಾನಕ್ಕೆ ವಿರೋಧವಾಗಿದೆ. ಇದು ನಾಗರಿಕರ ಪಾಲಿಗೆ ಮರಣ ಶಾಸನವಾಗಿದೆ’ ಎಂದು ಆರೋಪಿಸಿದರು.

‘ಈ ಕಾಯ್ದೆ ಮೂಲಕ ಪ್ರತಿಭಟನೆ, ಸಾಮಾಜಿಕ ಚಳವಳಿಗಳನ್ನು ತಡೆ ಹಿಡಿಯುವ ಕ್ರಮವಾಗಿದೆ. ಇದರಿಂದ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೆಚ್ಚು ತೊಂದರೆಗೆ ಸಿಲುಕುತ್ತಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಎಚ್.ಎ. ಸರಕಾವಸ್ ಅವರಿಗೆ ಸಲ್ಲಿಸಿದರು.

ಭೀಮಣ್ಣ ಬೇವಿನಾಳ, ನರಸಿಂಹಕಾಂತ ಪಂಚಮಗಿರಿ, ಪಾರಪ್ಪ ಗುತ್ತೇದಾರ, ಸಣ್ಣ ದೇಸಾಯಿ, ದೇವಿಂದ್ರಪ್ಪಗೌಡ ಮಾಲಿಪಾಟೀಲ, ವಿಜಯಕುಮಾರ ಚಿಟ್ಟಿ, ಸಂದೀಪ ಜೋಶಿ, ಜಗದೀಶ ಪಾಟೀಲ, ಸಂಜೀವ ತಿಂಥಣಿ, ಭೀಮಾಶಂಕರ ಬಿಲ್ಲವ್, ಈಶ್ವರ ನಾಯಕ, ಮಹೇಶ ಪಾಟೀಲ, ರಾಜಾ ರಂಗಪ್ಪನಾಯಕ. ಸಂಗನಗೌಡ ಪಾಟೀಲ, ಲಕ್ಷ್ಮೀಕಾಂತ ಗೋನಾಲ, ದತ್ತು ಗುತ್ತೇದಾರ, ವೀರಭದ್ರ ಕುಂಬಾರ, ಶಿವುಕುಮಾರ ಅವಂಟಿ ಭಾಗವಹಿಸಿದ್ದರು.

ತಹಶೀಲ್ದಾರ್‌ಗೆ ಮನವಿ ಪತ್ರ

ಶಹಾಪುರ: ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಲು ಹೊರಟಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ -2025 ವಿರೋಧಿಸಿ ಗುರುವಾರ ಬಿಜೆಪಿ ಪಕ್ಷದ ಮುಖಂಡರು ತಹಶೀಲ್ದಾರ್ ಸಿದ್ಧಾರೂಢ ಬನ್ನಿಕೊಪ್ಪ ಅವರಿಗೆ ಮನವಿ ಸಲ್ಲಿಸಿದರು.

‘ನಾಗರಿಕರ ಹಕ್ಕು ಕಸಿದುಕೊಳ್ಳುವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಗುಗೊಳಿಸುವ ವ್ಯವಸ್ಥಿತ ಹುನ್ನಾರ ರಾಜ್ಯಕ್ಕೆ ಹೊರಟಿದೆ. ಸರ್ಕಾರದ ವಿರುದ್ಧ ಮಾತನಾಡುವರನ್ನು ಬಾಯಿ ಮುಚ್ಚಿಸುವ ಸಾಧನವಾಗಿದೆ. ಸರ್ಕಾರದ ವ್ಯವಸ್ಥೆ ಬಗ್ಗೆ ಮಾತನಾಡುವುದು ಹಾಗೂ ಟೀಕಿಸುವುದು ಅಲ್ಲದೆ ಸತ್ಯವನ್ನು ಹೇಳುವುದು ಸಹ ದ್ವೇಷ ಎನ್ನುವುದನ್ನು ಬಿಂಬಿಸಲು ಹೊರಟಿದೆ’ ಎಂದು ಬಿಜೆಪಿ ಪಕ್ಷದ ಮುಖಂಡರು ಆರೋಪಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಯಾಳಗಿ ಹಾಗೂ ಬಿಜೆಪಿ ಪಕ್ಷದ ಮುಖಂಡರಾದ ಗುರು ಕಾಮಾ, ಮಲ್ಲಿಕಾರ್ಜುನ ಕಂದಕೂರ, ದೇವಿಂದ್ರ ಕೊನೇರ, ಅಬ್ದುಲ ಹಾದಿಮನಿ, ರಾಘವೇಂದ್ರ ಯಕ್ಷಿಂತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.