ADVERTISEMENT

ಜಿ.ಪಂ. ಸದಸ್ಯ ಸೇರಿ 9 ಜನರ ವಿರುದ್ಧ ಕೇಸ್‌ ದಾಖಲು

ಧಾರು ರೇವುನಾಯ್ಕ ರಾಠೋಡ ಅಪಹರಣ ಪ್ರಕರಣ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 17:05 IST
Last Updated 2 ಫೆಬ್ರುವರಿ 2021, 17:05 IST

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಹೋತಪೇಠ ಮೇಲಿನ ತಾಂಡಾ ನಿವಾಸಿ ಧಾರು ರೇವುನಾಯ್ಕ ರಾಠೋಡ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಸದಸ್ಯ ಕಿಶನ್‌ ರಾಠೋಡ್‌ ಸೇರಿ 9 ಜನರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜು ತಮ್ಮ ತಂದೆ ಧಾರು ರಾಠೋಡ ಅಪಹರಣವಾಗಿದ್ದಾರೆ ಎಂದು ದೂರು ನೀಡಿದ್ದರು. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಕಲಂ 365,149 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಧಾರು ರಾಠೋಡ ಜನವರಿ 30ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಸರ್ಕಾರಿ ಆಸ್ಪತ್ರೆಗೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿದ್ದಾರೆ. ಮಧ್ಯಾಹ್ನ 12.10 ನಿಮಿಷಕ್ಕೆ ನನಗೆ ಕರೆ ಮಾಡಿ ಶಹಾಪುರ ನಗರದ ಕುಂಬಾರ ಓಣಿಯಲ್ಲಿ 10 ಜನ ಕ್ರೂಸರ್ ವಾಹನದಲ್ಲಿ ನನ್ನನ್ನು ಅಪಹರಿಸಿದ್ದಾರೆ ಎಂದು ಅಪರಹರಣಕ್ಕೊಳಗಾದ ಧಾರು ರಾಠೋಡ ಪುತ್ರ ರಾಜು ದೂರು ನೀಡಿದ್ದರು.

ADVERTISEMENT

ಪ್ರಕರಣ ದಾಖಲಿಸಲು ಮೊದಲಿಗೆ ಭೀಮರಾಯನಗುಡಿ ಪೊಲೀಸ್‌ ಠಾಣೆಗೆ ತೆರಳಿದ್ದಾರೆ. ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಅಲ್ಲಿಂದ ಶಹಾಪುರ ನಗರ ಠಾಣೆಗೆ ಬಂದು ದೂರು ನೀಡಿದ್ದಾರೆ.

‘ಅಪಹರಣದ ಬಗ್ಗೆ ಸೂಕ್ತ ತನಿಖೆ ಮಾಡಿ ನಮ್ಮ ತಂದೆ ಜೀವ ಹಾನಿಯಾಗದಂತೆ ನೋಡಿಕೊಂಡು ಅಪಹರಣ ಮಾಡಿರುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು’ ಎಂದು ರಾಜು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ ಸೋನವಣೆ ಪ್ರತಿಕ್ರಿಯಿಸಿ, ಧಾರು ರಾಠೋಡ ಅಪಹರಣ ಕುರಿತಂತೆ ಪ್ರಕರಣ ದಾಖಲಿಸಲಾಗಿದೆ. ತನಿಖೆಗೆ ಪಿಎಸ್‌ಐ ಚಂದ್ರಕಾಂತ ಅವರನ್ನು ನೇಮಿಸಲಾಗಿದೆ. ಪ್ರಕರಣ ಕುರಿತು ತನಿಖೆ ನಡೆಯಲಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.