ADVERTISEMENT

ಶಹಾಪುರ | ರಚನೆಯಾಗದ ಕಾಂಗ್ರೆಸ್ ಘಟಕ: ಅಸಮಧಾನದ ಹೊಗೆ

ಐದು ತಿಂಗಳು ಕಳೆದರೂ ನೇಮಕವಾಗದ ಪದಾಧಿಕಾರಿಗಳು

ಟಿ.ನಾಗೇಂದ್ರ
Published 22 ಸೆಪ್ಟೆಂಬರ್ 2025, 5:42 IST
Last Updated 22 ಸೆಪ್ಟೆಂಬರ್ 2025, 5:42 IST
ಶಿವಮಹಾಂತ ಸಾಹು ಚಂದಾಪುರ
ಶಿವಮಹಾಂತ ಸಾಹು ಚಂದಾಪುರ   

ಶಹಾಪುರ: ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಶಿವಮಹಾಂತ ಸಾಹು ಚಂದಾಪುರ ಹಾಗೂ ಕೆಂಭಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಬಸನಗೌಡ ಹೊಸಮನಿ ಯಾಳಗಿ ಐದು ತಿಂಗಳ ಕಳೆದರೂ, ಈವರೆಗೆ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ನೇಮಿಸುವಲ್ಲಿ ಮುಗ್ಗರಿಸಿದ್ದಾರೆ ಎಂಬ ಕೂಗು ಕಾಂಗ್ರೆಸ್ ಪಕ್ಷದಲ್ಲಿ ಕೇಳಿ ಬರುತ್ತಿದೆ.

ಅನೇಕ ವರ್ಷದಿಂದ ರಾಜಕೀಯ ಜೀವನ ಸವೆಸಿರುವ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಹಾಂತ ಸಾಹು ಚಂದಾಪುರ ಅವರು ಹಿಂದುಳಿದ ಕುರುಬ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದು, ಪಕ್ಷ ಸಂಘಟನೆಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬ ಸದುದ್ದೇಶದಿಂದ ನೇಮಕ ಮಾಡಿದೆ.

ಆದರೆ, ಅಧಿಕಾರ ಸ್ವೀಕರಿಸಿದ ನಂತರ ಒಂದು ದಿನವು ಗ್ರಾಮೀಣ ಪ್ರದೇಶದ ಕಾರ್ಯಕರ್ತರ ನಡುವೆ ಸಂಪರ್ಕದ ಕೊಂಡಿಯಾಗದೆ ಕೇವಲ ಸಚಿವರ ಕಾರ್ಯಕ್ರಮದಲ್ಲಿ ಹಿಂಬಾಲಕರಾಗಿ ತೆರಳುವುದರಲ್ಲಿ ಮಗ್ನರಾಗಿದ್ದಾರೆ ಎಂಬ ಆರೋಪವನ್ನು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಮಾಡುತ್ತಿದ್ದಾರೆ.

ADVERTISEMENT

ಬ್ಲಾಕ್ ಕಾಂಗ್ರೆಸ್ ಘಟಕದ ಪದಾಧಿಕಾರಿಗಳನ್ನು ನೇಮಿಸುವುದು ತುರ್ತು ಕೆಲಸವಾಗಬೇಕಾಗಿದೆ. ನಂತರ ಪಕ್ಷದ ಇನ್ನಿತರ ಘಟಕಗಳಾದ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕಾನೂನು ಘಟಕ, ಅಲ್ಪಸಂಖ್ಯಾತರ ಘಟಕ ಸೇರಿದಂತೆ ಹಲವಾರು ಘಟಕಗಳು ಪಕ್ಷದ ಸಂಘಟನೆಗೆ ಬೆನ್ನೆಲುಬಾಗಿ ನಿಲ್ಲಲಿವೆ. ಆದರೆ ಇಂದಿಗೂ ಯಾವುದೇ ಘಟಕ ರಚನೆ ಮಾಡಿಲ್ಲ ಎನ್ನುತ್ತಾರೆ ಮುಖಂಡರು.

ಈಗಾಗಲೇ ಹಳೆಯ ಘಟಕದ ಪದಾಧಿಕಾರಿಗಳನ್ನು ತೆಗೆದುಹಾಕಬೇಕೊ ಇಲ್ಲವೆ ಅದೇ ಘಟಕದ ಸದಸ್ಯರನ್ನು ಮುಂದುವರೆಸಬೇಕೊ ಎಂಬ ಗೊಂದಲ ಅಧ್ಯಕ್ಷರನ್ನು ನೆರಳಿನಂತೆ ಕಾಡುತ್ತಲಿದೆ. ಕೆಲ ತಿಂಗಳಲ್ಲಿ ಮತ್ತೆ ಗ್ರಾಮ ಪಂಚಾಯಿತಿ ಹಾಗೂ ಇನ್ನಿತರ ಚುನಾವಣೆಯ ಆಗಮಿಸಲಿವೆ. ಈಗಿನಿಂದಲೇ ತಾಲಿಮ್ ಶುರು ಮಾಡಿಕೊಳ್ಳಬೇಕು ಎನ್ನುತ್ತಾರೆ ಪಕ್ಷದ ಕೆಲ ಮುಖಂಡರು.

ತಾಲ್ಲೂಕು ಘಟಕದಲ್ಲಿ ಪದಾಧಿಕಾರಿಗಳ ಘಟಕ ನೇಮಿಸಿಲ್ಲ. ಪ್ರಚಾರ ಸಮಿತಿಗೆ ಮಾತ್ರ ನೇಮಿಸಿದೆ. ಅಕ್ಟೋಬರ್ ತಿಂಗಳಲ್ಲಿ ವಿವಿಧ ಏಳು ತಾಲ್ಲೂಕು ಘಟಕಗಳನ್ನು ರಚನೆ ಮಾಡಲಾಗುವುದು.
ಶಿವಮಹಾಂತ ಸಾಹು ಚಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಹಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.