ADVERTISEMENT

ಕೋರ್‌ ಗ್ರೀನ್‌ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರಿಗೆ ₹ 36.39 ಕೋಟಿ ಬಾಕಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 16:03 IST
Last Updated 8 ಜೂನ್ 2021, 16:03 IST
ಲಕ್ಷ್ಮೀಕಾಂತ ಪಾಟೀಲ
ಲಕ್ಷ್ಮೀಕಾಂತ ಪಾಟೀಲ   

ಯಾದಗಿರಿ: ಜಿಲ್ಲೆಯ ವಡಗೇರಾ ತಾಲ್ಲೂಕಿನ ಕೋರ್‌ ಗ್ರೀನ್‌ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರಿಗೆ ₹ 36.39 ಕೋಟಿ ಬಾಕಿ ಇದ್ದು, ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಪಾಟೀಲ ಮದ್ದರಕಿ ಆಗ್ರಹಿಸಿದರು.

ಕಳೆದ 8 ತಿಂಗಳಿಂದ ಯಾದಗಿರಿ, ಕಲಬುರ್ಗಿ, ಬೀದರ್‌, ವಿಜಯಪುರ ಜಿಲ್ಲೆಯ ನೂರಾರು ರೈತರಿಗೆ ಕಬ್ಬಿನ ಬಾಕಿ ವಾವತಿಸಿಲ್ಲ. ಬಾಕಿ ಬಿಲ್‌ಗಾಗಿ ಅಧಿಕಾರಿಗಳು ಅಲೆದಾಡಿಸಿ ರೈತರಿಗೆ ನಷ್ಟವನ್ನುಂಟು ಮಾಡಿದ್ದಾರೆ ಎಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

2020–21ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಯವರು 34.28 ಟನ್‌ ಕಬ್ಬು ನುರಿಸಿದ್ದಾರೆ. ಎಫ್‌ಆರ್‌ಪಿ ದರದಂತೆ ₹ 2,734 ಒಟ್ಟು ₹ 93.74 ಕೋಟಿ ಹಣ ಪಾವತಿಸಬೇಕಾಗಿತ್ತು. ₹ 57.35 ಕೋಟಿ ಮಾತ್ರ ಪಾವತಿಸಿದ್ದಾರೆ. ಇನ್ನೂಳಿದ ₹ 36.39 ಕೋಟಿ ಬಾಕಿ ಇದೆ. ಈ ಬಗ್ಗೆ ಕಾರ್ಖಾನೆಯ ಆಡಳಿತ ಮಂಡಳಿಯವರಿಗೆ ಕೇಳಿದರೆ ಸೂಕ್ತ ಉತ್ತರ ನೀಡುತ್ತಿಲ್ಲ. ಜಿಲ್ಲಾಡಳಿತದ ಮಾತಿಗೂ ಜಗ್ಗುತ್ತಿಲ್ಲ ಎಂದರು.

ADVERTISEMENT

ಎಫ್‌ಐಆರ್‌ ದಾಖಲು: ಸೋಮವಾರ ಜಿಲ್ಲಾಧಿಕಾರಿ ಬಳಿ ಬಾಕಿ ಪಾವತಿಸುವಂತೆ ಆಗ್ರಹ ಮಾಡಲಾಯಿತು. ಆದರೆ, ಕಾರ್ಖಾನೆಯವರು ಜಿಲ್ಲಾಧಿಕಾರಿ ಮಾತಿಗೆ ಬೆಲೆ ಕೊಡದ ಕಾರಣ ನಾವು ವಡಗೇರಾ ಪೊಲೀಸ್‌ ಠಾಣೆಯಲ್ಲಿ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಪ್ರಥಮ ವರ್ತಮಾನ ವರದಿ (ಎಫ್‌ಐಆರ್‌) ದಾಖಲು ಮಾಡಿದ್ದೇವೆ ಎಂದು ತಿಳಿಸಿದರು.

ಈ ಹಿಂದೆ ಹಲವಾರು ಬಾರಿ ಕಾರ್ಖಾನೆ ವಿರುದ್ಧ ಪ್ರತಿಭಟನೆ ಮಾಡಿದ್ದರೂ ಯಾವುದೇ ಬೆಲೆ ಕೊಟ್ಟಿಲ್ಲ. ಹೀಗಾಗಿ ಕೊನೆಯ ಅಸ್ತ್ರವಾಗಿ ಎಫ್‌ಐಆರ್‌ ದಾಖಲಿಸಿದ್ದೇವೆ. ಇದರ ಮೂಲಕವಾಗಿಯಾದರೂ ಕೋರ್ಟ್‌ ಮಧ್ಯೆ ಪ್ರವೇಶಿಸಿ ನಮಗೆ ನ್ಯಾಯ ಒದಗಿಸಿಕೊಡಲಿ ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಜಿಲ್ಲಾಧ್ಯಕ್ಷ ಮಹಾವೀರ ಲಿಂಗೇರಿ, ಮಾರುತಿ ಚೂರಿ ಸೇರಿದಂತೆ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.