ADVERTISEMENT

ತನಗೆ ಮದುವೆ ಮಾಡಲಿಲ್ಲ ಎಂದು ಅಣ್ಣನ ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ!

ಬಾಯಿಗೆ ಬಟ್ಟೆ ತುರುಕಿ, ಸುತ್ತಿಗೆ, ಕಬ್ಬಿಣದ ರಾಡ್‌ನಿಂದ ಹಲ್ಲೆ, ಇಬ್ಬರು ಮಕ್ಕಳು ಸಾವು

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 5:08 IST
Last Updated 29 ಜುಲೈ 2025, 5:08 IST
ವಡಗೇರಾ ತಾಲ್ಲೂಕಿನ ಕುರಕುಂದಾ ಗ್ರಾಮದಲ್ಲಿ ಮಕ್ಕಳ ಮೃತ ದೇಹದ ಮುಂದೆ ರೋಧಿಸುತ್ತಿರುವ ಗ್ರಾಮಸ್ಥರು ಹಾಗೂ ಕುಟುಂಬಸ್ಥರು
ವಡಗೇರಾ ತಾಲ್ಲೂಕಿನ ಕುರಕುಂದಾ ಗ್ರಾಮದಲ್ಲಿ ಮಕ್ಕಳ ಮೃತ ದೇಹದ ಮುಂದೆ ರೋಧಿಸುತ್ತಿರುವ ಗ್ರಾಮಸ್ಥರು ಹಾಗೂ ಕುಟುಂಬಸ್ಥರು   

ವಡಗೇರಾ: ತಾಲ್ಲೂಕಿನ ಕುರಕುಂದಾ ಗ್ರಾಮದ ಯುವಕ ಖಾಸೀಂ ಎಂಬಾತನು, ತನಗೆ ಮದುವೆ ಮಾಡಲಿಲ್ಲ ಎಂಬ ಕಾರಣಕ್ಕೆ ಹಿರಿಯ ಸಹೋದರ ಚಾಂದ್‌ಪಾಷಾ ಎಂಬಾತನ ಮೂರು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾನೆ. ಅದರಲ್ಲಿ ಇಬ್ಬರು ಬಾಲಕರು ಮೃತಪಟ್ಟಿದ್ದು, ಮತ್ತೊಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಬಾಲಕ ರೋಹನ್‌(7)ನನ್ನು  ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹ್ಮದ್ ಇಸಾಕ್(9) ಮತ್ತು ಖಾಸೀಂ ಅಲಿ(7) ಮೃತ ಬಾಲಕರು.

ಘಟನೆಯ ವಿವಿರ: ಕುರಕುಂದಾ ಗ್ರಾಮದ ಚಾಂದಪಾಷಾ ಕುಟುಂಬವು ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತಿತ್ತು. ಚಾಂದಪಾಷಾ ಅವರ ಪತ್ನಿ ರಿಹಾನಾ ಅವರು, ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು.

ADVERTISEMENT

ಆರೋಪಿ ಖಾಸೀಂ, 15 ದಿನಗಳ ಹಿಂದಷ್ಟೇ ಬೆಂಗಳೂರಿಗೆ ತಾಯಿಯೊಂದಿಗೆ ತೆರಳಿ, ಅಣ್ಣ ಚಾಂದ್‌ಪಾಷಾ ಮನೆಯಲ್ಲಿ ತಂಗಿದ್ದ. ರಿಹಾನಾ, ಪತಿಯ ಸಹೋದರರನನ್ನು ಚನ್ನಾಗಿಯೇ ಉಪಚರಿಸುತ್ತಿದ್ದರು.   

ಖಾಸೀಂ, ಅಣ್ಣ ಚಾಂದಪಾಷಾ ತನಗೆ ಮದುವೆ ಮಾಡಿಲ್ಲವೆಂದು ಕೋಪಗೊಂಡು ಅಣ್ಣನ ಮಕ್ಕಳನ್ನು ಶನಿವಾರ(ಜುಲೈ 26), ಬೆಂಗಳೂರಿನ ಕಮ್ಮಸಂದ್ರದ ಮನೆಯಲ್ಲಿ ಯಾರು ಇಲ್ಲದ ವೇಳೆ, ಮಕ್ಕಳ ಬಾಯಿಗೆ ಬಟ್ಟೆ ತುರುಕಿ, ಕಬ್ಬಿಣದ ರಾಡ್ ಹಾಗೂ ಕಲ್ಲು ಒಡೆಯುವ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಕಣ್ಣೀರಾದ ಗ್ರಾಮಸ್ಥರು: ಮಕ್ಕಳ ಮೃತದೇಹಗಳು ಸೋಮವಾರ ಬೆಳಿಗ್ಗೆ 8 ಗಂಟೆಗೆ ಕುರಕುಂದಾ ಗ್ರಾಮಕ್ಕೆ ಬಂದಾಗ ಗ್ರಾಮಸ್ಥರು, ಜಾತಿ ಭೇದವಿದಲ್ಲದೆ ಕಣ್ಣೀರಾದರು. ಸುಮಾರು 9 ಗಂಟೆಗೆ ಮುಸ್ಲಿಂ ಸಂಪ್ರದಾಯದಂತೆ ಮಕ್ಕಳನ್ನು ದಫನ್ ಮಾಡಲಾಯಿತು.

ಇದೇ ಸಮಯದಲ್ಲಿ ಅಮಾಯಕ ಮಕ್ಕಳನ್ನು ಕೊಂದ ಆರೋಪಿ ಖಾಸೀಂಗೆ ಗಲ್ಲು ಶಿಕ್ಷೆ ವಿಧಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.

ವಡಗೇರಾ ಮೃತ ಬಾಲಕರು
ಗ್ರಾಮದಲ್ಲಿ ತಮ್ಮನಿಗೆ ಊಟದ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ತಾಯಿ ಆತನನ್ನು ಬೆಂಗಳೂರಿಗೆ ಕರೆ ತಂದಿದ್ದರು. ನನಗೆ ಹೇಳಿದ್ದರೆ ಮದುವೆ ಮಾಡಿಸುತ್ತಿದ್ದೆ. ಮದುವೆ ಮಾಡಲಿಲ್ಲ ಎಂಬ ಸಿಟ್ಟನ್ನು ನನ್ನ ಮಕ್ಕಳ ಮೇಲೆ ತೆಗೆದಿದ್ದಾನೆ
ಚಾಂದಪಾಷಾ ಮೃತ ಬಾಲಕರ ತಂದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.