ವಡಗೇರಾ: ಕಳೆದ ಎರಡು ಮೂರು ದಿನಗಳಿಂದ ಬೀಸುತ್ತಿರುವ ಶೀತಗಾಳಿ ಹಾಗೂ ಕೊರೆಯುವ ಚಳಿಯಇಬ್ಬನಿಯು ಬಿಳಿಜೋಳದ ಬೆಳೆಗೆ ವರವಾಗಿ ಪರಿಣಮಿಸಿದೆ.
ತಾಲ್ಲೂಕಿನ ವ್ಯಾಪ್ತಿಯಲ್ಲಿ 2,145 ಹೆಕ್ಟೇರ್ ಪ್ರದೇಶದಲ್ಲಿ ಬಿಳಿಜೋಳವನ್ನು ರೈತರು ಬಿತ್ತನೆ ಮಾಡಿದ್ದಾರೆ. ಹಿಂಗಾರು ಹಂಗಾಮಿನ ಬಿಳಿಜೋಳ ಬಿತ್ತನೆ ಮಾಡಿದ ರೈತರ ಮೊಗದಲ್ಲಿ ಈಗ ಮಂದಹಾಸ ಮೂಡಿದೆ.
ಯಾವುದೇ ರಾಸಾಯನಿಕ ಗೊಬ್ಬರವಿಲ್ಲದೇ ಹಾಗೂ ಮಳೆಯ ನಿರೀಕ್ಷೆಯಿಲ್ಲದೇ ಜೋಳ ಕೇವಲ ಚಳಿ ಮತ್ತು ಇಬ್ಬನಿಗೆ ಬೆಳೆಯುತ್ತದೆ. ಕಳೆದ ಎರಡು ಮೂರು ದಿನಗಳಿಂದ ಬೀಸುತ್ತಿರುವ ಶೀತಗಾಳಿ ಹಾಗೂ ಚಳಿಯು ಬಿಳಿಜೋಳದ ಇಳುವರಿ ಹೆಚ್ಚಳಕ್ಕೆ ಸಹಕಾರಿಯಾಗಿ ಪರಿಣಮಿಸಿದೆ. ಈಗಾಗಲೇ ಜೋಳ ಬೆಳೆ ಹುಲುಸಾಗಿ ಬೆಳೆದಿದೆ. ಇನ್ನೂ ಒಂದೂವರೆ ತಿಂಗಳ ಹೊತ್ತಿಗೆ ಜೋಳ ತೆನೆ ಕಟ್ಟುವ ಹಂತಕ್ಕೆ ಬರಲಿದೆ ಎಂದು ರೈತರು ಹೇಳುತ್ತಾರೆ.
ಈ ಭಾಗದ (ಕಲ್ಯಾಣ ಕನಾರ್ಟಕದ) ಜನರು ಬಿಳಿ ಜೋಳದ ರೊಟ್ಟಿಯನ್ನು ಹೆಚ್ಚಾಗಿ ಊಟ ಮಾಡುವುದರಿಂದ ಹಾಗೂ ಜಾನುವಾರುಗಳಿಗೆ ಜೋಳದ ಕಣಕಿ ಬೇಕಾಗಿರುವುದರಿಂದ ಬಹಳಷ್ಟು ರೈತರು ತಮ್ಮ ಜಮೀನುಗಳಲ್ಲಿ ಬೆಲೆ ಕಡಿಮೆ ಇದ್ದರೂ ಬಿಳಿ ಜೋಳವನ್ನು ಬೆಳೆಯುತ್ತಾರೆ.
ಬಂಪರ್ ಬೆಲೆ: ಕಳೆದ ವರ್ಷ ಕ್ವಿಂಟಲ್ ಬಿಳಿಜೋಳವು ಸುಮಾರು ₹ 5,500 ರಿಂದ ₹ 6,000ಕ್ಕೆ ಮಾರಾಟವಾಗಿತ್ತು. ಬಿಳಿಜೋಳವನ್ನು ಬೆಳೆದ ರೈತರಿಗೆ ಕೈ ತುಂಬಾ ಹಣ ಬಂದಿತ್ತು. ಆದರೆ ಬಿಳಿ ಜೋಳ ಪ್ರಸ್ತುತ ಕ್ವಿಂಟಲ್‌ಗೆ ₹ 3,500 ರಿಂದ ₹ 4,000ಕ್ಕೆ ಮಾರಾಟವಾಗುತ್ತಿದೆ.
ಕಳೆದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜಮೀನಿನಲ್ಲಿ ನೀರು ನಿಂತು, ತೇವಾಂಶ ಹೆಚ್ಚಾದ ಕಾರಣ ಜೋಳ ಬಿತ್ತನೆ ವಿಳಂಬವಾಗಿತ್ತು. ಕೇವಲ ನಾಲ್ಕೂವರೆ ತಿಂಗಳಲ್ಲಿ ಬರುವ ಬಿಳಿ ಜೋಳ ಈ ಭಾಗದ ರೈತರ ಹಾಗೂ ಜನರ ಪಾಲಿಗೆ ಅಮೃತವರ್ಷಿಣಿಯಾಗಿದೆ.
Quote - ಶೀತಗಾಳಿಯಿಂದ ಜೋಳದ ಬೆಳೆಯಲ್ಲಿ ಕಳೆ ಬಂದಿದೆ. ಬಿಳಿಜೋಳಕ್ಕೆ ತಂಪಾದ ಗಾಳಿ ಬೇಕು. ಆದರೆ ಇಬ್ಬನಿ ಹೆಚ್ಚಾಗಿ ಬಿದ್ದರೆ ಪರಾಗಸ್ಪರ್ಶವಾಗುತ್ತದೆ. ಇದರಿಂದ ತೆನೆಗಳಲ್ಲಿ ಕಾಳುಗಳು ಕಡಿಮೆಯಾಗುತ್ತವೆ. ಗಣಪತಿ ಕೃಷಿ ಅಧಿಕಾರಿ ವಡಗೇರಾ
Quote - ತಣ್ಣನೆಯ ಗಾಳಿ ಬೀಸುತ್ತಿರುವುದರಿಂದ ಬಿಳಿ ಜೋಳಕ್ಕೆ ಅನುಕೂಲವಾಗಿದೆ. ಇದರಿಂದ ಇಳುವರಿಯು ಹೆಚ್ಚಾಗಿ ತೆನೆಗಳು ದಪ್ಪವಾಗುತ್ತವೆ ಶಿವಕುಮಾರ ಕೊಂಕಲ್ ಪ್ರಗತಿಪರ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.