ADVERTISEMENT

ಅಂಧತ್ವ ಮೆಟ್ಟಿ ನಿಂತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾದ ಶರಣಪ್ಪ 

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿ; ಯುವಕರಿಗೆ ಮಾದರಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 11:13 IST
Last Updated 2 ಜನವರಿ 2020, 11:13 IST
ಯರಗೋಳ ಸಮೀಪದ ಅಲ್ಲಿಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶರಣಪ್ಪ ಮಾಲತಿ ದಂಪತಿ
ಯರಗೋಳ ಸಮೀಪದ ಅಲ್ಲಿಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶರಣಪ್ಪ ಮಾಲತಿ ದಂಪತಿ   

ಯರಗೋಳ: ದೇಹದ ಅಂಗಾಂಗಗಳು ಸರಿಯಾಗಿದ್ದರೂ ಯಶಸ್ಸು ಸಾಧಿಸುವಲ್ಲಿ ಹಿನ್ನಡೆ ಅನುಭವಿಸುವ ಯುವಕರಿಗೆ ಹುಟ್ಟಿನಿಂದಲೇ ದೃಷ್ಟಿದೋಷ ಹೊಂದಿರುವ ಶರಣಪ್ಪ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆದು ಮಾದರಿಯಾಗಿದ್ದಾರೆ.

ಯಾದಗಿರಿ ಜಿಲ್ಲೆಯ ಹಳಗೇರಿ ಗ್ರಾಮದಲ್ಲಿ 1985ರಲ್ಲಿ ಭೀಮರಾಯ ಮತ್ತು ಮರೆಮ್ಮ ದಂಪತಿಯ 8 ಮಕ್ಕಳಲ್ಲಿ 4ನೇ ಮಗನಾಗಿ ಜನಿಸಿದ ಶರಣಪ್ಪ ಹುಟ್ಟಿನಿಂದಲೇ ದೃಷ್ಟಿ ದೋಷ ಹೊಂದಿದ್ದಾರೆ.

ಕಲಬುರ್ಗಿಯ ಅಂಧ ಮಕ್ಕಳ ಶಾಲೆಯಲ್ಲಿ 10 ನೇ ತರಗತಿಯವರೆಗೂ ಶಿಕ್ಷಣ ಪೂರ್ಣಗೊಳಿಸಿ, ಬೆಂಗಳೂರಿನ ಆಚಾರ್ಯ ಪಾಠ ಶಾಲೆಯಲ್ಲಿ ದ್ವಿತೀಯ ಪಿಯುಸಿ, ಮೈಸೂರಿನ ಹೆಲನ್ ಕೆಲರ್ ವಿಶೇಷ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಡಿ.ಇಡಿ, ಕಲಬುರ್ಗಿಯಲ್ಲಿ ಬಿ.ಎ ಪದವಿ, ಯಾದಗಿರಿಯ ಸರ್ಕಾರಿ ಪದವಿ ಮಹಾ ವಿದ್ಯಾಲಯದಲ್ಲಿ ರಾಜ್ಯ ಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿದ್ದಾರೆ.

ADVERTISEMENT

ಮೈಸೂರಿನ ವಿಕಲಚೇತನರ ಪುಸ್ತಕ ಮುದ್ರಣಾಲಯದಲ್ಲಿ ಕರಡು ತಿದ್ದುವ ಕೆಲಸಕ್ಕೆ ಸೇರ್ಪಡೆಯಾಗಿ 4 ವರ್ಷಗಳ ಕಾಲ ಸೇವೆ. 2014 ಲೋಕಸೇವಾ ಆಯೋಗ ನಡೆಸಿದ ಕೆಎಎಸ್‌ ಪರೀಕ್ಷೆಯಲ್ಲಿ ಸಂದರ್ಶನದವರೆಗೂ ಆಯ್ಕೆ, 2017ರಲ್ಲಿ ವಿಕಲಚೇತನರ ಸಬಲೀಕರಣ ಇಲಾಖೆಯ ಕಲಬುರ್ಗಿ ಅಂಧ ಮಕ್ಕಳ ಶಾಲೆಗೆ ಶಿಕ್ಷಕರಾಗಿ ನೇಮಕ– 6 ತಿಂಗಳು ಸೇವೆ, 2017ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಎಸ್‌ಡಿಎ ಹಾಗೂ ಎಸ್‌ಡಿಎ ಹುದ್ದೆಗೆ ಆಯ್ಕೆ, 2018ರಲ್ಲಿ ಪಿಡಿಒಹುದ್ದೆಗೆ ಆಯ್ಕೆಯಾಗಿದ್ದಾರೆ.

ಪ್ರಸ್ತುತ ಯಾದಗಿರಿ ತಾಲ್ಲೂಕಿನ ಅಲ್ಲಿಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, 2019 ನೇ ಸಾಲಿನಲ್ಲಿ ‘ಗಾಂಧಿ ಗ್ರಾಮ’ ಪ್ರಶಸ್ತಿ ಪುರಸ್ಕಾರ ಲಭಿಸಿದೆ. ಓದಿನ ಜತೆಗೆ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದು, ಚೆಸ್, ಕ್ರಿಕೆಟ್, ಲಾಂಗ್ ಜಂಪ್, ಹೈಜಂಪ್, ಕಬಡ್ಡಿ, ಓಟದ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಹಲವು ಸಲ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಬಾಚಿಕೊಂಡಿದ್ದಾರೆ.

ಬರವಣೆಗೆಯ ಆಸಕ್ತಿ ಹೊಂದಿದ ಇವರು ಪ್ರಬಂಧ, ಆಶುಭಾಷಣ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟದವರೆಗೂ ಸ್ಪರ್ಧಿಸಿದ್ದಾರೆ.

‘ನನ್ನ ತಮ್ಮ ಶ್ರಮಜೀವಿ, ಸ್ವಾಭಿಮಾನಿಯಾಗಿದ್ದು, ಸರ್ಕಾರಿ ನೌಕರಿ ಪಡೆದು ನಮ್ಮ ಕುಟುಂಬಕ್ಕೆ ಆಸರೆಯಾಗಿದ್ದಾನೆ’ ಎನ್ನುತ್ತಾರೆಸಹೋದರಿ ಮರಿಯಮ್ಮ.

‘ನನ್ನ ಮಗ ಕುಟುಂಬವನ್ನು ಚೆನ್ನಾಗಿ ನೋಡಿಕೊಂಡು ಹೋಗುತ್ತಿದ್ದಾನೆ. ಉತ್ತಮ ಸೇವೆ ಸಲ್ಲಿಸುತ್ತಾ ಜನರಿಗೆ ಆಶಾಕಿರಣವಾಗಲಿ ಎಂಬುದು ನಮ್ಮ ಆಶಯ ಅನ್ನುತ್ತಾರೆ ತಾಯಿಮರೆಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.