ಯಾದಗಿರಿ: ಎಲ್ಲ ಮಾರ್ಗಗಳಿಗೂ ಬಸ್ ಸೇವೆ ಇಲ್ಲದೆ ಪರದಾಡಿದ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧ ಪ್ರಯಾಣಿಕರು, ಬಸ್ ನಿರೀಕ್ಷೆಯಲ್ಲಿ ನಿಲ್ದಾಣದಲ್ಲಿ ನಿದ್ರೆಗೆ ಜಾರಿದ ಪ್ರಯಾಣಿಕ, ಸಿಟಿ ಬಸ್‌ಗಳಿಲ್ಲದೇ ತಲೆಯ ಮೇಲೆ ಮೂಟೆಗಳನ್ನು ಹೊತ್ತು ಸಾಗಿದ ವಲಸಿಗ ಕೂಲಿಕಾರರು, ಹೊಸ ಬಸ್ ನಿಲ್ದಾಣದಲ್ಲಿ ಆಟೊ, ಕ್ರೂಸರ್‌ನಂತಹ ಖಾಸಗಿ ವಾಹನಗಳ ದರ್ಬಾರ್...
ಇವು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಮುಷ್ಕರದಿಂದಾಗಿ ಮಂಗಳವಾರ ನಗರದಲ್ಲಿ ಕಂಡುಬಂದ ದೃಶ್ಯಗಳು.
ಕೆಕೆಆರ್‌ಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳಿಂದ ತುಂಬಿರುತ್ತಿದ್ದ ಹೊಸ ಮತ್ತು ಹಳೇ ಬಸ್ ನಿಲ್ದಾಣಗಳಲ್ಲಿ ಖಾಸಗಿ ವಾಹನಗಳು ದಾಂಗುಡಿ ಇಟ್ಟಿದ್ದವು. ಸರ್ಕಾರಿ ಬಸ್‌ಗಳು ನಿಲ್ಲಬೇಕಿದ್ದ ಜಾಗದಲ್ಲಿ ಕ್ರೂಸರ್‌ಗಳು ಸಾಲುಗಟ್ಟಿ ನಿಂತಿದ್ದವು. ಕ್ರೂಸರ್ ಚಾಲಕರು, ಗುರುಮಠಕಲ್, ಸೈದಾಪುರ, ಸುರಪುರ... ಎಂದು ಕೂಗುತ್ತಾ ಪ್ರಯಾಣಿಕರನ್ನು ಕರೆಯುತ್ತಿದ್ದರು.
ಮುಷ್ಕರದ ಬಗ್ಗೆ ಗೊತ್ತಿಲ್ಲದೆ ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್‌ಗೆ ಗುಳೆ ಹೋಗಿ ಬಂದಿದ್ದ ಕೂಲಿ ಕಾರ್ಮಿಕರು ತಮ್ಮ ಸಾಮಾನು, ಸರಂಜಾಮುಗಳೊಂದಿಗೆ ನಸುಕಿನಲ್ಲಿ ನಿಲ್ದಾಣದಲ್ಲಿ ಇಳಿದರು. ಬಸ್‌ಗಳಿಗಾಗಿ ಗಂಟೆಗಟ್ಟಲೆ ಕಾದು ಸುಸ್ತಾದರು. ಕೊನೆಗೆ ಕ್ರೂಸರ್‌ಗಳನ್ನು ಹತ್ತಿ, ಸಾಮಾನುಗಳನ್ನು ಕ್ರೂಸರ್ ಮೇಲೆ ಕಟ್ಟಿಟ್ಟು ಸ್ವಗ್ರಾಮಗಳತ್ತ ತೆರಳಿದರು.
ನಿಲ್ದಾಣದಲ್ಲಿ ಕ್ರೂಸರ್‌ಗಳು ಸಾಲುಗಟ್ಟಿ ನಿಂತಿದ್ದರೂ ಎಂದಿಗಿಂತ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಮುಷ್ಕರದ ಬಗ್ಗೆ ಮಾಹಿತಿ ಇದ್ದವರು ಪ್ರಯಾಣವನ್ನು ಮುಂದೂಡಿದ್ದರು. ಆದರೆ, ಶಾಲಾ– ಕಾಲೇಜಿನ ಮಕ್ಕಳು ಎಂದಿನಂತೆ ತರಗತಿಗಳಿಗೆ ತೆರಳುವ ನಿರೀಕ್ಷೆಯಲ್ಲಿ ಬಂದಿದ್ದರು. ಬಸ್‌ಗಳು ಬಾರದೆ ಇದ್ದಾಗ ಕೆಲವು ವಿದ್ಯಾರ್ಥಿಗಳು ನಡೆದುಕೊಂಡೇ ಹೋದರು. ಮತ್ತೆ ಕೆಲವರು ಬೈಕ್‌ಗಳಲ್ಲಿ ಲಿಫ್ಟ್ ಪಡೆದರು. ಅವರಲ್ಲಿ ಕೆಲವರು ಮನೆಗೆ ವಾಪಸ್ ಹೋದ ದೃಶ್ಯ ಸಾಮಾನ್ಯವಾಗಿತ್ತು.
ಕ್ರೂಸರ್, ಟಂಟಂ, ಆಟೊರಿಕ್ಷಾ ಚಾಲಕರು ಮುಷ್ಕರದ ಲಾಭ ಪಡೆದುಕೊಳ್ಳಲು ಯತ್ನಿಸಿದರು. ನಿಗದಿತ ಹಣಕ್ಕಿಂತ ಹೆಚ್ಚಿನ ಹಣಕ್ಕೆ ಬೇಡಿಕೆ ಇರಿಸಿ ಪ್ರಯಾಣಿಕರನ್ನು ಕರೆದ್ಯೊಯುವುದು ಸಾಮಾನ್ಯವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಬಸ್ ನಿಲ್ದಾಣಗಳ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪ್ರಮುಖ ವೃತ್ತಗಳು, ಸಾರ್ವಜನಿಕ ಸ್ಥಳಗಳಲ್ಲಿಯೂ ಪೊಲೀಸರ ನಿಯೋಜನೆ ಮಾಡಲಾಗಿತ್ತು.
‘ಖಾಸಗಿ ವಾಹನಗಳ ವ್ಯವಸ್ಥೆ’
‘ಖಾಸಗಿ ವಾಹನಗಳ ಸಂಘಟನೆಗಳ ಜೊತೆಗೆ ಮಾತುಕತೆ ನಡೆಸಿ ಪ್ರಯಾಣಿಕರಿಗೆ ಅನಾನುಕೂಲ ಆಗದಂತೆ ಪರ್ಯಾಯ ವಾಹನಗಳ ವ್ಯವಸ್ಥೆಯನ್ನು ಮಾಡಿದ್ದೇವೆ’ ಎಂದು ಸಾರಿಗೆ ಅಧಿಕಾರಿ ಮಿಲ್ಲಿಂದ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಶಾಲಾ ವಾಹನಗಳು ಗ್ರಾಮೀಣ ಭಾಗದಿಂದ ಬಂದ ಬಸ್‌ಗಳನ್ನು ನಿಲ್ದಾಣದಲ್ಲಿ ನಿಲ್ಲಿಸುವ ಬದಲು ಹತ್ತಿರದ ಸ್ಥಳಗಳಿಗೆ ಕಳುಹಿಸಿದ್ದೇವೆ. ದುಪ್ಪಟ್ಟು ದರ ತೆಗೆದುಕೊಳ್ಳದಂತೆ ಎಚ್ಚರಿಕೆಕೊಟ್ಟು ಕಂಟ್ರೋಲ್ ರೂಮ್ ಸಹ ತೆರೆಯಲಾಗಿತ್ತು’ ಎಂದರು.
ಸಂಜೆ ವೇಳೆ ಕರ್ತವ್ಯಕ್ಕೆ ಹಾಜರಿ
ಹೈಕೋರ್ಟ್ ಎಚ್ಚರಿಕೆ ನೀಡುತ್ತಿದ್ದಂತೆ ಮುಷ್ಕರ ನಿರತರು ಸಂಜೆ ವೇಳೆಗೆ ಕರ್ತವ್ಯಕ್ಕೆ ಹಾಜರಾದರು. ದೂರದ ಪ್ರಯಾಣ ನೈಟ್ ಹಾಲ್ಟ್ ಬಸ್‌ಗಳ ಚಾಲಕ ಮತ್ತು ನಿರ್ವಾಹಕರನ್ನು ಮಾತ್ರವೇ ಕೆಲಸಕ್ಕೆ ನಿಯೋಜಿಸಿಕೊಂಡು ಉಳಿದವರನ್ನು ವಾಪಸ್ ಕಳಿಸಿದ್ದರು. ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಕಲ್ಯಾಣ ಕರ್ನಾಟಕ ಸಾರಿಗೆ ಒಕ್ಕೂಟದ ಯಾದಗಿರಿ ಮುಖಂಡ ದೇವಿಂದ್ರಪ್ಪ ಮ್ಯಾಗೇರಿ ‘ಕೋರ್ಟ್ ಸೂಚನೆಯಂತೆ ಎಲ್ಲಾ ನೌಕರರು ಕರ್ತವ್ಯಕ್ಕೆ ಮರಳಿದ್ದಾರೆ. ಅಗತ್ಯವಿದಷ್ಟು ನೌಕರರನ್ನು ನಿಯೋಜಿಸಿಕೊಂಡು ಬುಧವಾರ ಕೆಲಸಕ್ಕೆ ಬರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಮುಷ್ಕರ ಎರಡು ದಿನ ಮುಂದೂಡಿಕೆ ಆಗಿದ್ದು ರಾಜ್ಯ ಮುಖಂಡರು ತೆಗೆದುಕೊಳ್ಳುವ ನಿರ್ಣಯ ನೋಡಿಕೊಂಡು ಮುಂದುವರಿಯುತ್ತೇವೆ. ಈಗ ಕೆಲಸಕ್ಕೆ ಮರಳುತ್ತಿದ್ದೇವೆ’ ಎಂದರು.
‘ನೌಕರರಿಗೆ ಪ್ರತ್ಯೇಕ ನೋಟಿಸ್’
‘ಸೇವಾ ನಿಯಮಗಳನ್ನು ಉಲ್ಲಂಘಿಸಿ ಮುಷ್ಕರದಲ್ಲಿ ಪಾಲ್ಗೊಂಡವರಿಗೆ ನೋಟಿಸ್ ಕೊಡಲಾಗುವುದು’ ಎಂದು ಕೆಕೆಆರ್‌ಟಿಸಿ ಯಾದಗಿರಿ ಜಿಲ್ಲಾ ಡಿಸಿ ಸುನಿಲ್ ಕುಮಾರ್ ಚಂದರಗಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕೋರ್ಟ್ ಆದೇಶಕ್ಕೆ ತಲೆಬಾಗಿ ಸಂಜೆ ವೇಳೆಗೆ ಬಹುತೇಕ ಸಿಬ್ಬಂದಿ ಕೆಲಸಕ್ಕೆ ಬಂದಿದ್ದರು. ಕೆಲವರು ಬಂದಿರಲಿಲ್ಲ. ಇಡೀ ದಿನ ಮುಷ್ಕರದಲ್ಲಿ ಪಾಲ್ಗೊಂಡವರಿಗೆ ಹಾಗೂ ಸಂಜೆ ವೇಳೆಗೆ ಕೆಲಸಕ್ಕೆ ಹಾಜರಾಗಿ ವರದಿ ಮಾಡಿಕೊಂಡವರೆಗೆ ಪ್ರತ್ಯೇಕವಾಗಿ ನೋಟಿಸ್ ಕೊಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.