ADVERTISEMENT

ಮಾಂಸದಂಗಡಿ ಸ್ಥಳಾಂತರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 12:47 IST
Last Updated 11 ಅಕ್ಟೋಬರ್ 2022, 12:47 IST
ಕೆಂಭಾವಿಯ ವಾರ್ಡ್‌ ಸಂಖ್ಯೆ 12ರಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಮಾಂಸ ಮಾರಾಟ ಮಳಿಗೆಗಳನ್ನು ಸ್ಥಳಾಂತರ ಮಾಡಬೇಕು ಎಂದು ಪಟ್ಟಣದ ನಿವಾಸಿಗಳು ಮುಖ್ಯಾಧಿಕಾರಿ ಕಚೇರಿಯ ಸಿಬ್ಬಂದಿಗೆ ಮನವಿ ಸಲ್ಲಿಸಿದರು
ಕೆಂಭಾವಿಯ ವಾರ್ಡ್‌ ಸಂಖ್ಯೆ 12ರಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಮಾಂಸ ಮಾರಾಟ ಮಳಿಗೆಗಳನ್ನು ಸ್ಥಳಾಂತರ ಮಾಡಬೇಕು ಎಂದು ಪಟ್ಟಣದ ನಿವಾಸಿಗಳು ಮುಖ್ಯಾಧಿಕಾರಿ ಕಚೇರಿಯ ಸಿಬ್ಬಂದಿಗೆ ಮನವಿ ಸಲ್ಲಿಸಿದರು   

ಕೆಂಭಾವಿ: ಪಟ್ಟಣದ ವಾರ್ಡ್‌ ಸಂಖ್ಯೆ 12 ರಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಮಾಂಸ ಮಾರಾಟ ಮಳಿಗೆಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಬೇರಡೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ, ಪಟ್ಟಣದ ನಿವಾಸಿಗಳು ಇಲ್ಲಿನ ಮುಖ್ಯಾಧಿಕಾರಿ ಕಚೇರಿಯ ಸಿಬ್ಬಂದಿಗೆ ಮನವಿ ಸಲ್ಲಿಸಿದರು. ‌

‘ಅನೇಕ ದಿನಗಳಿಂದ ಇಲ್ಲಿ ಅನಧಿಕೃತವಾಗಿ ಮಾಂಸ ಮಾರಾಟ ಮಳಿಗೆಗಳನ್ನು ನಡೆಸಲಾಗುತ್ತಿದೆ. ಇದರಿಂದ ಓಣಿಯಲ್ಲಿ ಸಾರ್ವಜನಿಕರು ತಿರಗಾಡದಂತಾಗಿದೆ. ಇಲ್ಲಿ ಸ್ವಚ್ಛತೆ ಇಲ್ಲ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ’ ಎಂದರು.

ಮಾಂಸ ಮಾರಾಟ ಮಾಡುವ ವ್ಯಾಪಾರಸ್ಥರು ಎಲ್ಲೆಂದರಲ್ಲಿ ಪ್ರಾಣಿಗಳನ್ನು ಕಡಿಯುತ್ತಾರೆ. ಪ್ರಾಣಿಗಳ ರಕ್ತ ರಸ್ತೆ ಮೇಲೆ ಹರಿಯುತ್ತದೆ. ಅನುಪಯುಕ್ತ ವಸ್ತುಗಳನ್ನು ರಸ್ತೆ ಮಧ್ಯ ಭಾಗದಲ್ಲಿ ಬಿಸಾಕುವುದರಿಂದ ನೋಣಗಳು, ಸೊಳ್ಳೆಗಳ ಹಾವಳಿಯಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಇಲ್ಲಿ ವಾಸಿಸುತ್ತಿರುವ ಜನರಿಗೆ ಮಲೇರಿಯಾ, ಡೆಂಗಿ ಜ್ವರ ಬರುತ್ತಿರುತ್ತವೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಮಾಂಸ ಮಾರಾಟ ಮಾಡುವ ಅಂಗಡಿಗಳನ್ನು ಪಟ್ಟಣದ ಹೊರಗಡೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಅಲ್ಲದೇ ಕಡ್ಡಾಯವಾಗಿ ಪುರಸಭೆಯ ಅನುಮತಿ ಪಡೆದು ಅಂಗಡಿಯನ್ನು ತೆರೆಯುವಂತಾಗಬೇಕು. ಇಲ್ಲದಿದ್ದರೆ ಜನರೆಲ್ಲ ಸೇರಿ ಪುರಸಭೆ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಹಳ್ಳೆಪ್ಪ ಬಜಾರ, ತಿಪ್ಪಣ್ಣ ಟಣಕೆದಾರ, ಹಳ್ಳೆಪ್ಪ.ಎಸ್.ಕವಲ್ದಾರ, ದೇವು ಕವಲ್ದಾರ, ನಂದಪ್ಪ ದೊರಿ, ಶಿವು ಮಲ್ಲಿಬಾವಿ, ಪ್ರಭು, ಪ್ರಕಾಶ, ಮಲ್ಲು ಕವಲ್ದಾರ, ಮೌನೇಶ ಸೇರಿದಂತೆ ಅನೇಕರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.