ಸುರಪುರ: ರಾಜ್ಯದ ಎಲ್ಲ ಸರ್ಕಾರಿ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಮೃತದೇಹಗಳ ಕೊರತೆಯಿದೆ ಎಂದು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಮಾಹಿತಿ ತಿಳಿಸುತ್ತದೆ.
ಇದರಿಂದ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆಯಾಗುತ್ತಿದೆ. ಇಚ್ಛೆಯಿಂದ ಮಾಡುವ ದೇಹದಾನ, ಅನಾಥ ಮೃತದೇಹಗಳು ವಿದ್ಯಾರ್ಥಿಗಳ ಅಧ್ಯಯನಕ್ಕೆ ಆಸರೆಯಾಗಿವೆ. ಜನರಲ್ಲಿ ದೇಹದಾನದ ಬಗ್ಗೆ ಅರಿವು ಮೂಡುವ ಅಗತ್ಯವಿದೆ ಎಂದು ವೈದ್ಯರು ತಿಳಿಸುತ್ತಾರೆ.
ಸುರಪುರದಲ್ಲಿ ಗುರುವಾರ ರಾಜಾ ವಾಸುದೇವನಾಯಕ(93) ಅವರ ಮೃತ ದೇಹದ ಹಸ್ತಾಂತರ ಸಮಯದಲ್ಲಿ ಯಾದಗಿರಿ ಕಾಲೇಜಿನ ಯಾದಗಿರಿ ವೈದ್ಯಕೀಯ ಕಾಲೇಜಿನ ಅಂಗರಚನಾ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ.ಗವೀಶ ಹಾದಿಮನಿ ದೇಹದಾನದ ಕುರಿತು ಜನರಲ್ಲಿ ಅರಿವು ಮೂಡಿಸಿದರು.
‘ದೇಹದಾನ ಶ್ರೇಷ್ಠವಾದದ್ದು. ಮರಣದ ನಂತರ ದೇಹವು ಮಣ್ಣಾಗುವುದಕ್ಕಿಂತ ವೈದ್ಯಕೀಯ ಶಿಕ್ಷಣ ಅಧ್ಯಯನ ಮತ್ತು ಸಂಶೋಧನೆಗೆ ನೆರವಾದರೆ ಅದಕ್ಕಿಂತ ಕೊಡುಗೆ ಮತ್ತೊಂದಿಲ್ಲ. ರಾಜಾ ವಾಸುದೇವ ನಾಯಕ ಅವರ ಉದಾತ್ತ ಸೇವೆಯ ದೇಹದಾನವನ್ನು ನಮ್ಮ ಸಂಸ್ಥೆ ಪ್ರಶಂಸಿಸುತ್ತದೆ’ ಎಂದರು.
ದೇಹದಾನದ ಬಗ್ಗೆ ಅರಿವು: ಯಾದಗಿರಿ ವೈದ್ಯಕೀಯ ಕಾಲೇಜಿಗೆ ಇದುವರೆಗೆ 29 ಜನ ದೇಹದಾನ ಕುರಿತು ಅರ್ಜಿ ಸಲ್ಲಿಸಿದ್ದಾರೆ. ಅವರೆಲ್ಲರನ್ನು ಕಾಲೇಜಿಗೆ ಆಹ್ವಾನಿಸಿ ಸನ್ಮಾನಿಸಲಾಗವುದು. ದೇಹದಾನದ ಮಕಹತ್ವದ ಬಗ್ಗೆ ಬೀದಿ ನಾಟಕ, ಇತರ ಸಮಾರಂಭಗಳನ್ನು ಆಯೋಜಿಸ ಲಾಗವುದು ಎಂದು ಡಾ.ಗವೀಶ ತಿಳಿಸಿದರು.
ದೇಹದಾನ ಹೇಗೆ: ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ದೇಹದಾನ ಅರ್ಜಿ ಸಿಗುತ್ತವೆ. ಇಚ್ಛೆಯುಳ್ಳ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿಗೆ ಇಬ್ಬರು ರಸ್ತ ಸಂಬಂಧಿಗಳ ಒಪ್ಪಗೆ ಬೇಕು. ತಮ್ಮ ಮಕ್ಕಳು ಅಥವಾ ವಾರಸುದಾರರ ಬಳಿಯೂ ತಮ್ಮ ದೇಹದಾನದ ಬಗ್ಗೆ ತಿಳಿಸಬಹುದು. ಮರಣದ ನಂತರ ಕಾಲೇಜಿಗೆ ಮಾಹಿತಿ ನೀಡಿದರೆ, ಕಾಲೇಜು ಸಿಬ್ಬಂದಿ ಆಗಮಿಸಿ ದೇಹವನ್ನು ಪಡೆಯುತ್ತಾರೆ. ಇದಕ್ಕೆ ಮರಣ ಪ್ರಮಾಣ ಪತ್ರ ಮತ್ತು ವೈದ್ಯಕೀಯ ಪ್ರಮಾಣ ಪತ್ರ ಅವಶ್ಯ.
ರಾಜಾ ವಾಸುದೇವನಾಯಕ ದೇಹದಾನ
ತಮ್ಮ ಮರಣದ ನಂತರ ಮೃತ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಬೇಕು ಎಂದು ರಾಜಾ ವಾಸುದೇವನಾಯಕ ಅವರು ಮಕ್ಕಳಿಗೆ ತಿಳಿಸಿದ್ದರು.
ತಂದೆಯ ಇಚ್ಛೆಯಂತೆ ಅವರ ಪುತ್ರರಾದ ರಾಜಾ ಮುಕುಂದನಾಯಕ ಮತ್ತು ರಾಜಾ ಹನುಮಪ್ಪನಾಯಕ ದೇಹದಾನ ಪ್ರಕ್ರಿಯೆ ಮುಗಿಸಿದರು. ಈ ಮೂಲಕ ವಾಸುದೇವನಾಯಕ ಸಾವಿನಲ್ಲೂ ಸಾರ್ಥಕತೆ ಮೆರೆದು ಮಾದರಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.