ADVERTISEMENT

ಸೌಕರ್ಯವಿಲ್ಲದೆ ಸೊರಗಿದ ಬಸ್‌ ನಿಲ್ದಾಣ

ಕೋಟೆ ಮಾದರಿಯ ಸುರಪುರ ಬಸ್‍ನಿಲ್ದಾಣ, ಅವ್ಯವಸ್ಥೆಯ ತಾಣ

ಅಶೋಕ ಸಾಲವಾಡಗಿ
Published 30 ಡಿಸೆಂಬರ್ 2019, 10:32 IST
Last Updated 30 ಡಿಸೆಂಬರ್ 2019, 10:32 IST
ಕೋಟೆ ಮಾದರಿಯ ಸುರಪುರ ಬಸ್‍ನಿಲ್ದಾಣದ ವಿಹಂಗಮ ನೋಟ
ಕೋಟೆ ಮಾದರಿಯ ಸುರಪುರ ಬಸ್‍ನಿಲ್ದಾಣದ ವಿಹಂಗಮ ನೋಟ   

ಸುರಪುರ: ನಗರದ ಬಸ್‍ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ. ಕನಿಷ್ಠ ಮೂಲಸೌಕರ್ಯವೂ ಇಲ್ಲ. ಪ್ರಯಾಣಿಕರು ಈ ದುರವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

1965ರಲ್ಲಿ ನಿರ್ಮಾಣವಾದ ಈ ಬಸ್‍ನಿಲ್ದಾಣವನ್ನು ಮಾರ್ಚ್ 4, 2017 ರಂದು ನವೀಕರಣಗೊ
ಳಿಸಿ ಲೋಕಾರ್ಪಣೆಗೊಳಿಸಲಾಗಿದೆ.ಕೋಟೆ ಮಾದರಿಯ ಇದು ರಾಜ್ಯದ ಅಪರೂಪದ ಬಸ್ ನಿಲ್ದಾಣವಾಗಿದೆ. ಕುಡಿಯುವ ನೀರು, ನೈರ್ಮಲ್ಯ ಇತರ ಮೂಲಸೌಕರ್ಯ ಮರೀಚಿಕೆಯಾಗಿವೆ. ಬಿಡಾಡಿ ದನಗಳು, ಹಂದಿ–ನಾಯಿಗಳು ನಿಲ್ದಾಣದಲ್ಲಿ ವಾಸಿಸುತ್ತವೆ.

ದನಗಳಂತೂ ಬೆಳಿಗ್ಗೆಯೇ ಹಾಜರಿ ಹಾಕುತ್ತವೆ. ನಿಲ್ದಾಣದ ತುಂಬೆಲ್ಲ ಸಗಣಿ, ಮೂತ್ರ ಹಾಕಿ ಗಲೀಜು ಮಾಡುತ್ತವೆ. ಪ್ರಯಾಣಿಕರ ಲಗೇಜಿಗೆ ಬಾಯಿ ಹಾಕಿ ಕಿರಿಕಿರಿ ಮಾಡುತ್ತವೆ.ನಿಲ್ದಾಣದಲ್ಲಿ ಖಾಸಗಿ ವಾಹನಗಳದ್ದೆ ದರ್ಬಾರು, ಆಟೊ, ಜೀಪ್, ಟಂಟಂ ನಿಲ್ದಾಣದ ಒಳಗೆ ನಿಲ್ಲುತ್ತವೆ. ಕೂಗಿ, ಕೂಗಿ
ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುತ್ತವೆ.

ADVERTISEMENT

ನಿತ್ಯ 492 ಬಸ್‍ಗಳು ಓಡಾಡುತ್ತವೆ. ಪ್ಲಾಟ್ ಫಾರ್ಮ್‍ಗಳ ಸಂಖ್ಯೆ ಕೇವಲ 9 ಇರುವುದರಿಂದ ಬಸ್‍ಗಳು ಸ್ಥಳವಿಲ್ಲದೆ ಅಡ್ಡಾದಿಡ್ಡಿಯಾಗಿ ನಿಲ್ಲುತ್ತವೆ. ಕಲಬುರ್ಗಿ, ಕಕ್ಕೇರಾ, ಹುಣಸಗಿ ಇತರೆಡೆ ಹೋಗುವ ಬಸ್‍ಗಳಿಗೆ ಪ್ಲಾಟ್ ಫಾರ್ಮ್ ಇಲ್ಲ.

ಕಲಬುರ್ಗಿಗೆ ರಿಯಾಯತಿ ದರದಲ್ಲಿ ಓಡುವ ಬಸ್‍ಗಳು ನಿಲ್ದಾಣದ ಹೊರಗೆ ನಿಲ್ಲುತ್ತವೆ. ಪ್ರಯಾಣಿಕರು ಯಾವ ಬಸ್ ಎಲ್ಲಿಗೆ ಹೋಗುತ್ತದೆ. ಎಲ್ಲಿ ನಿಂತುಕೊಳ್ಳಬೇಕು ಎಂಬ ಗೊಂದಲದಲ್ಲಿ ಇರುವಂತಾಗಿದೆ.

ಬಸ್‍ನಿಲ್ದಾಣದ ಆವರಣಗೋಡೆ ಸುತ್ತಲೂ ಮೂತ್ರ ಮಾಡಿರುತ್ತಾರೆ. ಗುಟ್ಕಾ, ತಂಬಾಕು ಜಗಿದು ನಿಲ್ದಾಣದ ಮೂಲೆ, ಗೋಡೆಗಳಲ್ಲಿ ಉಗುಳುವುದು ಸಾಮಾನ್ಯ. ದುರ್ನಾತ ಮೂಗಿಗೆ ರಾಚುತ್ತದೆ. ಇರುವ ಮೂತ್ರಾಲಯದ ನಿರ್ವಹಣೆ ಇಲ್ಲ.

ಕುಡಿಯುವ ನೀರು ಇಲ್ಲ. ಪ್ರಯಾಣಿಕರು ನೀರು ಬೇಕಾದರೆ ಹೊಟೇಲ್‍ಗಳಿಗೆ ಹೋಗಬೇಕು. ಹೋಟೆಲ್‍ನಲ್ಲಿ ಚಹಾ ಇಲ್ಲವೇ ಉಪಹಾರ ಮಾಡಿದರೆ ಮಾತ್ರ ನೀರು ಸಿಗುತ್ತದೆ.ನಿಲ್ದಾಣದ ಶೇ 30 ಭಾಗವನ್ನು ವ್ಯಾಪಾರಿಗಳು ಉಪಯೋಗಿಸುತ್ತಾರೆ. ಮುಖ್ಯ ಪ್ರವೇಶದ್ವಾರದ ಸ್ಥಳದ ತುಂಬೆಲ್ಲ, ತರಕಾರಿ, ಹಣ್ಣು ವ್ಯಾಪಾರಿಗಳು ತುಂಬಿರುತ್ತಾರೆ.

ಆವರಣಗೋಡೆ ಹತ್ತಿ ಒಳಗಡೆ ಬೀದಿ ವ್ಯಾಪಾರ ನಡೆಯುತ್ತದೆ. ಬಸ್ ಒಳಗೆ ಪ್ರವೇಶದ ಎರಡೂ ಕಡೆ ವ್ಯಾಪಾರಿಗಳು ಕುಳಿತಿರುತ್ತಾರೆ. ಬಸ್‍ಗಳನ್ನು ಒಳಗೆ ತರಲು ಚಾಲಕರು ಪರದಾಡುವಂತಾಗಿದೆ. ಮುಖ್ಯ ಪ್ರವೇಶ ದ್ವಾರದ ಮುಂದೆ ಮತ್ತು ಕೆಂಭಾವಿ ಮಾರ್ಗದಲ್ಲಿ ದೊಡ್ಡ ಗುಂಡಿಗಳು ಬಿದ್ದು ವರ್ಷಗಳೆ ಗತಿಸಿವೆ. ಕೆಂಭಾವಿ ಮಾರ್ಗದ ಗುಂಡಿಯಂತೂ ವಾಹನಗಳು ಒಳಗೆ ಬೀಳುವಷ್ಟು ದೊಡ್ಡದಾಗಿದೆ.

ನಿಲ್ದಾಣ ಕಾಯಲು ಭದ್ರತಾ ಸಿಬ್ಬಂದಿ ಇಲ್ಲ. ಪ್ರಯಾಣಿಕರಿಗೆ ರಕ್ಷಣೆ ಇಲ್ಲದಂತಾಗಿದೆ. ರಾತ್ರಿ ಸಮಯದಲ್ಲಿ ಪ್ರಯಾಣಿಕರು ಬಸ್‌ಗಾಗಿ ಹೆದರುವಂತಾಗಿದೆ. ಅನೇಕ ಬಾರಿ ಕಳ್ಳತನ ನಡೆದಿವೆ. ರಾತ್ರಿ ಸಮಯದಲ್ಲಿ ಮಹಿಳಾ ಪ್ರಯಾಣಿಕರು ಬರದಂತಾಗಿದೆ.

ಕನಿಷ್ಠ ಮೂರು ಜನ ಸಂಚಾರಿ ನಿಯಂತ್ರಕರು ಇರಬೇಕು. ಕೇವಲ ಒಬ್ಬರು ಮಾತ್ರ ಕರ್ತವ್ಯದಲ್ಲಿದ್ದಾರೆ.

ಶೇಕಡಾ 25 ರಷ್ಟು ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿಲ್ಲ. ಮಲ್ಲಿಭಾವಿ, ರತ್ತಾಳ, ದೇವಿಕೇರಿ ಇತರ ಗ್ರಾಮಗಳು ಸಾರಿಗೆ ಬಸ್ ಕಂಡಿಲ್ಲ. ಖಾಸಗಿ ವಾಹನಗಳನ್ನೆ ಅಲ್ಲಿನ ಜನ ಅವಲಂಬಿಸಿದ್ದಾರೆ.ಗ್ರಾಮೀಣ ಪ್ರದೇಶ ಹೆಚ್ಚು ಹೊಂದಿರುವ ತಾಲ್ಲೂಕಿಗೆ ಹೆಚ್ಚಿನ ಬಸ್‍ಗಳ ಅಗತ್ಯವಿದೆ. ಘಟಕದಲ್ಲಿ ಕೇವಲ 83 ಬಸ್‍ಗಳು ಇವೆ. ಜಿಲ್ಲೆಯ ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ಈ ಘಟಕ್ಕೆ ನೀಡಿರುವ ಬಸ್‍ಗಳ ಸಂಖ್ಯೆ ಕಡಿಮೆ ಎಂಬ ಆರೋಪವಿದೆ.

ಇವುಗಳಲ್ಲಿ ಹಲವು ಅವಧಿ ಮುಗಿದ ಬಸ್‍ಗಳಾಗಿವೆ. ಇಲ್ಲಿ ಘಟ್ಟ ಪ್ರದೇಶ ಅಧಿಕ. ಅನೇಕ ಬಾರಿ ಹಳೆ ಬಸ್‍ಗಳು ಘಟ್ಟ ಹತ್ತಲು ಸಾಧ್ಯವಾಗದೆ ಹಿಮ್ಮುಖವಾಗಿ ಚಲಿಸಿದ ಘಟನೆಗಳು ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.