ADVERTISEMENT

ಚಿಂತನಹಳ್ಳಿ: ಶಾಲಾ ಮೇಲ್ಛಾವಣಿಯ ಸಿಮೆಂಟ್ ಪದರು ಕುಸಿತ

ಆರು ತಿಂಗಳ ಹಿಂದೆ ಉದ್ಘಾಟನೆಗೊಂಡಿದ್ದ ಕಟ್ಟಡ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 15:47 IST
Last Updated 21 ಸೆಪ್ಟೆಂಬರ್ 2024, 15:47 IST
ಗುರುಮಠಕಲ್ ತಾಲ್ಲೂಕಿನ ಚಿಂತನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಳೆಯ ನೂತನ ಕಟ್ಟಡದ ಮೇಲ್ಛಾವಣಿಯ ಪದರು ಕುಸಿದಿರುವುದು
ಗುರುಮಠಕಲ್ ತಾಲ್ಲೂಕಿನ ಚಿಂತನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಳೆಯ ನೂತನ ಕಟ್ಟಡದ ಮೇಲ್ಛಾವಣಿಯ ಪದರು ಕುಸಿದಿರುವುದು   

ಗುರುಮಠಕಲ್: ತಾಲ್ಲೂಕಿನ ಚಿಂತನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹೊಸ ಕೋಣೆಯ ಮೇಲ್ಛಾವಣಿಯ ಸಿಮೆಂಟ್ ಪದರು  ಕುಸಿದಿದ್ದು, ಕೆಲ ಪೀಠೋಪಕರಣ ಮತ್ತು ವಿಜ್ಞಾನ ಸಾಮಗ್ರಿಗೆ ಹಾನಿಯಾಗಿದೆ. 

‘ನಮ್ಮೂರಿನ ಶಾಲೆಯ ಮೊದಲ ಮಹಡಿಯ ಈ ಹೊಸ ಕೋಣೆ 2023ರ ನವೆಂಬರ್ ತಿಂಗಳಲ್ಲಿ ಉದ್ಘಾಟನೆಯಾಗಿದೆ. ಈಗ ಒಂದು ವರ್ಷದ ಅವಧಿಯೊಳಗೆ ಮೇಲ್ಛಾವಣಿಯ ಪ್ಲಾಸ್ಟರಿಂಗ್ ಸಿಮೆಂಟ್ ಪದರವು ಕುಸಿಯುತ್ತಿದೆ. ಕೋಣೆಯನ್ನು ವಿಜ್ಞಾನ ಪ್ರಯೋಗಾಲಯವಾಗಿ ಬಳಕೆ ಮಾಡುತ್ತಿದ್ದಾರೆ. ತರಗತಿ ಕೋಣೆಯಾಗಿದ್ದರೆ ಮಕ್ಕಳಿಗೆ ಅಪಾಯವಾಗುತ್ತಿತ್ತು’ ಎಂದು ಪಾಲಕರು ಆತಂಕ ವ್ಯಕ್ತಪಡಿಸಿದರು.

‘ಈ ಘಟನೆಯನ್ನು ಮೇಲಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಜತೆಗೆ ಕೋಣೆಗಳ ನಿರ್ಮಾಣದ ಗುತ್ತಿಗೆ ಪಡೆದಿದ್ದ ಸಂಸ್ಥೆಯ ವಿರುದ್ಧವೂ ಸೂಕ್ತ ಕಾನೂನು ಕ್ರಮ ವಹಿಸಲಿ’ ಎಂದು ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ ಗದ್ದಗಿ ಆಗ್ರಹಿಸಿದ್ದಾರೆ.

ADVERTISEMENT

‘ಗುರುವಾರ (ಸೆ.19) ಮಧ್ಯಾಹ್ನದ ವೇಳೆ ಮೇಲ್ಛಾವಣಿಯ ಸಿಮೆಂಟ್ ಪದರ ಕುಸಿದು ಬಿದ್ದಿದೆ. ಪ್ರಯೋಗಾಲಯದ ಕೋಣೆಯಾಗಿದ್ದರಿಂದ ವಿದ್ಯಾರ್ಥಿಗಳು ಇರಲಿಲ್ಲ. ಬಿಆರ್‌ಸಿ, ಸಿಆರ್‌ಸಿ, ಪಿಡಿಒ ಸೇರಿ ಅಧಿಕಾರಿಗಳು ಪರಿಶೀಲಿಸಿದ್ದಾರೆ ಎಂದು ಮುಖ್ಯಶಿಕ್ಷಕ ಪ್ರಕಾಶ ತಿಳಿಸಿದರು.

ನಿರ್ಮಿತಿ ಕೇಂದ್ರದವರು ಈ ಕೋಣೆಯನ್ನು ನಿರ್ಮಿಸಿ ಒಂದು ವರ್ಷವೂ ಕಳೆದಿಲ್ಲ. ಹತ್ತೇ ತಿಂಗಳಲ್ಲಿ ಮೇಲ್ಛಾವಣಿಯ ಸಿಮೆಂಟ್ ಕುಸಿದಿರುವುದು ಕಾಮಗಾರಿ ಗುಣಮಟ್ಟದ ಕುರಿತು ಹಲವು ಅನುಮಾನಕ್ಕೆ ಕಾರಣವಾಗಿದ್ದು, ಕಟ್ಟಡದ ಗುಣಮಟ್ಟದ ಕುರಿತು ಸರಿಯಾದ ಪರಿಶೀಲನೆಯಾಗಲಿ ಮತ್ತು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು  ಕರವೇ ಅಧ್ಯಕ್ಷ ಶರಣಬಸಪ್ಪ ಎಲ್ಲೇರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.