
ಕಕ್ಕೇರಾ: ಎರಡು ವರ್ಷಗಳಿಂದ ಬಸ್ ಸಂಚಾರ ರದ್ದಾಗಿದ್ದ ದೇವದುರ್ಗ-ಪುಣೆ ಬಸ್ ಸಂಚಾರ ಪುನಃ ಆರಂಭವಾದ ಹಿನ್ನೆಲೆಯಲ್ಲಿ ಕಕ್ಕೇರಾ ಪಟ್ಟಣದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬಸ್ ಚಾಲಕ-ನಿರ್ವಾಹಕರಿಗೆ ಪೇಟ ತೊಡಿಸಿ ಸನ್ಮಾನಿಸಿದರು.
ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಚಂದ್ರಶೇಖರ ವಜ್ಜಲ ಮಾತನಾಡಿ, ‘ದೇವದುರ್ಗ ಘಟಕದ ದೇವದುರ್ಗ-ಪುಣೆ ಬಸ್ ಸಂಚಾರ ಎರಡು ವರ್ಷಗಳಿಂದ ರದ್ದಾಗಿದ್ದರಿಂದ ನೌಕರರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರಿಗೆ ತೊಂದರೆಯಾಗಿತ್ತು. ಈ ಬಸ್ ಪುನಃ ಸೋಮವಾರದಿಂದ ಆರಂಭವಾಗಿದ್ದರಿಂದ ಪಟ್ಟಣದಿಂದ ವಿಜಯಪುರ, ಸೋಲಾಪುರ, ಮಿರಜ ನಗರಗಳಿಗೆ ಅವಶ್ಯ ಕೆಲಸಗಳು, ಆಸ್ಪತ್ರೆಗಳಿಗೆ ತೆರಳಲಿಕ್ಕೆ ಅನುಕೂಲವಾಗಿದೆ. ಬೆಳಗಿನ ಜಾವ 5ರ ಸುಮಾರಿಗೆ ಕಕ್ಕೇರಾಗೆ ಬರುವ ಇದೇ ಬಸ್‌ನಿಂದ ತಿಂಥಣಿ ಬ್ರಿಜ್, ದೇವದುರ್ಗ, ರಾಯಚೂರು ಅಲ್ಲದೇ ಇತರೆ ಪಟ್ಟಣಗಳಿಗೆ ತೆರಳಲಿಕ್ಕೆ ವಿದ್ಯಾರ್ಥಿಗಳಿಂದ ಅನೇಕರಿಗೆ ಈ ಬಸ್ ಉಪಯುಕ್ತವಾಗಿದೆ. ಪುನಃ ಬಸ್ ಸಂಚರಿಸಲಿಕ್ಕೆ ಸಹಕರಿಸಿದ ದೇವದುರ್ಗ ಘಟಕದ ವ್ಯವಸ್ಥಾಪಕರಿಗೆ ಧನ್ಯವಾದ ತಿಳಿಸಿದರು.
ಬಸ್ ಚಾಲಕ ಅಯ್ಯಣ್ಣ ದೊರೆ ಹಾಗೂ ನಿರ್ವಾಹಕ ತಿಪ್ಪಣ್ಣ ಗೌಡೂರು ಅವರಿಗೆ ಪೇಟ, ತೊಡಿಸಿ ಸನ್ಮಾನಿಸಿ ಸಿಹಿ ತಿನಿಸಿ ಆತ್ಮೀಯವಾಗಿ ಬೀಳ್ಕೊಟ್ಟರು.
ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷ ಅಮರಪ್ಪ ಮಂಡಿ, ಚಂದ್ರು ವಜ್ಜಲ, ನಾಗರಾಜ ಮಡಿವಾಳ, ತಾಂತ್ರಿಕ ಸಿಬ್ಬಂದಿ ನಿಂಗಣ್ಣ ಗುರಿಕಾರ, ಶಿಕ್ಷಕ ಬಸಪ್ಪ ರೊಟ್ಲರ, ಬಸವರಾಜ ಹೊಸಮನಿ ಅಮರೇಶ ಬೋಯಿ, ಮುತ್ತಣ್ಣ ಶಿವಪೂಜಿ, ಸಂಗಣ್ಣ ಕುರಿ ಸೇರಿದಂತೆ ಅನೇಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.