
ಯಾದಗಿರಿ: ಮಕ್ಕಳ ಹಕ್ಕುಗಳ ರಕ್ಷಣೆ, ಪೋಕ್ಸೊ, ಬಾಲಗರ್ಭಿಣಿ ಪ್ರಕರಣ, ಬಾಲ್ಯವಿವಾಹ ತಡೆ, ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕುರಿತು ತಳಮಟ್ಟದಲ್ಲಿ ಜಾಗೃತಿ ಮೂಡಿಸುವಲ್ಲಿ ಮುಂಚೂಣಿಯಲ್ಲಿ ಇರುವ ಇಲಾಖೆಗೆ ಸಂಬಂಧಿಸಿದ ಕೆಲವು ಇಲಾಖೆಗಳ ಕೆಳ ಹಂತದಲ್ಲಿ ಸಮರ್ಪಕವಾಗಿ ಸಹಕಾರ ಸಿಗುತ್ತಿಲ್ಲ ಎಂಬ ಕೂಗು ಕೇಳಿಬಂದಿದೆ.
ಶಹಾಪುರ ನಗರದ ವಸತಿ ಶಾಲೆಯೊಂದರಲ್ಲಿ 17 ವರ್ಷದ 9ನೇ ತರಗತಿ ವಿದ್ಯಾರ್ಥಿನಿ ಶಾಲೆ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದ ಪ್ರಕರಣವು ರಾಜ್ಯ ಮಟ್ಟದಲ್ಲಿ ಚರ್ಚೆಯಾಗಿತ್ತು. ಈ ಬಗ್ಗೆ ಸೆಪ್ಟೆಂಬರ್ ತಿಂಗಳಲ್ಲಿ ಕರ್ನಾಟಕ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸಭೆಯಲ್ಲಿಯೂ ಪ್ರಸ್ತಾಪವಾಗಿತ್ತು.
ಸಮಿತಿಯು ರಾಜ್ಯದ ಪ್ರತಿಯೊಂದು ಶಾಲೆ ಮತ್ತು ವಸತಿ ಶಾಲೆಗಳಲ್ಲಿ ಜಾಗೃತಿ ಮೂಡಿಸುವಂತೆ ಸೂಚನೆ ಕೊಟ್ಟಿತ್ತು. ಅದರ ಜೊತೆಗೆ ಸಂಬಂಧಪಟ್ಟ ಇತರೆ ಇಲಾಖೆಗಳು ತಾವು ನಿಗಾವಹಿಸಬೇಕಾದ ಆದ್ಯತೆಗಳ ಅಂಶಗಳನ್ನು ಉಲ್ಲೇಖಿಸಿತ್ತು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ 25, ಸಮಾಜ ಕಲ್ಯಾಣ ಇಲಾಖೆಗೆ 26, ಅಲ್ಪಸಂಖ್ಯಾತರ ಇಲಾಖೆಗೆ 24, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 27, ಒಳಾಡಳಿತ ಇಲಾಖೆಗೆ 9, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 7, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ 11 ಆದ್ಯತೆ ಅಂಶಗಳನ್ನು ಕೊಟ್ಟಿದೆ.
ನಿಷೇಧ ಅಧಿಕಾರಿಗಳು ನಿಯಮಾನುಸಾರ ವಿಫಲರಾದಲ್ಲಿ ಅಥವಾ ನಿರ್ಲಕ್ಷ್ಯ ತೋರಿದಲ್ಲಿ ಬಿಎನ್‌ಎಸ್ 2023 ಸೆಕ್ಷನ್ 199 (ಸಿ) ಅನ್ವಯ ಕ್ರಮ ಜರುಗಿಸಿ, ಶಿಸ್ತು ಕ್ರಮಕೈಗೊಳ್ಳಲು ಶಿಫಾರಸು ಸಹ ಮಾಡಿದೆ. ಆದರೆ, ಯಾರ ವಿರುದ್ಧವೂ ಕ್ರಮದ ಶಿಫಾರಸು ಬಂದಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಸಮಿತಿಯ ಸೂಚನೆಯಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನ ಇಲಾಖೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಕೆಲ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳದೆ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇದರಿಂದ ಪರಿಣಾಮಕಾರಿ ಅನುಷ್ಠಾನದಲ್ಲಿ ಹಿನ್ನಡೆಯಾಗುತ್ತಿದೆ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
‘ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಿದಾಗ ಶಿಕ್ಷಣ, ಪೊಲೀಸರಿಂದ ಸ್ಪಂದನೆ ಸಿಗುತ್ತಿದೆ. ಆದರೆ, ಪಿಡಿಒ, ಕಂದಾಯ ಸೇರಿ ಇತರೆ ಕೆಲ ಇಲಾಖೆಯವರು ಪಾಲ್ಗೊಳ್ಳುವುದಿಲ್ಲ. ‘ನಮಗೆ ಮೀಟಿಂಗ್ ಇದೆ, ಸಿಬ್ಬಂದಿ ಕೊರತೆ ಇದೆ ಬರಲು ಆಗುವುದಿಲ್ಲ’ ಎನ್ನುತ್ತಾರೆ. ಗ್ರಾಮ ಪಂಚಾಯಿತಿಯವರು ಆಯೋಜಿಸಬೇಕಾದ ಗ್ರಾಮ ಸಭೆಯನ್ನು ನಾವೇ ಆಯೋಜಿಸಿದ್ದರೂ ಪಂಚಾಯಿತಿಯವರು ನಮ್ಮತ್ತ ತಿರುಗಿಯೂ ನೋಡುವುದಿಲ್ಲ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಮಕ್ಕಳ ರಕ್ಷಣಾ ಘಟಕದ ಕ್ಷೇತ್ರ ಸಿಬ್ಬಂದಿಯೊಬ್ಬರು.
‘ಜಿಲ್ಲಾ ಮಟ್ಟದಲ್ಲಿ ಸಭೆ ನಡೆದಾಗ ಎಲ್ಲಾ ಇಲಾಖೆಯವರು ಬರುತ್ತಾರೆ. ಸಭೆಯಲ್ಲಿ ಪ್ರಸ್ತಾಪ ಆಗಿದ್ದನ್ನು ತಾಲ್ಲೂಕು ಮಟ್ಟದಿಂದ ಸುತ್ತೋಲೆ ಹೊರಡಿಸಿ ಕಳುಹಿಸುತ್ತಾರೆ. ಕೆಳ ಹಂತದಲ್ಲಿ ಎಷ್ಟರಮಟ್ಟಿಗೆ ಕಾರ್ಯರೂಪದಲ್ಲಿದೆ ಎಂಬುದನ್ನು ಪರಿಶೀಲಿಸುತ್ತಿಲ್ಲ’ ಎಂದರು.
ಮಕ್ಕಳ ಹಕ್ಕು ರಕ್ಷಣೆ ಜಾಗೃತಿ ಕಾರ್ಯಕ್ರಮಗಳಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಿರ್ಲಕ್ಷವಹಿಸಿದ್ದಲ್ಲಿ ಶಿಸ್ತು ಕ್ರಮಕ್ಕೆ ಮೇಲಧಿಕಾರಿಗಳಿಗೆ ಆಯೋಗವು ಶಿಫಾರಸು ಮಾಡಲಿದೆಶಶಿಧರ ಕೋಸಂಬೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ರಾಜ್ಯ ಅಧ್ಯಕ್ಷ
ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಹಾಸ್ಟೆಲ್‌ಗಳಲ್ಲಿಯೂ ನಡೆಸುವಂತೆ ಹೇಳಲಾಗಿದೆ. ಎಲ್ಲಾ ಇಲಾಖೆಗಳು ಸಹಕಾರ ಕೊಡುವಂತೆಯೂ ಸೂಚಿಸಲಾಗಿದೆರಮೇಶ ಕೋಲಾರ ಹೆಚ್ಚುವರಿ ಜಿಲ್ಲಾಧಿಕಾರಿ
ಹೆಚ್ಚುವರಿ ಜಿಲ್ಲಾಧಿಕಾರಿ ಈ ಸಂಬಂಧ ಸಭೆಯನ್ನು ನಡೆಸಿ ಪ್ರತಿಯೊಂದು ಇಲಾಖೆಗೆ ಜವಾಬ್ದಾರಿಗಳನ್ನು ಕೊಟ್ಟಿದ್ದಾರೆ. ವಿಫಲವಾದರೆ ನೋಟಿಸ್ ಕೊಡುವುದಾಗಿ ಎಚ್ಚರಿಸಿದ್ದಾರೆನಿರ್ಮಲಾ ಎಚ್.ಸುರಪುರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ
ಸಮಿತಿಯ ಪ್ರಮುಖ ಆದ್ಯತಾ ಅಂಶಗಳು
ರಾಜ್ಯ ಮಕ್ಕಳ ರಕ್ಷಣಾ ನೀತಿ 2016 ಪರಿಷ್ಕೃತ 2023ರ ಅನ್ವಯ ಅನುಷ್ಠಾನಕ್ಕೆ ತರುವುದು ಪ್ರತಿ ಶಿಕ್ಷಣ ಸಂಸ್ಥೆಗಳಲ್ಲಿ ಪೋಷಕರು ಮಕ್ಕಳು ಮತ್ತು ಶಿಕ್ಷಕರನ್ನು ಒಳಗೊಂಡಿರುವ ‘ಮಕ್ಕಳ ರಕ್ಷಣಾ ಸಮಿತಿ’ ರಚಿಸಿ 3 ತಿಂಗಳಿಗೊಮ್ಮೆ ಸಭೆ ನಡೆಸುವುದು. ಶಾಲೆಗಳಲ್ಲಿ ಬಾಲಕಿಯು ಮಾಹಿತಿ ನೀಡಿದೆ 3 ದಿನಗಳಿಗೂ ಹೆಚ್ಚು ಗೈರಾದರೆ ಬಾಲಕಿಯ ಮಾಹಿತಿ ಮುಖ್ಯಶಿಕ್ಷಕರು ಪಂಚಾಯಿತಿ ಮಕ್ಕಳ ಸಹಾಯವಾಣಿ 1098ಗೆ ನೀಡುವುದು ಎಲ್ಲ ಇಲಾಖೆಗಳ ಅಧಿಕಾರಿಗಳು ನಿಯಮಿತವಾಗಿ ಶಾಲೆ ವಸತಿ ಶಾಲೆಗಳಿಗೆ ಭೇಟಿ ನೀಡಿ ಕುಂದುಕೊರತೆ ಆಲಿಸಿ ಇತ್ಯರ್ಥಪಡಿಸುವುದು ಎಲ್ಲಾ ಶಾಲಾ– ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ತಾತ್ಕಾಲಿಕ/ ಗುತ್ತಿಗೆ ಆಧಾರದ ಸಿಬ್ಬಂದಿ ಸೇರಿದಂತೆ ಶಾಲೆಯಲ್ಲಿ ಮಕ್ಕಳೊಂದಿಗೆ ಕೆಲಸ ಮಾಡುವ ಎಲ್ಲ ಸಿಬ್ಬಂದಿಯ ಹಿನ್ನೆಲೆಯನ್ನು ಪೊಲೀಸರು ಪರಿಶೀಲಿಸಿ ಸುರಕ್ಷತೆ ಖಚಿತಪಡಿಸುವುದು ಬಾಲಕಿಯರ ವಸತಿ ಶಾಲೆಗಳಲ್ಲಿ ದೀರ್ಘವಾದಿ ರಜೆ ಮತ್ತು ಬೇಸಿಗೆ ರಜೆ ಮುಗಿಸಿ ನಿಲಯಕ್ಕೆ ಹಾಜರಾದ ಸಂದರ್ಭದಲ್ಲಿ ಸ್ತ್ರೀರೋಗ ತಜ್ಞರಿಂದ ಕಡ್ಡಾಯವಾಗಿ ಆರೋಗ್ಯ ತಪಸಾಣೆ ಮಾಡಿ ದಾಖಲೆಗಳನ್ನೂ ನಿರ್ವಹಿಸುವುದು ಬೆಳಿಗ್ಗೆ ಮತ್ತು ರಾತ್ರಿ ಪಾಳಿಯಲ್ಲಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಪೊಲೀಸ್ ಇಲಾಖೆಯಿಂದ ಗಸ್ತು ಕೈಗೊಳ್ಳುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.