ADVERTISEMENT

ಮತಾಂತರ ನಿಷೇಧ ಕಾಯ್ದೆ ಜಾರಿಗೆ ಪ್ರಮೋದ ಮುತಾಲಿಕ್ ಆಗ್ರಹ

ಮಸೀದಿಗಳಲ್ಲಿ ಧ್ವನಿ ವರ್ಧಕ ನಿಷೇಧಿಸಿ: ಪ್ರಮೋದ ಮುತಾಲಿಕ್

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 4:07 IST
Last Updated 21 ನವೆಂಬರ್ 2021, 4:07 IST
ಪ್ರಮೋದ ಮುತಾಲಿಕ್
ಪ್ರಮೋದ ಮುತಾಲಿಕ್   

ಯಾದಗಿರಿ: ‘ಸರ್ಕಾರ ರಾಜ್ಯದಲ್ಲಿ ಮತಾಂತರನಿಷೇಧ ಕಾಯ್ದೆ ಜಾರಿಗೆ ತರಬೇಕು’ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದರು.

‘ರಾಜ್ಯದಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ. ಇದರಿಂದ ದಲಿತ ಸೇರಿದಂತೆ ಮೇಲ್ವರ್ಗದವರು ಮತಾಂತರವಾಗುತ್ತಿದ್ದಾರೆ. ಹೀಗಾಗಿ ಇದೇ ಚಳಿಗಾಲ ಅಧಿವೇಶನದಲ್ಲಿ ಮತಾಂತರ ಕಾಯ್ದೆ ಜಾರಿಗೆ ತರಬೇಕು’ ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಮತಾಂತರ ಎನ್ನುವುದು ಒಂದು ಪಿಡುಗು ಆಗಿದೆ. ಬ್ರಿಟಿಷರ ಕಾಲದಿಂದಲೂ ನಡೆಯುತ್ತಿದೆ. ಸ್ವಾಮಿ ವಿವೇಕಾನಂದರು ಮತಾಂತರವನ್ನು ದೇಶಾಂತರ ಎಂದಿದ್ದರು. ಮಹಾತ್ಮ ಗಾಂಧೀಜಿ ವ್ಯಾಪಾರೀಕರಣ ಎಂದಿದ್ದರು. ಮತಬ್ಯಾಂಕ್‌ಗಾಗಿ ಕೆಲ ಪಕ್ಷಗಳು ಇದನ್ನು ಬೆಂಬಲಿಸುತ್ತಿವೆ’ ಎಂದರು.

ADVERTISEMENT

‘ಮಸೀದಿಗಳಲ್ಲಿ ದೊಡ್ಡ ಪ್ರಮಾಣದ ಧ್ವನಿವರ್ಧಕ ಬಳಸಿ ದಿನದಲ್ಲಿ ಐದು ಬಾರಿ ಶಬ್ದ ಮಾಡಲಾಗುತ್ತಿದೆ. ಇದು ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘನೆ. ಆಸ್ಪತ್ರೆ, ವೃದ್ದಾಶ್ರಮ ಮತ್ತಿತರ ಕಡೆ ಭಾರಿ ತಲೆನೋವಾಗಿ ಪರಿಣಮಿಸಿದೆ. ನೆಮ್ಮದಿ ಇಲ್ಲದಂತಾಗಿದೆ’ ಎಂದರು.

‘ಧ್ವನಿವರ್ಧಕ ತೆರವುಗೊಳಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗಳ ಬಳಿ ಜನವರಿ 1ರಿಂದ ಪ್ರತಿಭಟನೆ ಮಾಡಲಾಗುವುದು. ರಾಜ್ಯ ಸರ್ಕಾರಕ್ಕೆ ಧ್ವನಿವರ್ಧಕ ನಿಷೇಧ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡಲಾಗುತ್ತಿದೆ’ ಎಂದರು.

‘ಅಸ್ಪೃಶ್ಯತೆ ಕೆಟ್ಟ ರೋಗ ಇದು. ಇದನ್ನು ತೊಲಗಿಸಬೇಕು. ಆದರೆ, ಕ್ರೈಸ್ತ ಧರ್ಮಕ್ಕೆ ಮತಾಂತರವಾದವರು ತಮ್ಮ ಹಳೆ ಧರ್ಮದ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕ್ರೈಸ್ತರು ಹಿಂದೂಗಳಿಗೆ ಟೋಪಿ ಹಾಕುತ್ತಿದ್ದಾರೆ. ದೇಶವನ್ನು ಕ್ರೈಸ್ತ ರಾಷ್ಟ್ರ ಮಾಡಲು ಹುನ್ನಾರ ನಡೆದಿದೆ’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರ 3 ಕೃಷಿ ಕಾಯ್ದೆ ಹಿಂತೆಗೆದುಕೊಳ್ಳಲಾಗುವುದು ಎನ್ನುವುದು ಹಿನ್ನಡೆಗೆ ಕಾರಣವಾಗಲಿದೆ. ಯಾವುದೋ ಕಾರಣಕ್ಕಾಗಿ ಇದನ್ನು ಹಿಂದೆ ತೆಗೆದುಕೊಂಡಿದ್ದಾರೊ ಗೊತ್ತಿಲ್ಲ. ಕಾಯ್ದೆಗಳ ಬಗ್ಗೆ ನಾನು ಹೆಚ್ಚು ಅಧ್ಯಯನ ಮಾಡಿಲ್ಲ’ ಎಂದರು.

ಈ ವೇಳೆ ಶ್ರೀರಾಮ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಪಾಟೀಲ, ಸಂದೀಪ್‌, ರಾಜು, ಶಶಾಂಕ ನಾಯಕ, ಅಂಬ್ರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.